ಸಂಸದ ಡಾ.ಕೆ.ಸುಧಾಕರ್‌ ಹೆಸರು ಬರೆದಿಟ್ಟು ಜಿ.ಪಂ. ಕಾರು ಚಾಲಕ ಆತ್ಮಹತ್ಯೆ

ಮೃತ ಯುವಕ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಯ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಸಚಿವ ಡಾ.ಎಂ ಸಿ. ಸುಧಾಕರ್‌ ತಿಳಿಸಿದ್ದಾರೆ.;

Update: 2025-08-07 10:20 GMT

ಸಂಸದ ಡಾ. ಕೆ. ಸುಧಾಕರ್‌ ಹಾಗೂ ಮೃತ ಕಾರು ಚಾಲಕ

ಸಂಸದ ಡಾ.ಕೆ. ಸುಧಾಕರ್‌ ಹೆಸರು ಬರೆದಿಟ್ಟು ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಕಚೇರಿಯ ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 

ಸರ್ಕಾರಿ ಕೆಲಸ ಕೊಡಿಸುವುದಾಗಿ ಸಂಸದ ಸುಧಾಕರ್‌ ಆಪ್ತರಿಬ್ಬರು ವಂಚಿಸಿದ್ದಾರೆ ಎಂದು ಡೆತ್‌ನೋಟ್‌ ಬರೆದಿಟ್ಟು ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್‌ ಅವರು, ಪ್ರಕರಣ ಕುರಿತಂತೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೃತ ಯುವಕ ಬಾಬು(33) ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಯ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಸಂಸದ ಡಾ.ಕೆ. ಸುಧಾಕರ್‌ ಅವರ ಆಪ್ತರಾದ ಎನ್‌. ನಾಗೇಶ್‌ ಹಾಗೂ ಮಂಜುನಾಥ್‌ ಎಂಬುವರು ಮೃತ ಯುವಕನಿಗೆ ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ, ಹಣ ಪಡೆದುಕೊಂಡಿದ್ದರು. ಆದರೆ, ಹಣವೂ ಇಲ್ಲದೇ, ಉದ್ಯೋಗವೂ ಇಲ್ಲದೇ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಪೊಲೀಸರು ಸೂಕ್ತ ತನಿಖೆ ನಡೆಸಲಿದ್ದಾರೆ ಎಂದರು.  

ಡೆತ್‌ನೋಟ್‌ನಲ್ಲಿ ಸಂಸದ ಡಾ.ಕೆ. ಸುಧಾಕರ್‌ ಹೆಸರು ಪ್ರಸ್ತಾಪವಾಗಿದೆ. ಮೃತ ಯುವಕ ಹಲವಾರು ಬಾರಿ ಸಂಸದರ ಹೆಸರು ಹೇಳುತ್ತಿದ್ದ ಎಂಬುದು ಗೊತ್ತಾಗಿದ್ದು, ಯಾವುದೇ ಒತ್ತಡಕ್ಕೆ ಮಣಿಯದೆ ಪಾರದರ್ಶಕ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಡೆತ್‌ನೋಟ್‌ನಲ್ಲಿ ಏನಿದೆ?

"ಡಾ.ಕೆ. ಸುಧಾಕರ್‌ ಸಚಿವರಾಗಿದ್ದ ವೇಳೆ ಅವರ ಬೆಂಬಲಿಗರಾದ ನಾಗೇಶ್‌ ಹಾಗೂ ಮಂಜುನಾಥ್‌ ಸರ್ಕಾರಿ ಕೆಲಸ ಕೊಡಿಸುತ್ತೇವೆ ಎಂದು ಹೇಳಿ 40 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು.  ನಾನು ನನ್ನ ಬಳಿ ಇದ್ದ ಹಣದ ಜತೆಗೆ ಸಾಲ ಮಾಡಿ 25ಲಕ್ಷ ರೂ. ಹಣ ನೀಡಿದ್ದೆ. ಆದರೆ, ಕೆಲಸ ಮಾತ್ರ ಕೊಡಿಸಲಿಲ್ಲ" ಎಂದು ಮೃತ ಯುವಕ ಎಂ. ಬಾಬು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Tags:    

Similar News