ನಾನು ಬಾಂಗ್ಲಾ ಪ್ರಧಾನಿ ಮೊಹ್ಮದ್‌ ಯೂನುಸ್‌ ಅಭಿಮಾನಿ ಎಂದ ಡಿಕೆಶಿ; ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಕೌಶಲ್ಯ ಶಿಕ್ಷಣ, ಆ ಕುರಿತಂತೆ ಹಲವು ನಿದರ್ಶನಗಳನ್ನು ಹೇಳುತ್ತಲೇ ತಾವು ಬಾಂಗ್ಲಾದೇಶದ ಪ್ರಧಾನಿ ಮೊಹ್ಮದ್‌ ಯೂನುಸ್‌ ಅವರ ಬಹುದೊಡ್ಡ ಅಭಿಮಾನಿ ಎಂದು ಡಿ.ಕೆ.ಶಿವಕುಮಾರ್‌ ಹೇಳಿಕೊಂಡರು.;

Update: 2025-04-17 09:45 GMT

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌

ನಾನು ಬಾಂಗ್ಲಾ ದೇಶದ ಪ್ರಧಾನಿ ಮೊಹ್ಮದ್‌ ಯೂನುಸ್‌ ಅವರ ಅಭಿಮಾನಿ ಎಂದು ಕಲಬುರ್ಗಿಯಲ್ಲಿ ಬುಧವಾರ  ನಡೆದ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಭಾಷಣದಲ್ಲಿ ತಿಳಿಸಿದ್ದರು. ಇದೀಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿದ್ದು, ನಿಮಗೆ ಅಭಿಮಾನಿಯಾಗಲು ಬೇರೆ ಯಾರೂ ಸಿಗಲಿಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಡಿಕೆ ಶಿವಕುಮಾರ್ ಹೇಳಿದ್ದೇನು?

ಬಾಂಗ್ಲಾ ದೇಶದ ಪ್ರಧಾನಿ ಮೊಹ್ಮದ್‌ ಯೂನುಸ್‌ ಅವರನ್ನು ನಾನು 20 ವರ್ಷ 25 ವರ್ಷಗಳವರೆಗೆ ನೋಡುತ್ತಿದ್ದೇನೆ. ಅವರು ಬಾಂಗ್ಲಾ ಕರಾವಳಿ ಪ್ರದೇಶದವರು. ಅವರು ತಳಮಟ್ಟದಲ್ಲಿ ಕೆಲಸ ಮಾಡುತ್ತಾರೆ, ಹಾಗಾಗಿ ಅವರಿಗೆ ನೋಬೆಲ್ ಪ್ರಶಸ್ತಿ ಬಂತು. ಆ ಪ್ರಶಸ್ತಿ ಸಿಕ್ಕಾಗ, ಏನು ನಿಮ್ಮ ಗುಟ್ಟು, ಏನು ನಿಮ್ಮ ವಿಚಾರಧಾರೆ ಎಂದು ಮಾಧ್ಯಮದವರು ಕೇಳಿದಾಗ, ಒಬ್ಬ ವ್ಯಕ್ತಿಗೆ ಒಂದು ಮೀನು ಕೊಟ್ಟರೆ ಅದು ಒಂದು ಹೊತ್ತಿನ ಊಟಕ್ಕೆ ಆಗುತ್ತೆ, ಆದರೆ ಅದೇ ವ್ಯಕ್ತಿಗೆ ಮೀನು ಹಿಡಿಯುವ ಕೆಲಸ ಕೊಟ್ಟರೆ ಅವನ ಜೀವನವೇ ಆಗುತ್ತೆ ಎಂದಿದ್ದರು. ಆ ಮಾತು ನನಗೆ ತುಂಬ ಹಿಡಿಸಿತು. ಅಂದಿನಿಂದ ನಾನು ಮೊಹ್ಮದ್‌ ಯುನಿಸ್‌ನ ದೊಡ್ಡ ಅಭಿಮಾನಿಯಾಗಿದ್ದೇನೆಂದು ಡಿ.ಕೆ.ಶಿವಕುಮಾರ್‌ ಹೇಳಿಕೊಂಡರು.

ಕೌಶಲ್ಯ ಶಿಕ್ಷಣ, ಆ ಕುರಿತಂತೆ ಹಲವು ನಿದರ್ಶನಗಳನ್ನು ಹೇಳುತ್ತಲೇ ತಾವು ಬಾಂಗ್ಲಾದೇಶದ ಪ್ರಧಾನಿ ಮೊಹ್ಮದ್‌ ಯೂನುಸ್‌ ಅವರ ಬಹುದೊಡ್ಡ ಅಭಿಮಾನಿ ಎಂದು ಡಿ.ಕೆ.ಶಿವಕುಮಾರ್‌ ಹೇಳಿಕೊಂಡರು. ಬದುಕಲ್ಲಿ ಕೌಶಲ್ಯ ಅದೆಷ್ಟು ಮುಖ್ಯ ಎಂಬುದಕ್ಕೆ ಬಾಂಗ್ಲಾ ಪ್ರಧಾನಿ ಮಾತುಗಳು ತಮಗೆ ಪ್ರೇರಣಾದಾಯಕ ಎಂದರು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ ಏಕೆಂದರೆ ಬಾಂಗ್ಲಾ ದೇಶದ ಪ್ರಧಾನಿ ಮೊಹ್ಮದ್‌ ಯೂನುಸ್‌ ಅಲ್ಲಿಯ ಅಲ್ಪಸಂಖ್ಯಾತ ಹಿಂದೂಗಳ ಮಾರಣ ಹೋಮಕ್ಕೆ ಕಾರಣರಾಗಿದ್ದಾರೆ ಎನ್ನುವ ಆರೋಪವಿದೆ.

ಆಗಸ್ಟ್ 5, 2024 ರಂದು, ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಚಳುವಳಿಯಿಂದಾಗಿ, ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಬೇಕಾಯಿತು. ಇದಾದ ನಂತರ ಅವರು ಭಾರತದಲ್ಲಿ ಆಶ್ರಯ ಪಡೆದರು. ಶೇಖ್ ಹಸೀನಾ ಅವರು ಬಾಂಗ್ಲಾ ದೇಶದಲ್ಲಿ ಇರುವುದು ಸುರಕ್ಷಿತ ಅಲ್ಲ ಎಂದು ಅವರಿಗೆ ಭಾರತದಲ್ಲಿ ಇರಲು ಅವಕಾಶ ಮಾಡಿಕೊಡಲಾಯಿತು.

ಆ ಬಳಿಕ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಯಿತು. ಎಷ್ಟೋ ದೇವಸ್ಥಾನಗಳನ್ನು ಒಡೆದುಹಾಕಲಾಯಿತು ಎನ್ನುವ ವರದಿಗಳು ಬಂದಿವೆ. ಇದೀಗ ಭಾರತದಲ್ಲಿನ ವಕ್ಫ್ ವಿಚಾರದಲ್ಲೂ ಅಲ್ಲಿಯ ಪ್ರಧಾನಿ ಮೊಹ್ಮದ್‌ ಯೂನುಸ್‌ ನೇತೃತ್ವದ ಸರ್ಕಾರ ಮೂಗು ತೂರಿಸುವ ಕೆಲಸ ಮಾಡುತ್ತಿದೆ. ಹಾಗಾಗಿ ಡಿ.ಕೆ. ಶಿವಕುಮಾರ್‌ ನಿಲುವು ನೆಟ್ಟಿಗರಿಂದ ತರಾಟೆಗೆ ಒಳಗಾಗಿದೆ.

Tags:    

Similar News