ಕೋಮು ಬಣ್ಣ ಬಳಿದು ರಾಜಕೀಯ ಮಾಡುವುದು ಕೊಲೆಯಷ್ಟೇ ಘೋರ: ನಟ ಕಿಶೋರ್‌

ನೇಹಾ ಕೊಲೆ ಘಟನೆಗೆ ಕೋಮು ಬಣ್ಣ ಬಳಿದು ಜನರಲ್ಲಿ ದ್ವೇಷ ಹೆಚ್ಚಿಸಿ ರಾಜಕೀಯ ಉದ್ದೇಶಕ್ಕೆ ಬಳಸುವುದು ಕೊಲೆಯಷ್ಟೇ ಘೋರ ಅಪರಾಧ ಎಂದು ಖ್ಯಾತ ನಟ ಕಿಶೋರ್‌ ಹೇಳಿದ್ದಾರೆ

Update: 2024-04-20 12:03 GMT
ನಟ ಕಿಶೋರ್‌
Click the Play button to listen to article

ನೇಹಾ ಹಿರೇಮಠ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಕಿಶೋರ್ ಪ್ರತಿಕ್ರಿಯಿಸಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಮಾಡಿದ್ದಾರೆ. "ಬಾಳಿ ಬದುಕಬೇಕಾದ ಜೀವ ನೇಹಾಗೆ ನಡೆದದ್ದು ನಿಜಕ್ಕೂ ಅಕ್ಷಮ್ಯ ಅಪರಾಧ. ಒಂದು ನಾಗರೀಕ ಸಮಾಜವಾಗಿ ಇದು ನಮ್ಮೆಲ್ಲರ ಸೋಲು" ಎಂದಿದ್ದಾರೆ.

"ಈಗಾಗಲೇ ಸಾಕ್ಷಿ ಸಮೇತ ಬಂಧಿತವಾಗಿರುವ ಅಪರಾಧಿಗೆ ಮತ್ಯಾರೂ ಈ ಥರದ ಕೃತ್ಯವೆಸಗದಂತೆ ತನಿಖೆ ಮತ್ತು ಅತಿ ಕಠಿಣ ಶಿಕ್ಷೆ ಆಗುವುದರ ಜೊತೆಗೆ ಮಹಿಳೆಯರ ವಿರುದ್ಧ ದಿನೇ ದಿನೇ ಹೆಚ್ಚುತ್ತಿರುವ ಅಪರಾಧಗಳು ಮತ್ತು ಅದರ ಮೂಲ ಕಾರಣಗಳನ್ನು ನಿಯಂತ್ರಿಸಲು ಜಾಗೃತಿ ಹೆಚ್ಚಿಸಲು ನಾವು ಮತ್ತು ಸರ್ಕಾರಗಳು ಸಾಧ್ಯ ಕ್ರಮಗಳೆಲ್ಲವನ್ನೂ ಕೈಗೊಳ್ಳಬೇಕು" ಎಂದು ಕಿಶೋರ್ ಆಗ್ರಹಿಸಿದ್ದಾರೆ.

"ದುರಂತವೆಂದರೆ ಯಾವುದೇ ಶಿಕ್ಷೆ ನೇಹಾಳನ್ನು ತಿರುಗಿ ತರಲಾಗದು. ಆದರೆ ನಮ್ಮ ಕೈಲಿ ಸಾಧ್ಯವಾಗುವುದು ಮತ್ಯಾರೂ ನೇಹಾಳಂತೆ ಬಲಿಯಾಗದಿರುವಂಥ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು. ಆದರೆ ಈ ನೋವಿನ ಕ್ಷಣದಲ್ಲೂ ಅದರಲ್ಲಿ ಹಿಂದೂ -ಮುಸ್ಲಿಂ ಮಾಡುವುದು ಎಷ್ಟು ಸರಿ? ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ಕೋಮಿನ ಮೇಲೆ ಅಪರಾಧ ಹೊರಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.

Full View

"ದಿನಕ್ಕೆ 78 ಕೊಲೆಗಳಾಗುವ, ಮಹಿಳೆಯರ ವಿರುದ್ಧ ದಿನಕ್ಕೆ 1224 ಅಪರಾಧಗಳಾಗುವ ನಾಡಿನಲ್ಲಿ ಎಷ್ಟು ಹಿಂದೂ ಎಷ್ಟು ಕ್ರೈಸ್ತ ಅಪರಾಧಿಗಳು ? ಹಾಗೆಂದರೆ ಆ ಧರ್ಮದ ನಾವೆಲ್ಲರೂ ಅಪರಾಧಿಗಳೇ? ಹಾಗೆ ನೋಡಿದರೆ ಎಷ್ಟು ಅಂತರ್ಧರ್ಮೀಯ ಜೋಡಿಗಳು ಅನ್ಯೊನ್ಯವಾಗಿ ಬಾಳುತ್ತಿಲ್ಲ? ಅದಕ್ಕೆ ಆ ಧರ್ಮಗಳೂ ಅದರ ಜನರೂ ಜವಾಬ್ದಾರಿಯೇ ? ಹೇಗೆ ? ಅಪರಾಧಿಗೆ ನ್ಯಾಯ ಕೊಡಿಸಲು ಶ್ರಮಿಸುವುದನ್ನು ವಿರೋಧ ಪಕ್ಷವಾಗಲೀ ಯಾರಾಗಲೀ ಮಾಡಿದರೆ ಒಪ್ಪಲೇಬೇಕು. ಅದು ಅವರ ಕರ್ತವ್ಯ. ಆದರೆ ಒಡೆದಾಳುವ ಈ ಧರ್ಮಾಂಧ ಜನ ನೇಹಾ ಸಾವಿಗೂ ಕೋಮು ಬಣ್ಣ ಬಳಿದು ಜನರಲ್ಲಿ ದ್ವೇಷ ಹೆಚ್ಚಿಸಿ ರಾಜಕೀಯ ಉದ್ದೇಶಕ್ಕೆ ಬಳಸುವುದು ಕೊಲೆಯಷ್ಟೇ ಘೋರ ಅಪರಾಧ" ಎಂದು ಕಿಶೋರ್ ಬರೆದುಕೊಂಡಿದ್ದಾರೆ.

Tags:    

Similar News