ಶರಣಬಸವೇಶ್ವರ ಸಂಸ್ಥಾನದ ಡಾ. ಶರಣಬಸವಪ್ಪ ಅಪ್ಪ ಲಿಂಗೈಕ್ಯ

1983ರಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ, ಡಾ. ಅಪ್ಪ ಅವರು ಈ ಭಾಗವನ್ನು ಶೈಕ್ಷಣಿಕವಾಗಿ ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆ ಹೊಂದಿದ್ದರು.;

Update: 2025-08-14 17:59 GMT

ಕಲ್ಯಾಣ ಕರ್ನಾಟಕ ಭಾಗದಲ್ಲಿ ಜ್ಞಾನ ಮತ್ತು ಧರ್ಮದ ದಾಸೋಹದ ಮೂಲಕ ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿದ್ದ ಐತಿಹಾಸಿಕ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ, ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಶರಣಬಸವಪ್ಪ ಅಪ್ಪ (90) ಅವರು ಗುರುವಾರ ರಾತ್ರಿ 9. 23ಕ್ಕೆ ಲಿಂಗೈಕ್ಯರಾಗಿದ್ದಾರೆ.

ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಡಾ. ಅಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಸಂಜೆ ಅವರನ್ನು 'ಮಹಾಮನೆ' ನಿವಾಸಕ್ಕೆ ಕರೆತರಲಾಗಿದ್ದು, ಕೆಲವೇ ಗಂಟೆಗಳಲ್ಲಿ ಅವರು ಇಹಲೋಕ ತ್ಯಜಿಸಿದರು. ಅವರು ಪತ್ನಿ ದಾಕ್ಷಾಯಣಿ ಎಸ್. ಅಪ್ಪ, ಏಳು ಜನ ಪುತ್ರಿಯರು ಹಾಗೂ ಸಂಸ್ಥಾನದ ಉತ್ತರಾಧಿಕಾರಿ, 9ನೇ ಪೀಠಾಧಿಪತಿಯಾಗಿ ನಿಯುಕ್ತರಾಗಿರುವ ದೊಡ್ಡಪ್ಪ ಅಪ್ಪ ಅವರನ್ನು ಅಗಲಿದ್ದಾರೆ.

1983ರಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ, ಡಾ. ಅಪ್ಪ ಅವರು ಈ ಭಾಗವನ್ನು ಶೈಕ್ಷಣಿಕವಾಗಿ ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆ ಹೊಂದಿದ್ದರು. ಅವರ ದೂರದೃಷ್ಟಿ ಮತ್ತು ಅವಿರತ ಶ್ರಮದ ಫಲವಾಗಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಶರಣಬಸವೇಶ್ವರ ವಿಶ್ವವಿದ್ಯಾಲಯ, ಶರಣಬಸವೇಶ್ವರ ರೆಸಿಡೆನ್ಷಿಯಲ್ ಪಬ್ಲಿಕ್ ಸ್ಕೂಲ್, ಅಪ್ಪ ಪಬ್ಲಿಕ್ ಸ್ಕೂಲ್, ಗೋದುತಾಯಿ ಮಹಿಳಾ ಕಾಲೇಜು, ಎಂಜಿನಿಯರಿಂಗ್, ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜುಗಳಂತಹ ಪ್ರತಿಷ್ಠಿತ ಸಂಸ್ಥೆಗಳು ಸ್ಥಾಪನೆಯಾಗಿ, ಈ ಭಾಗದ ಶೈಕ್ಷಣಿಕ ಚಿತ್ರಣವನ್ನೇ ಬದಲಾಯಿಸಿದವು.

ತತ್ವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು, ಕಲಬುರಗಿಯಲ್ಲಿ ಸ್ವತಂತ್ರ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ವಿ.ವಿ. ಸ್ಥಾಪನೆಗೆ ಅಗತ್ಯವಾದ ಭೂಮಿ ಮತ್ತು ಸೌಕರ್ಯಗಳನ್ನು ಗುರುತಿಸಲು ಸರ್ಕಾರ ನೇಮಿಸಿದ್ದ ಸಮಿತಿಯ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದು ಅವರ ಸಂಘಟನಾ ಚಾತುರ್ಯಕ್ಕೆ ಸಾಕ್ಷಿಯಾಗಿದೆ. ಶಿಕ್ಷಣದ ಬೆಳಕನ್ನು ಕೇವಲ ನಗರಗಳಿಗೆ ಸೀಮಿತಗೊಳಿಸದೆ, ಯಾದಗಿರಿ, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ಹಿಂದುಳಿದ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳ ಜಾಲವನ್ನೇ ಸ್ಥಾಪಿಸಿ, ಜ್ಞಾನ ದಾಸೋಹವನ್ನು ವಿಸ್ತರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹೈದರಾಬಾದ್ ಕರ್ನಾಟಕ ಶಿಕ್ಷಣ ಸೊಸೈಟಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಡಾ. ಅಪ್ಪ ಅವರ ನಿಧನದಿಂದ, ಕಲ್ಯಾಣ ಕರ್ನಾಟಕವು ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಬೃಹತ್ ಶಕ್ತಿಯಾಗಿದ್ದ ಮಹಾನ್ ಚೇತನವೊಂದನ್ನು ಕಳೆದುಕೊಂಡಿದ್ದು, ತುಂಬಲಾರದ ನಷ್ಟವುಂಟಾಗಿದೆ.

Tags:    

Similar News