Mysore MUDA Case | ಸಿಎಂ ಪತ್ನಿಗೆ ಇಡಿ ನೋಟಿಸ್‌; ಸಿಎಂಗೆ ಮತ್ತಷ್ಟು ಸಂಕಷ್ಟ

ಸಿಎಂ ವಿರುದ್ಧ ಕಾನೂನು ಕುಣಿಕೆ ಬಿಗಿಗೊಳಿಸುತ್ತಿರುವ ಇಡಿ, ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದೆ.;

Update: 2025-01-27 07:06 GMT
ಪಾರ್ವತಿ ಹಾಗೂ ಸಿದ್ದರಾಮಯ್ಯ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ )ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮದ ತನಿಖೆ ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ ಸೋಮವಾರ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಮುಡಾ ಪ್ರಕರಣದಲ್ಲಿ 142 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡ ಬೆನ್ನಲ್ಲೇ ಮತ್ತಷ್ಟು ಅಕ್ರಮ ನಡೆದಿರುವ ಸಾಧ್ಯತೆ ಹಿನ್ನೆಲೆಯಲ್ಲಿ 631 ನಿವೇಶನಗಳ ಮಾಹಿತಿ ಕೋರಿದೆ. ಈಗ ಸಿಎಂ ವಿರುದ್ಧ ಕಾನೂನು ಕುಣಿಕೆ ಬಿಗಿಗೊಳಿಸಲು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದೆ.  

ಪಿಎಂಎಲ್‌ಎ ಕಾಯ್ದೆಯಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಜ.28 ರಂದು ಬೆಳಿಗ್ಗೆ 11 ಕ್ಕೆ ಬೆಂಗಳೂರಿನ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ವಿ. ಮುರುಳಿಕಣ್ಣನ್‌ ಸಮನ್ಸ್‌ ಜಾರಿ ಮಾಡಿದ್ದಾರೆ.

ಸಿಎಂ ಪತ್ನಿ ಪಾರ್ವತಿಯವರಿಗೆ 50:50 ಅನುಪಾತದಡಿ ಪರಿಹಾರ ರೂಪವಾಗಿ ಮುಡಾ ವತಿಯಿಂದ 14 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಮುಡಾದಿಂದ ನಿವೇಶನ ಪಡೆಯುವಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರಭಾವ ಬೀರಿದ್ದಾರೆ ಎಂಬ ಆರೋಪ ಇಡಿ ತನಿಖೆಯ ವೇಳೆ ದೃಢಪಟ್ಟಿತ್ತು. ಈ ಹಿಂದೆ ಪಾರ್ವತಿ ಅವರ ಸೋದರ ಮಲ್ಲಿಕಾರ್ಜುನಸ್ವಾಮಿ ಹಾಗೂ ಜಮೀನು ಮಾಲೀಕ ಎನ್ನಲಾದ ದೇವರಾಜು ಅವರನ್ನು ಇಡಿ ವಿಚಾರಣೆ ನಡೆಸಿತ್ತು. ಆದರೆ, ವಿಚಾರಣೆ ವೇಳೆ ಸಮರ್ಪಕ ಉತ್ತರ ನೀಡಿರಲಿಲ್ಲ. ಹಾಗಾಗಿ ಸಿಎಂ ಪತ್ನಿ ಪಾರ್ವತಿ ಅವರನ್ನು ವಿಚಾರಣೆಗೆ ಒಳಪಡಿಸಲು ಇಡಿ ನಿರ್ಧರಿಸಿ, ನೋಟಿಸ್‌ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.  


ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ಆಪ್ತ ಸಚಿವ ಭೈರತಿ ಸುರೇಶ್‌ ಅವರಿಗೆ ಇಡಿ ಜಾರಿಮಾಡಿರುವ ನೋಟಿಸ್


 ಅರ್ಜಿ ಸಲ್ಲಿಸಿದ ಸಿಎಂ ಪತ್ನಿ, ಸಚಿವ

ಮುಡಾ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ಜಾರಿ ಮಾಡುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಹೈಕೋರ್ಟ್‌ನ ಧಾರವಾಡ ಪೀಠಕ್ಕೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದಾರೆ.  

ಇಡಿ ನೀಡಿರುವ ನೋಟಿಸ್‌ ಸಂಬಂಧ ತುರ್ತು ವಿಚಾರಣೆ ನಡೆಸುವಂತೆ ಸಿಎಂ ಪತ್ನಿ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ್ ಅವರು ಪೀಠಕ್ಕೆ ಮನವಿ ಮಾಡಿದರು. ಅರ್ಜಿ ವಿಚಾರಣೆಗೆ ಒಪ್ಪಿದ ನ್ಯಾ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಸೋಮವಾರದ ನಿಗದಿತ ಅರ್ಜಿಗಳ ವಿಚಾರಣೆ ಮುಗಿದ ಬಳಿಕ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯಾಗಿರುವ ನ್ಯಾಯಮೂರ್ತಿ ನಾಗಪ್ರಸನ್ನ ಅವರು ರೊಟೇಷನ್‌ ಆಧಾರದ ಮೇಲೆ ಧಾರವಾಡ ಪೀಠದಲ್ಲಿ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಧಾರವಾಡ ಪೀಠದಲ್ಲಿ ಕಾರ್ಯ ನಿರ್ವಹಿಸಿದ್ದು, ಒಂದೂವರೆ ತಿಂಗಳು ಧಾರವಾಡದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಆ ಬಳಿಕ ಬೆಂಗಳೂರು ಹೈಕೋರ್ಟ್‌ಗೆ ಮರಳಿದ್ದಾರೆ.

ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನೂ ಧಾರವಾಡ ಪೀಠದಲ್ಲೇ ವಿಚಾರಣೆ ನಡೆಸಿ, ಲೋಕಾಯುಕ್ತ ತನಿಖೆ ಮುಂದುವರಿಸಲು ಆದೇಶಿಸಲಾಗಿತ್ತು. 

ಈ ಮಧ್ಯೆ, ತಮ್ಮ ಪತ್ನಿ ಪಾರ್ವತಿಯವರಿಗೆ ಇಡಿ ನೋಟಿಸ್‌ ನೀಡಿರುವ ಕುರಿತು ಪ್ರತಿಕ್ರಿಯಿಸಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.

Tags:    

Similar News