ವರದಕ್ಷಿಣೆಗಾಗಿ ಅಮಾನುಷ ಕೃತ್ಯ: ಮಗುವಿನ ಕಣ್ಣೆದುರೇ ತಾಯಿಗೆ ಬೆಂಕಿ ಹಚ್ಚಿ ಕೊಲೆ
ಈ ಅಮಾನುಷ ಕೃತ್ಯಕ್ಕೆ ಮಹಿಳೆಯ ಮಗು ಸಾಕ್ಷಿಯಾಗಿದೆ. ತಾನು ಕಂಡ ಭೀಕರ ದೃಶ್ಯವನ್ನು ವಿವರಿಸಿದ ಆ ಮಗು, "ನನ್ನ ಅಮ್ಮನ ಮೇಲೆ ಏನೋ ಸುರಿದು, ಆಮೇಲೆ ಕಪಾಳಕ್ಕೆ ಹೊಡೆದು ಲೈಟರ್‌ನಿಂದ ಬೆಂಕಿ ಹಚ್ಚಿಬಿಟ್ರು" ಎಂದು ಅಳುತ್ತಾ ಹೇಳಿದೆ.;
ವರದಕ್ಷಿಣೆಯ ಪಿಡುಗು ಮನುಷ್ಯತ್ವದ ಎಲ್ಲೆ ಮೀರಿ ನಡೆದುಕೊಂಡಿರುವ ಭೀಕರ ಘಟನೆಯೊಂದು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ವರದಕ್ಷಿಣೆಯಾಗಿ 36 ಲಕ್ಷ ರೂಪಾಯಿ ತರುವಂತೆ ಪೀಡಿಸುತ್ತಿದ್ದ ಪತಿ ಮತ್ತು ಅತ್ತೆ ಮನೆಯವರು, ಕೇವಲ ಆರು ವರ್ಷದ ಮಗ ಹಾಗೂ ಸಹೋದರಿಯ ಕಣ್ಣೆದುರೇ ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಈ ಘಟನೆಯ ದೃಶ್ಯಗಳನ್ನು ಒಳಗೊಂಡ ಎರಡು ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
ಈ ಅಮಾನುಷ ಕೃತ್ಯಕ್ಕೆ ಪ್ರತ್ಯಕ್ಷ ಸಾಕ್ಷಿಯಾದ ಮುಗ್ಧ ಮಗುವಿನ ಮಾತುಗಳು ಎಂಥವರನ್ನೂ ಕಲಕುವಂತಿವೆ. ತಾನು ಕಂಡ ಭೀಕರ ದೃಶ್ಯವನ್ನು ವಿವರಿಸಿದ ಆ ಮಗು, "ನನ್ನ ಅಮ್ಮನ ಮೇಲೆ ಏನೋ ಸುರಿದು, ಆಮೇಲೆ ಕಪಾಳಕ್ಕೆ ಹೊಡೆದು ಲೈಟರ್‌ನಿಂದ ಬೆಂಕಿ ಹಚ್ಚಿಬಿಟ್ರು" ಎಂದು ಅಳುತ್ತಾ ಹೇಳಿದೆ.
ಸಹೋದರಿಯ ಸಾಕ್ಷ್ಯ
ಈ ಘಟನೆ ಗುರುವಾರ ರಾತ್ರಿ ಗ್ರೇಟರ್ ನೋಯ್ಡಾದ ಕಸ್ನಾ ಪೊಲೀಸ್ ಠಾಣಾ ವ್ಯಾಪ್ತಿಯ ಸಿರ್ಸಾ ಗ್ರಾಮದಲ್ಲಿ ಸಂಭವಿಸಿದೆ. ಮೃತ ಮಹಿಳೆಯನ್ನು 30 ವರ್ಷದ ನಿಕ್ಕಿ ಎಂದು ಗುರುತಿಸಲಾಗಿದೆ. ಆಕೆಯ ಅಕ್ಕ ಕಾಂಚನ್ ಅವರೇ ತಮ್ಮ ಮೊಬೈಲ್‌ನಲ್ಲಿ ಈ ಪೈಶಾಚಿಕ ಕೃತ್ಯವನ್ನು ಚಿತ್ರೀಕರಿಸಿದ್ದಾರೆ. ವಿಪರ್ಯಾಸವೆಂದರೆ, ಕಾಂಚನ್ ಕೂಡಾ ನಿಕ್ಕಿಯ ಪತಿ ವಿಪಿನ್‌ನ ಸಹೋದರನನ್ನೇ ಮದುವೆಯಾಗಿದ್ದು, ಇಬ್ಬರೂ ಸಹೋದರಿಯರು ಒಂದೇ ಮನೆಗೆ ಸೊಸೆಯರಾಗಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಚನ್, "ಕಳೆದ ಕೆಲವು ದಿನಗಳಿಂದ 36 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ನನ್ನ ತಂಗಿಗೆ ಹಿಂಸೆ ನೀಡುತ್ತಿದ್ದರು. ಅದಕ್ಕೆ ಒಪ್ಪದಿದ್ದಾಗ ಈ ಕೊಲೆ ಮಾಡಿದ್ದಾರೆ" ಎಂದು ದುಃಖ ತೋಡಿಕೊಂಡಿದ್ದಾರೆ. "ಅವರು ನನ್ನ ತಂಗಿಯ ಕುತ್ತಿಗೆ ಮತ್ತು ತಲೆಗೆ ಹೊಡೆದರು. ನಂತರ ಅವಳ ಕೂದಲನ್ನು ಹಿಡಿದು ಮನೆಯಿಂದ ಹೊರಗೆ ಎಳೆದುಕೊಂಡು ಬಂದರು. ಆಕೆಯ ಮೇಲೆ ಬೆಂಕಿ ಹಚ್ಚುವಾಗ ನಾನೂ ಅಲ್ಲಿದ್ದೆ. ನನಗೆ ಏನೂ ಮಾಡಲು ಸಾಧ್ಯವಾಗಲಿಲ್ಲ" ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಗ್ರೇಟರ್ ನೋಯ್ಡಾದ ಹೆಚ್ಚುವರಿ ಡಿಸಿಪಿ ಸುಧೀರ್ ಕುಮಾರ್ ಅವರು ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. "ಆಗಸ್ಟ್ 21ರಂದು ಫೋರ್ಟಿಸ್ ಆಸ್ಪತ್ರೆಯಿಂದ ನಮಗೆ ಕರೆ ಬಂದಿತ್ತು. ತೀವ್ರ ಸುಟ್ಟ ಗಾಯಗಳಾದ ಮಹಿಳೆಯನ್ನು ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದರು. ಆದರೆ, ನಾವು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು" ಎಂದು ಹೇಳಿದ್ದಾರೆ.
ಸಹೋದರಿ ಕಾಂಚನ್ ನೀಡಿದ ದೂರಿನ ಆಧಾರದ ಮೇಲೆ, ಕಸ್ನಾ ಪೊಲೀಸ್ ಠಾಣೆಯಲ್ಲಿ ಪತಿ ವಿಪಿನ್ ಮತ್ತು ಆತನ ಕುಟುಂಬದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿ ವಿಪಿನ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ.