ಸೂಚನೆಗಳನ್ನು ಉಲ್ಲಂಘಿಸಿ ಬಹಿರಂಗ ಹೇಳಿಕೆ ಸಲ್ಲದು: ಡಿ.ಕೆ. ಶಿವಕುಮಾರ್‌

Update: 2024-07-01 14:35 GMT

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆಗಳ ಸಂಬಂಧ ಶಾಸಕರು, ಸಚಿವರು ನೀಡುತ್ತಿರುವ ಹೇಳಿಕೆಗಳಿಗೆ ಲಗಾಮು ಹಾಕಲು ರಾಜ್ಯ ಕಾಂಗ್ರೆಸ್‌ ನಿರ್ಧರಿಸಿದ್ದು, ಪಕ್ಷದಲ್ಲಿ ಶಿಸ್ತು ಮುಖ್ಯ. ಯಾರೂ ಸಹ ಸೂಚನೆಗಳನ್ನು ಉಲ್ಲಂಘಿಸಿ ಬಹಿರಂಗವಾಗಿ ಮಾತನಾಡಬಾರದು ಎಂದು ಸೂಚನೆ ನೀಡಿದೆ.

ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಪಕ್ಷದ ಪದಾಧಿಕಾರಿಗಳ ಸಭೆ ಬಳಿಕ ಮಾತನಾಡಿ ಪಕ್ಷ ಬಲವರ್ಧನೆ ಸಂಬಂಧ ನೀಡಿರುವ ಹಲವು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದರು. ಜತೆಗೆ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಪರಾಮರ್ಶೆ ನಡೆಸಿರುವ ರಾಜ್ಯ ಕಾಂಗ್ರೆಸ್‌ ಕಾರ್ಯಕರ್ತರ ಪಡೆಯನ್ನು ಬಲಗೊಳಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಮಂತ್ರಿಗಳು 15 ದಿನಗಳಿಗೆ ಒಮ್ಮೆ ಜಿಲ್ಲಾ ಕೇಂದ್ರ ಹಾಗೂ ತಿಂಗಳಿಗೆ ಒಮ್ಮೆ ಬೆಂಗಳೂರಿನಲ್ಲಿ ಮೂರರಿಂದ ನಾಲ್ಕು ಗಂಟೆಗಳ ಕಾಲ ಕಾರ್ಯಕರ್ತರನ್ನು ಭೇಟಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ಇಂತಹ ಸಭೆಗಳಿಗೆ ಕಚೇರಿಯಲ್ಲಿ ಇಬ್ಬರು ಮಂತ್ರಿಗಳ ಭೇಟಿಗೆ ಅವಕಾಶ ಕಲ್ಪಿಸಲಾಗುವುದು. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು  ಉದ್ಘಾಟನೆ ಮಾಡುತ್ತಾರೆ. ಶೀಘ್ರದಲ್ಲಿ ದಿನಾಂಕ ಪ್ರಕಟ ಮಾಡಲಾಗುವುದು. ನಂತರ ಪರಾಜಿತ ಅಭ್ಯರ್ಥಿಗಳ ಮತ್ತು ಇತರೇ ಪದಾಧಿಕಾರಿಗಳ ಸಭೆಗಳನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಪಕ್ಷದಲ್ಲಿ ಶಿಸ್ತು ಮುಖ್ಯ. ಯಾರೂ ಸಹ ಸೂಚನೆಗಳನ್ನು ಉಲ್ಲಂಘಿಸಿ ಬಹಿರಂಗವಾಗಿ ಮಾತನಾಡಬಾರದು ಎಂದು ಸೂಚನೆ ನೀಡಲಾಗಿದೆ. ಸ್ಥಾನ ಪಡೆದುಕೊಂಡಿರುವ ಪದಾಧಿಕಾರಿಗಳು ಜಿಲ್ಲಾ ಹಾಗೂ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡದೆ, ಸಭೆ ನಡೆಸದೆ ಇದ್ದರೆ ಕ್ರಮತೆಗೆದುಕೊಳ್ಳಲಾಗುವುದು. ಮೂರು ಸಭೆಗಳಿಗೆ ಗೈರುಹಾಜರಾದರೆ ವಿಶ್ರಾಂತಿ ನೀಡಲಾಗುವುದು. ಕೂಡಲೇ ಬೇರೆಯವರಿಗೆ ಅಧಿಕಾರ ನೀಡಲಾಗುವಂತಹ ವ್ಯವಸ್ಥೆ ಮಾಡಲಾಗಿದೆ.

ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಗೆ ಆರು ತಿಂಗಳು ಮುಂಚಿತವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು. ಇದರಿಂದ ಉತ್ತಮ ಸ್ಥಾನಗಳನ್ನು ಗೆಲ್ಲಲಾಯಿತು. ಇದೇ ಸಂಪ್ರದಾಯವನ್ನು ಮುಂದಿನ ದಿನಗಳಲ್ಲಿ ಮುಂದುವರೆಸಲಾಗುವುದು. ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ವಿಧಾನಸಭಾ ಉಪಚುನಾವಣೆಯನ್ನು ಎದುರಿಸಲು ಮೂರು ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಶಿಗ್ಗಾವಿ ಕ್ಷೇತ್ರದ ವರದಿ ನೀಡಲಾಗಿದೆ. ಜುಲೈ 3 ರ ನಂತರ ಸಂಡೂರಿನ ವರದಿ ಸಲ್ಲಿಸುತ್ತಾರೆ. ಸಚಿವರಾದ ಚಲುವರಾಯಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದ ಕುರಿತು ವರದಿ ನೀಡುತ್ತಾರೆ ಎಂದರು.

ಶಾಸಕರ ಮನೆಯಲ್ಲಿ ಪಕ್ಷದ ಸಭೆ ನಡೆಸುವಂತಿಲ್ಲ

ಪಕ್ಷದ ಸಭೆಗಳನ್ನು ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಶಾಸಕರ ಸಭೆಗಳನ್ನು ನಡೆಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಶಾಸಕರ ಮನೆಯಲ್ಲಿ ಸಭೆ ನಡೆಸಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಸಭೆಗೆ ಶಾಸಕರ ಬೆಂಬಲಿಗರ ಹೊರತಾಗಿ ಬೇರೆಯ ಪದಾಧಿಕಾರಿಗಳು ಬರುವುದಿಲ್ಲ ಎನ್ನುವ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗುವುದು. ಸಭೆಗಳನ್ನು ಪಕ್ಷದ ಕಚೇರಿ ಅಥವಾ ಕಲ್ಯಾಣ ಮಂಟಪದಲ್ಲಿ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ. 5 ವರ್ಷ ಹಾಗೂ ಎರಡು ಅವಧಿಗೆ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ನಡೆಸಿದವರು ಹಾಗೂ ಸಕ್ರಿಯವಾಗಿ ಇಲ್ಲದೆ ಇರುವವರನ್ನು ಬದಲಾವಣೆ ಮಾಡಲು ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಲಾಗಿದೆ.

ಸಾರಿಗೆ, ಕೊಳೆಗೇರಿ, ಸಹಕಾರಿ, ಅಪಾರ್ಟ್ಮೆಂಟ್ ನಿವಾಸಿಗಳ ಕ್ಷೇಮಾಭೀವೃದ್ಧಿ ವಿಭಾಗಗಳನ್ನು ಪ್ರಾರಂಭ ಮಾಡಲಾಗುವುದು. ಸಣ್ಣ, ಸಣ್ಣ ಸಮುದಾಯಗಳು ಒಂದಷ್ಟು ಮತಗಳನ್ನು ಹೊಂದಿರುತ್ತವೆ ಇವುಗಳನ್ನು ಒಟ್ಟುಗೂಡಿಸಲು ಸಮಿತಿಗಳು ನೇರವಾಗುತ್ತವೆ. ಜಿಲ್ಲಾ ಹಾಗೂ ಬ್ಲಾಕ್ ಮಟ್ಟದಲ್ಲಿ ಪ್ರತ್ಯೇಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು.

ಬೆಂಗಳೂರಿನ ಎಲ್ಲಾ ಕ್ಷೇತ್ರಗಳಲ್ಲಿ ಅಪಾರ್ಟ್ಮೆಂಟ್ ಗಳಿದ್ದು ಎರಡು ಸಾವಿರದಿಂದ ನಾಲ್ಕು ಲಕ್ಷದ ತನಕ ಮತಗಳಿವೆ. ಇಲ್ಲಿನ ನಿವಾಸಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವರ ಅನುಕೂಲಕ್ಕಾಗಿ ಈ ವಿಭಾಗ ರಚಿಸಲಾಗುತ್ತಿದೆ. ಈಗಾಗಲೇ ಪದವೀಧರ, ಶಿಕ್ಷಕರ ಮತ್ತು ಸಹಕಾರಿ ವಿಭಾಗಗಳಿಗೆ ಮರುಜೀವ ನೀಡುವ ಕೆಲಸ ಮಾಡಲಾಗಿದೆ. ಆಟೋ ಚಾಲಕರು ಸೇರಿದಂತೆ ಇತರೇ ವಾಹನ ಚಾಲಕರ ವಿಭಾಗ ಹಾಗೂ ಸ್ಲಂ ವಿಭಾಗವನ್ನು ಪ್ರಾರಂಭ ಮಾಡಲಾಗುತ್ತಿದೆ.

 ಗ್ಯಾರಂಟಿ ಸಮಿತಿ

ತಾಲ್ಲೂಕು, ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಚುನಾವಣೆ ವೇಳೆಯಲ್ಲಿ ತಾರಾತುರಿಯಲ್ಲಿ ನೇಮಕಾತಿಗಳಾಗಿವೆ. ನಾನು ವೈಯಕ್ತಿಕವಾಗಿ ಒಂದಷ್ಟು ನಿಯಮಾವಳಿಗಳನ್ನು ರೂಪಿಸಿದ್ದು ಅದರಂತೆ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ. ಸಮಿತಿಯಲ್ಲಿ ಯುವ ಕಾಂಗ್ರೆಸ್, ಅಲ್ಪಸಂಖ್ಯಾತ ಸೇರಿದಂತೆ ಎಲ್ಲಾ ವಿಭಾಗಗಳ ಸದಸ್ಯರಿಗೆ ಅವಕಾಶ ಮಾಡಿಕೊಡಬೇಕು ಎಂದು ಸೂಚನೆ ನೀಡಲಾಗಿದೆ. ಕಾರ್ಯಕರ್ತರಿಗೆ ಸಾಕಷ್ಟು ಸಮಿತಿಗಳಿಗೆ ನೇಮಕ ಮಾಡಲು ಅವಕಾಶವಿದ್ದು ಇಲ್ಲೆಲ್ಲಾ ಶೀಘ್ರ ನೇಮಕಾತಿ ಮಾಡಬೇಕು ಎಂದು ತಿಳಿಸಲಾಗಿದೆ.

 ಸ್ಥಾನ ಪಡೆದುಕೊಂಡಿರುವ ಪದಾಧಿಕಾರಿಗಳು ಜಿಲ್ಲಾ ಹಾಗೂ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡದೆ, ಸಭೆ ನಡೆಸದೆ ಇದ್ದರೆ ಕ್ರಮತೆಗೆದುಕೊಳ್ಳಲಾಗುವುದು. ಮೂರು ಸಭೆಗಳಿಗೆ ಗೈರುಹಾಜರಾದರೆ ವಿಶ್ರಾಂತಿ ನೀಡಲಾಗುವುದು. ಕೂಡಲೇ ಬೇರೆಯವರಿಗೆ ಅಧಿಕಾರ ನೀಡಲಾಗುವಂತಹ ವ್ಯವಸ್ಥೆ ಮಾಡಲಾಗಿದೆ.

  

Tags:    

Similar News