ಲೋಕಾಯುಕ್ತ ಎಡಿಜಿಪಿಗೆ ಇಡಿ ಪತ್ರ | ವಿಚಾರಣೆ ಮೇಲೆ ಪ್ರಭಾವ ಬೀರುವ ದುರುದ್ದೇಶ: ಸಿಎಂ ಕಿಡಿ

ಜಾರಿ ನಿರ್ದೇಶನಾಲಯ ತನಿಖೆ ನಡೆಸಿದ ಮೇಲೆ ವರದಿಯನ್ನು ಲೋಕಾಯುಕ್ತಕ್ಕೆ ನೀಡಬಹುದಿತ್ತು. ಆದರೆ, ಲೋಕಾಯುಕ್ತ ಎಡಿಜಿಪಿಗೆ ಪತ್ರ ಬರೆದು, ಆ ಪತ್ರವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಸಿಎಂ ಆರೋಪಿಸಿದ್ದಾರೆ.

Update: 2024-12-04 11:46 GMT

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಇಡಿ ತನಿಖಾ ವರದಿ ಸೋರಿಕೆ ವಿಚಾರ ರಾಜಕೀಯ ಪಕ್ಷಗಳ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ.

ಮುಡಾ ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ 700 ಕೋಟಿ ಅಕ್ರಮ ನಡೆದಿದೆ ಎನ್ನಲಾದ ಇಡಿ ವರದಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಡಳಿತ ಪಕ್ಷದ ವಿರುದ್ಧ ಟೀಕೆಗೆ ಬಳಸಿಕೊಂಡಿದ್ದಾರೆ. ಅಂದರೆ, ವರದಿ ಸೋರಿಕೆಯು ರಾಜಕೀಯ ಪ್ರೇರಿತ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಅಲ್ಲದೇ ಜಾರಿ ನಿರ್ದೇಶನಾಲಯ ತನಿಖಾ ಕ್ರಮವೇ ಸರಿಯಿಲ್ಲ ಎಂದು ಆರೋಪಿಸಿದ್ದಾರೆ.

ಕೆ.ಆರ್.ಪೇಟೆ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಜಾರಿ ನಿರ್ದೇಶನಾಲಯ ತನಿಖೆ ನಡೆಸಿದ ಮೇಲೆ ವರದಿಯನ್ನು ಲೋಕಾಯುಕ್ತಕ್ಕೆ ನೀಡಬಹುದಿತ್ತು. ಆದರೆ, ಲೋಕಾಯುಕ್ತ ಎಡಿಜಿಪಿಗೆ ಪತ್ರ ಬರೆದು, ಆ ಪತ್ರವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿರುವುದು ಪೂರ್ವಗ್ರಹ ನಿಲುವಿಗೆ ಅಂಟಿಕೊಂಡಂತಿದೆ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ದೂರಿದ್ದಾರೆ.

ಹೈಕೋರ್ಟ್‌ನಲ್ಲಿ ಮುಡಾ ಪ್ರಕರಣ ಸಂಬಂಧದ ಅರ್ಜಿಯು ಗುರುವಾರ(ಡಿ.5) ವಿಚಾರಣೆಗೆ ಬರಲಿದೆ. ಇದರ ಹಿಂದಿನ ದಿನವೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಲೋಕಾಯುಕ್ತಕ್ಕೆ ಪತ್ರ ಬರೆದಿರುವುದು ನ್ಯಾಯಾಲಯದ ವಿಚಾರಣೆ ಮೇಲೆ ಪ್ರಭಾವ ಬೀರುವ ದುರುದ್ದೇಶ ಹೊಂದಿದೆ ಎಂದು ಹೇಳಿದ್ದಾರೆ.

ಡಿ. 24 ರೊಳಗೆ ತನಿಖೆಯ ವರದಿ ನೀಡುವಂತೆ ಹೈಕೋರ್ಟ್ ನ್ಯಾಯಪೀಠ, ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿದೆ. ಹೀಗಿರುವಾಗ ಇಡಿ ತನಿಖಾಧಿಕಾರಿಗಳು ಲೋಕಾಯುಕ್ತಕ್ಕೆ ತನಿಖೆಯ ಪ್ರಗತಿ ಕುರಿತು ಮಾಹಿತಿ ಹಂಚಿಕೊಳ್ಳಲು ಅವಕಾಶವಿತ್ತು. ಪತ್ರ ಬರೆಯುವ ಅವಶ್ಯಕತೆ ಇರಲಿಲ್ಲ. ಇದರ ಹಿಂದಿನ ಉದ್ದೇಶ ರಾಜ್ಯದ ಜನರಿಗೆ ಅರ್ಥವಾಗಿದೆ ಎಂದಿದ್ದಾರೆ.

ಲೋಕಾಯುಕ್ತ ಎಡಿಜಿಪಿಗೆ ಇಡಿ ಬರೆದಿದೆ ಎನ್ನಲಾದ ಪತ್ರದಲ್ಲಿ ಮುಡಾದ 1095 ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ 14 ಬದಲಿ ನಿವೇಶನಗಳ ಹಂಚಿಕೆ ವಿಚಾರದಲ್ಲಿಯೂ ಅಕ್ರಮ ನಡೆದಿರುವುದು ಸಾಬೀತಾಗಿದೆ ಎಂದು ಹೇಳಲಾಗಿತ್ತು.

ತನಿಖಾ ವರದಿಯೇ ಸುಳ್ಳು

ಮುಡಾ ಪ್ರಕರಣ ಸಂಬಂಧ ಲೋಕಾಯುಕ್ತರಿಗೆ ಇಡಿ ಬರೆದಿರುವ ಪತ್ರದಲ್ಲಿ ತನಿಖಾ ವರದಿ ಸುಳ್ಳು ಎಂದು ಶಾಸಕ ಹರೀಶ್‌ ಗೌಡ ಹೇಳಿದ್ದಾರೆ.

ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ತನಿಖಾ ಸಂಸ್ಥೆಗಳು ತಮ್ಮ ತನಿಖಾ ವರದಿಯನ್ನು ಎಲ್ಲಿಯೂ ಬಹಿರಂಗಪಡಿಸುವುದಿಲ್ಲ. ಇದು ಬಿಜೆಪಿಯವರು ಸೃಷ್ಟಿಸಿರುವ ಸುಳ್ಳು. ಅವರ ವರದಿ ನಿಜವಾಗಿದ್ದಲ್ಲಿ ಫೋರೆನ್ಸಿಕ್‌ ಆಧಾರದ ಸಮೇತ ಸಾಬೀತು ಮಾಡಿದರೆ ನಂಬುತ್ತೇವೆ ಹೇಳಿದ್ದಾರೆ.

Tags:    

Similar News