Victoria Hospital: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ದುರಂತ ತಪ್ಪಿಸಿದ ಡಾ. ದಿವ್ಯಾ ಸಮಯಪ್ರಜ್ಞೆ; 26 ರೋಗಿಗಳು ಸುರಕ್ಷಿತ

ಸೆಮಿನಾರ್ ಕೋಣೆಯ ಬಳಿಯಿರುವ ವಾಶ್ ರೂಮ್ ಬಳಸಲು ಡಾ.ದಿವ್ಯಾ ತೆರಳಿದಾಗ ಫ್ರಿಡ್ಜ್ ಬಳಿ ಸ್ವಲ್ಪ ಶಬ್ದ ಕೇಳಿಸಿದೆ. ಆರಂಭದಲ್ಲಿ ಅವರಿಗೆ ಬೆಂಕಿಯ ಯಾವುದೇ ಲಕ್ಷಣಗಳು ಕಾಣಲಿಲ್ಲ.;

Update: 2025-07-01 12:50 GMT

ಮಂಗಳವಾರ (ಜುಲೈ1ರಂದು) ಮುಂಜಾನೆ 3 ಗಂಟೆ ಸುಮಾರಿಗೆ ನಗರದ ವಿಕ್ಟೋರಿಯಾ ಆಸ್ಪತ್ರೆಯ ಬರ್ನ್ಸ್ ಬ್ಲಾಕ್‌ನ (MBCC) ಸೆಮಿನಾರ್ ಕೊಠಡಿಯಲ್ಲಿ ಸ್ವಿಚ್‌ಬೋರ್ಡ್‌ನ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಬಹುದಾಗಿದ್ದ ಭೀಕರ ಅಗ್ನಿ ದುರಂತವೊಂದು ನೈಟ್ ಡ್ಯೂಟಿಯಲ್ಲಿದ್ದ ಡಾ. ದಿವ್ಯಾ ಅವರ ಸಮಯಪ್ರಜ್ಞೆ ಮತ್ತು ಆಸ್ಪತ್ರೆ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಯಿಂದ ತಪ್ಪಿದಂತಾಗಿದೆ. ಅವರ ಎಚ್ಚರಿಕೆಯ ಗಂಟೆ ಇಲ್ಲದಿದ್ದರೆ, ಬೆಂಗಳೂರಿನ ಕಾಲ್ತುಳಿತಕ್ಕಿಂತಲೂ ದೊಡ್ಡ ದುರಂತ ನಡೆದು 30ಕ್ಕೂ ಹೆಚ್ಚು ಮಂದಿ ಬಲಿಯಾಗುವ ಸಾಧ್ಯತೆಯಿತ್ತು.

ದುರಂತ ತಪ್ಪಿಸಿದ ಡಾ. ದಿವ್ಯಾ ಅವರ ಸಮಯಪ್ರಜ್ಞೆ

ಸೆಮಿನಾರ್ ಕೋಣೆಯ ಬಳಿಯಿರುವ ವಾಶ್‌ರೂಂ ಬಳಸಲು ತೆರಳಿದಾಗ ಡಾ. ದಿವ್ಯಾ ಅವರಿಗೆ ಫ್ರಿಡ್ಜ್ ಬಳಿ ವಿಚಿತ್ರ ಶಬ್ದ ಕೇಳಿಸಿದೆ. ಆರಂಭದಲ್ಲಿ ಬೆಂಕಿಯ ಯಾವುದೇ ಲಕ್ಷಣಗಳು ಕಾಣಿಸದಿದ್ದರೂ, ಶಬ್ದ ನಿರಂತರವಾಗಿದ್ದರಿಂದ ಅನುಮಾನಗೊಂಡು ಅದರತ್ತ ತೆರಳಿದ್ದಾರೆ. ಸೆಮಿನಾರ್ ಕೋಣೆಯಲ್ಲಿ ಹುಡುಕಾಡಿದಾಗ ಸ್ವಿಚ್‌ಬೋರ್ಡ್‌ನಲ್ಲಿ ಬೆಂಕಿ ಇರುವುದು ಕಂಡುಬಂದಿದೆ. ತಕ್ಷಣ ಅವರು ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಎಚ್ಚರಿಕೆ ನೀಡಿ, ಮುಖ್ಯ ಸ್ವಿಚ್‌ ಅನ್ನು ಆಫ್‌ ಮಾಡಿದ್ದಾರೆ ಎಂದು ಹೆಸರೇಳಲು ಬಯಸದ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಬೆಂಕಿ ಅವಘಡ ಸಂಭವಿಸುವ ಸಾಧ್ಯತೆಯನ್ನು ಅರಿತ ಕೂಡಲೇ, ಮೊದಲ ಮಹಡಿಯಲ್ಲಿದ್ದ ರೋಗಿಗಳನ್ನು ತಕ್ಷಣ ನೆಲಮಹಡಿಗೆ, ನಂತರ ವಿಕ್ಟೋರಿಯಾ ಆಸ್ಪತ್ರೆಯ ಎಚ್‌ ಬ್ಲಾಕ್‌ಗೆ ಸ್ಥಳಾಂತರಿಸಲಾಯಿತು.

20 ನಿಮಿಷಗಳಲ್ಲಿ ರೋಗಿಗಳ ಯಶಸ್ವಿ ಸ್ಥಳಾಂತರ

ಬೆಳಗಿನ ಜಾವ 3. 30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಡಾ. ದಿವ್ಯಾ ಅವರ ಸಕಾಲಿಕ ಗಮನ ಮತ್ತು ಸಿಬ್ಬಂದಿಯ ತ್ವರಿತ ಸ್ಪಂದನೆಯಿಂದ 26 ರೋಗಿಗಳು ಮತ್ತು ಅವರ ಸಂಬಂಧಿಕರನ್ನು 100 ಮೀಟರ್ ದೂರದಲ್ಲಿದ್ದ ಎಚ್‌ ಬ್ಲಾಕ್‌ಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಯಿತು. ಈ ಸ್ಥಳಾಂತರ ಕಾರ್ಯ ಸುಮಾರು 20 ನಿಮಿಷಗಳಲ್ಲೇ ಪೂರ್ಣಗೊಂಡಿದ್ದು, ಐಸಿಯುನಲ್ಲಿದ್ದ ರೋಗಿಗಳು ಸೇರಿ ಎಲ್ಲರನ್ನೂ ಯಾವುದೇ ಪ್ರಾಣಹಾನಿಯಾಗದಂತೆ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಬೆಂಕಿಯನ್ನು ನಂದಿಸುವ ಪ್ರಯತ್ನದ ಜೊತೆಗೆ, ಡಾ. ದಿವ್ಯಾ ಹಿರಿಯ ಅಧಿಕಾರಿಗಳಿಗೆ, ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು.

ರಕ್ಷಣಾ ಕಾರ್ಯದ ವಿವರಣೆ ಮತ್ತು ಸವಾಲುಗಳು

ರಕ್ಷಣಾ ಕಾರ್ಯದ ಕುರಿತು ಮಾತನಾಡಿದ ಡಾ. ದಿವ್ಯಾ, "ಮುಂಜಾನೆಯ ಹೊತ್ತಲ್ಲಿ ಶೌಚಾಲಯಕ್ಕೆ ತೆರಳಲು ಹೋಗಿದ್ದರಿಂದ ಬೆಂಕಿಯ ಮುನ್ಸೂಚನೆ ಕಾಣಿಸಿತು. ಮೇನ್​ ಸ್ವಿಚ್ ಆಫ್ ಮಾಡಿ ಅಗ್ನಿಶಾಮಕ ಬಳಸಿ ಬೆಂಕಿ ನಂದಿಸಲು ಪ್ರಯತ್ನಿಸಿದೆ. ಆದರೆ ಬೆಂಕಿ ಪಕ್ಕದ ಸ್ಥಳಗಳಿಗೆ ಹರಡಿತು. ತಕ್ಷಣ 'ಕೋಡ್ ರೆಡ್' ಅನ್ನು ಸಕ್ರಿಯಗೊಳಿಸಲಾಯಿತು. ಮೊದಲ ಮಹಡಿಯಲ್ಲಿ 10 ರೋಗಿಗಳಿದ್ದರು, ಅವರಲ್ಲಿ ಐವರು ಐಸಿಯುನಲ್ಲಿ ಶಸ್ತ್ರಚಿಕಿತ್ಸೆಯ ನಂತರದ ವಾರ್ಡ್‌ನಲ್ಲಿದ್ದರು. ಸುಮಾರು 16 ರೋಗಿಗಳು ನೆಲ ಮಹಡಿಯಲ್ಲಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರನ್ನು ಸ್ಥಳಾಂತರಿಸಲಾಗಿದೆ" ಎಂದರು.

ಐಸಿಯುನಲ್ಲಿ ರೋಗಿಗಳನ್ನು ಸ್ಥಳಾಂತರಿಸುವುದು ಸವಾಲಿನ ಕೆಲಸವಾಗಿತ್ತು. ಅದೃಷ್ಟವಶಾತ್, ವೆಂಟಿಲೇಟರ್‌ಗಳಲ್ಲಿ ಯಾವುದೇ ರೋಗಿಗಳಿರಲಿಲ್ಲ. "ರೋಗಿಗಳು ವೆಂಟಿಲೇಟರ್‌ಗಳಲ್ಲಿದ್ದರೆ, ಅವರನ್ನು ಸ್ಥಳಾಂತರಿಸುವುದು ಹೆಚ್ಚು ಕಷ್ಟಕರವಾಗುತ್ತಿತ್ತು. ಸುಟ್ಟ ರೋಗಿಗಳನ್ನು ಬರಿ ಕೈಗಳಿಂದ ಮುಟ್ಟಬಾರದು. ರಕ್ಷಣಾ ತಂಡವು ಕಂಬಳಿಗಳನ್ನು ಬಳಸಿತು ಮತ್ತು ಎಚ್ಚರಿಕೆಯಿಂದ ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು" ಎಂದು ಅವರು ವಿವರಿಸಿದರು.

ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ಮತ್ತು ಪರ್ಯಾಯ ವ್ಯವಸ್ಥೆ

ಸುಟ್ಟಗಾಯಗಳ ವಿಭಾಗದ ಮುಖ್ಯಸ್ಥ ಡಾ. ಯೋಗಿಶ್ವರಪ್ಪ ಪಾಟೀಲ್, ಡಾ. ದಿವ್ಯಾ ಅವರ ಸಮಯಪ್ರಜ್ಞೆ ಮತ್ತು ಸಿಬ್ಬಂದಿಯ ತ್ವರಿತ ಕ್ರಮಗಳನ್ನು ಶ್ಲಾಘಿಸಿದರು. "ನರ್ಸಿಂಗ್ ಸಿಬ್ಬಂದಿ, ಗ್ರೂಪ್ ಡಿ ಉದ್ಯೋಗಿಗಳು, ಭದ್ರತಾ ಸಿಬ್ಬಂದಿ, ವೈದ್ಯರು ಮತ್ತು ಇತರೆ ಸಿಬ್ಬಂದಿ ಎಲ್ಲರೂ ಸಕ್ರಿಯವಾಗಿ ಕೆಲಸ ಮಾಡಿದರು. ಅವರ ಮೊದಲ ಆದ್ಯತೆ ರೋಗಿಗಳನ್ನು ಸ್ಥಳಾಂತರಿಸುವುದಾಗಿತ್ತು. ಆಮ್ಲಜನಕ ಹೊಂದಿರುವ ಟ್ರಾಲಿಗಳು, ವೀಲ್‌ಚೇರ್‌ಗಳು ಮತ್ತು ಬ್ಯಾಟರಿ ಚಾಲಿತ ವಾಹನಗಳನ್ನು ಬಳಸಿ ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು" ಎಂದು ಅವರು ತಿಳಿಸಿದರು.

ವಿಕ್ಟೋರಿಯಾ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕ ಡಾ. ರಮೇಶ್ ಕೃಷ್ಣ ಮಾತನಾಡಿ, "ಘಟನೆಯಲ್ಲಿ ಯಾವುದೇ ಸಾವುನೋವುಗಳು ಅಥವಾ ಗಾಯಗಳು ವರದಿಯಾಗಿಲ್ಲ. ನಮ್ಮ ಸಿಬ್ಬಂದಿ ಮತ್ತು ಅಗ್ನಿಶಾಮಕ ಇಲಾಖೆಯ ತ್ವರಿತ ಪ್ರತಿಕ್ರಿಯೆಗೆ ಧನ್ಯವಾದಗಳು. ಎಲ್ಲಾ ರೋಗಿಗಳು ಸುರಕ್ಷಿತವಾಗಿದ್ದಾರೆ ಮತ್ತು ಪರ್ಯಾಯ ಸೌಲಭ್ಯದಲ್ಲಿ ವೈದ್ಯಕೀಯ ಆರೈಕೆಯನ್ನು ಪಡೆಯುತ್ತಿದ್ದಾರೆ" ಎಂದು ಮಾಹಿತಿ ನೀಡಿದರು. "ಸುಟ್ಟಗಾಯಗಳ ವಾರ್ಡ್ ಪ್ರದೇಶವು ಪ್ರಸ್ತುತ ಪರಿಶೀಲನೆಯಲ್ಲಿದೆ. ಅಗತ್ಯ ದುರಸ್ತಿ ಮತ್ತು ಸುರಕ್ಷತಾ ಪರಿಶೀಲನೆಗಳ ನಂತರ ಸಾಮಾನ್ಯ ಸೇವೆಗಳು ಪುನರಾರಂಭಗೊಳ್ಳಲಿವೆ" ಎಂದು ಅವರು ಹೇಳಿದರು.

ರೋಗಿಯ ಸಂಬಂಧಿ ಕೃಷ್ಣ ಮಾತನಾಡಿ, "ನಸುಕಿನ ವೇಳೆ ಎಲ್ಲರೂ ನಿದ್ದೆಯಲ್ಲಿದ್ದಾಗ ಸಿಬ್ಬಂದಿ ನಮ್ಮನ್ನು ಸ್ಥಳಾಂತರಿಸಲು ಮುಂದಾದರು. ಆಗ ವಿಷಯ ತಿಳಿದಿರಲಿಲ್ಲ, ಆದರೆ ನಂತರ ದೊಡ್ಡ ದುರಂತ ತಪ್ಪಿರುವುದಕ್ಕೆ ಆಸ್ಪತ್ರೆ ಸಿಬ್ಬಂದಿಗೆ ಧನ್ಯವಾದಗಳು" ಎಂದು ನುಡಿದರು. 

Tags:    

Similar News