ಆಶಾ ಕಾರ್ಯಕರ್ತೆಯರಿಗೆ‌ ಕೊಡುಗೆ ; ಸರ್ಕಾರದಿಂದ ಮೂರು ತಿಂಗಳ ಗೌರವಧನ ಬಿಡುಗಡೆ

ಸರ್ಕಾರವು ಬಿಡುಗಡೆ ಮಾಡಿರುವ ಅನುದಾನವನ್ನು ಯಾವ ಉದೇಶಕ್ಕಾಗಿ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳುವ ಷರತ್ತುಗೆ ಒಳಪಟ್ಟಿದ್ದು, ನ್ಯಾಯಸಮ್ಮತವಾಗಿ ಬಳಸಿಕೊಂಡಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಿದೆ.

Update: 2025-10-17 09:10 GMT

ಆಶಾ ಕಾರ್ಯಕರ್ತೆಯರು

Click the Play button to listen to article

ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ಮೂರು ತಿಂಗಳ ಗೌರವಧನದ ಅನುದಾನ ಬಿಡುಗಡೆ ಮಾಡಿ ದೀಪಾವಳಿ ಕೊಡುಗೆ ನೀಡಿದೆ. 

2025-26ನೇ ಸಾಲಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವಧನ ವಿತರಣೆ ಮಾಡಲು  271 ಕೋಟಿ ರೂ. ಅನುದಾನವನ್ನು ನಿಗದಿಪಡಿಸಿದ್ದು,  ಮೂರನೇ ತ್ರೈಮಾಸಿಕ ಅನುದಾನ ಬಿಡುಗಡೆ ಮಾಡುವಂತೆ ತಿಳಿಸಲಾಗಿದೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿರುವ ಆರ್ಥಿಕ ಇಲಾಖೆ, ಆಶಾ ಕಾರ್ಯಕರ್ತೆಯರಿಗೆ ಗೌರವಧನ ಪಾವತಿಸಲು 2025-26ನೇ ಸಾಲಿನ ಗೌರವಧನದ ಮೂರನೇ ತ್ರೈಮಾಸಿಕ ಅನುದಾನದ ಅಕ್ಟೋಬರ್ ನಿಂದ ಡಿಸೆಂಬರ್‌ವರೆಗಿನ 61.5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ಸರ್ಕಾರವು ಬಿಡುಗಡೆ ಮಾಡಿರುವ ಅನುದಾನವನ್ನು ಯಾವ ಉದೇಶಕ್ಕಾಗಿ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳುವ ಷರತ್ತುಗಳಿಗೊಳಪಟ್ಟಿದೆ. ನ್ಯಾಯಸಮ್ಮತವಾಗಿ ಬಳಸಿಕೊಂಡಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಈ ಅನುದಾನವನ್ನು ನಿಯಮಿತವಾಗಿ ಖಜಾನೆ ಮೂಲಕ ಮಾತ್ರ ವ್ಯವಹರಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಪವಿತ್ರ ಆದೇಶ ಹೊರಡಿಸಿದ್ದಾರೆ.

41 ಸಾವಿರ ಆಶಾ ಕಾರ್ಯಕರ್ತೆಯರಿಗೆ ಲಾಭ

ರಾಷ್ಟ್ರೀಯ ಆರೋಗ್ಯ ಸಂಪನ್ಮೂಲ ಕೇಂದ್ರದ ಪ್ರಕಾರ ಮೇ 2025ರ ಮಾಹಿತಿಯಂತೆ, ರಾಜ್ಯದಲ್ಲಿ 42,524 ಹುದ್ದೆಗಳು ಮಂಜೂರಾಗಿದ್ದು, 41 ಸಾವಿರ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಮೂರು ತಿಂಗಳ ಗೌರವಧನವನ್ನು ಬಿಡುಗಡೆ ಮಾಡಲಾಗಿದೆ. 

ಅಂಗನವಾಡಿ ಕಾರ್ಯಕರ್ತೆಯರಿಗೆ ಹೊಸ ಸೀರೆ 

2025-26ನೇ ಸಾಲಿನಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ತಲಾ ಎರಡು ಸೀರೆಗಳಂತೆ ಒಟ್ಟು 2,79,688 ಸೀರೆಗಳನ್ನು ಘಟಕ ವೆಚ್ಚ 500 ರೂ. ರಂತೆ ಕೆಟಿಪಿಪಿ ನಿಯಮಗಳ ಅನ್ವಯ ಖರೀದಿಸಲು ಐಸಿಡಿಎಸ್ ಯೋಜನೆಯ 2025-26ನೇ ಸಾಲಿನ ಅನುದಾನದಿಂದ 13.98 ಕೋಟಿ ರೂ. (ಕೇಂದ್ರದ ಪಾಲು 7.91 ಕೋಟಿ ರೂ. ಹಾಗೂ ರಾಜ್ಯದ ಪಾಲು 6.07 ಕೋಟಿ ರೂಪಾಯಿ) ವೆಚ್ಚವನ್ನು ಭರಿಸಲು ಅ.16ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ನಿರ್ಧರಿಸಿದೆ.

ರಾಜ್ಯದ 69,922 ಅಂಗನವಾಡಿ ಕೇಂದ್ರಗಳಿಗೆ 1,500 ರೂ. ಘಟಕ ವೆಚ್ಚದಲ್ಲಿ ಔಷಧ ಕಿಟ್‌ಗಳನ್ನು ಒದಗಿಸಲು, ಸಮಗ್ರ ಶಿಶು ಅಭಿವೃದ್ದಿ ಯೋಜನೆಯಡಿ ಒಟ್ಟು 10.49 ಕೋಟಿ ರೂ.(ಕೇಂದ್ರದ ಪಾಲು 5.93 ಕೋಟಿ ರೂ. ಮತ್ತು ರಾಜ್ಯ ಪಾಲು 4.56 ಕೋಟಿ ರೂಪಾಯಿ) ವೆಚ್ಚದಲ್ಲಿ ಕೆಟಿಪಿಪಿ ನಿಯಮಗಳ ಪ್ರಕಾರ ಇ-ಟೆಂಡರ್ ಮೂಲಕ ಖರೀದಿಸಲು ಸಚಿವ ಸಂಪುಟ ನಿರ್ಣಯಿಸಿದೆ.

Tags:    

Similar News