ಬೆಂಗಳೂರಿನ ರಸ್ತೆಗುಂಡಿ ಮುಚ್ಚಲು ಅಧಿಕಾರಿಗಳಿಗೆ 15 ದಿನ ಗಡುವು

Update: 2024-09-08 13:32 GMT

ಇನ್ನು ಹದಿನೈದು ದಿನಗಳ ಒಳಗ ಬೆಂಗಳೂರು ರಸ್ತೆಗಳಲ್ಲಿ ಗುಂಡಿ ಮುಚ್ಚಬೇಕು. ಈ ವಿಚಾರದಲ್ಲಿ ಬೇಜವಾಬ್ದಾರಿ ತೋರುವ ಅಧಿಕಾರಿಗಳನ್ನು ಅಮಾನತುಗೊಳಿಸಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಡಿಸಿಎಂ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ  ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ವೈಯಾಲಿಕಾವಲ್ ಬಿಬಿಎಂಪಿ ಕಚೇರಿಯಲ್ಲಿ ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳ ಸಭೆ ನಡೆಸಿ ಈ ಎಚ್ಚರಿಕೆ ನೀಡಿದರು.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ಇಂದು ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿ, ಕೊಟ್ಟಿರುವ 15 ದಿನಗಳ ಗಡುವಿನ ಒಳಗೆ ನಗರದ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ಆಗಬೇಕು ಎಂದು ನಿರ್ದೇಶನ ನೀಡಿದ್ದೇನೆ. ರಸ್ತೆ ಗುಂಡಿ ವಿಚಾರವಾಗಿ ಸಾರ್ವಜನಿಕರಿಂದ ಮತ್ತೆ ದೂರು ಬಂದರೆ ಇದಕ್ಕೆ ಜವಾಬ್ದಾರಿಯಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಎಷ್ಟು ಜನ ಅಮಾನತುಗೊಳ್ಳುತ್ತಾರೋ ಗೊತ್ತಿಲ್ಲ" ಎಂದೂ  ಎಚ್ಚರಿಸಿದರು.

"ಪಾಲಿಕೆಯ ಪ್ರತಿ ಅಧಿಕಾರಿಗಳು ಎಷ್ಟೇ ದೊಡ್ಡವರಿದ್ದರೂ ಪ್ರತಿಯೊಬ್ಬರೂ ರಸ್ತೆಯಲ್ಲಿ ನಿಂತು ಈ ಸಮಸ್ಯೆ ಬಗೆಹರಿಸಬೇಕು. ವಾರ್ಡ್ ಗಳಲ್ಲಿ ಅಧಿಕಾರಿಗಳೇ ಮುಂದೆ ನಿಂತು ಗುಂಡಿ ಮುಚ್ಚುವ ಕೆಲಸ ಮಾಡಿಸಬೇಕು ಎಂದು ನಿರ್ದೇಶನ ನೀಡಿದ್ದೇನೆ" ಎಂದು ಮಾಹಿತಿ ನೀಡಿದರು.

ಮಳೆ ಸಾಧ್ಯತೆ

"ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಬೀಳುವ ಸಾಧ್ಯತೆ ಹೆಚ್ಚಾಗಿದ್ದು, ನಾವು ಬಹಳ ಜಾಗರೂಕರಾಗಿ ಇರಬೇಕು. ಮಳೆ ಬೀಳುವ ಸಂದರ್ಭದಲ್ಲಿ ನೀರು ನಿಲ್ಲುವ ಹಾಗೂ ಮನೆಗಳಿಗೆ ನುಗ್ಗುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.  ಮಳೆಗೆ ಬೀಳಬಹುದಾದ ಮರಗಳನ್ನು ಮೇಲ್ಭಾಗದಲ್ಲಿ ಟ್ರಿಮ್ ಮಾಡಲು ಸೂಚನೆ ನೀಡಲಾಗಿದೆ" ಎಂದು ತಿಳಿಸಿದರು.

Tags:    

Similar News