ಆರ್‌ಎಸ್‌ಎಸ್ ಚಟುವಟಿಕೆ ನಿಷೇಧದ ಬಗ್ಗೆ ಸಂಪುಟದಲ್ಲಿ ಚರ್ಚೆ ಸಾಧ್ಯತೆ: ಗೃಹ ಸಚಿವ ಜಿ. ಪರಮೇಶ್ವರ್
ಯಾವುದೇ ಧಾರ್ಮಿಕ ಸಂಘ ಸಂಸ್ಥೆಗಳು ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಕಾರ್ಯಕ್ರಮ ಮಾಡಿದರೂ ಸರ್ಕಾರದ ಅನುಮತಿ ಪಡೆಯಬೇಕು ಎಂಬ ನಿಯಮ ಬಹಳ ಹಿಂದಿನಿಂದಲೂ ಇದೆ ಎಂದು ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ಗೃಹ ಸಚಿವ ಡಾ.ಜಿ ಪರಮೇಶ್ವರ್
ಸರ್ಕಾರಿ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಚಟುವಟಿಕೆ ನಿಷೇಧಿಸುವ ಕುರಿತು ಸಚಿವ ಸಂಪುಟದ ಅಜೆಂಡಾದಲ್ಲಿ ಇಲ್ಲ. ಹೆಚ್ಚುವರಿ ಅಜೆಂಡಾದಲ್ಲಿ ಈ ವಿಷಯವಿದ್ದರೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದರು.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿ ಸಚಿವ ಸಂಪುಟದಲ್ಲಿ ಸಹಜವಾಗಿ ಹೆಚ್ಚುವರಿ ಅಜೆಂಡಾ ಇರುತ್ತದೆ. ಅದರಲ್ಲಿ ಏನಾದರೂ ಆರ್‌ಎಸ್‌ಎಸ್ ಬಗ್ಗೆ ಇದ್ದರೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು. ಈ ಕುರಿತು ಗೃಹ ಇಲಾಖೆಯಿಂದಲೂ ಅಭಿಪ್ರಾಯ ಪಡೆಯಲಾಗಿದೆ ಎಂದರು.
ಯಾವುದೇ ಧಾರ್ಮಿಕ ಸಂಘ ಸಂಸ್ಥೆಗಳು ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಕಾರ್ಯಕ್ರಮ ಮಾಡಿದರೂ ಸರ್ಕಾರದ ಅನುಮತಿ ಪಡೆಯಬೇಕು ಎಂಬ ನಿಯಮ ಬಹಳ ಹಿಂದಿನಿಂದಲೂ ಇದೆ. ಒಂದೇ ಸ್ಥಳದಲ್ಲಿ ವಿವಿಧ ಸಂಘಟನೆಗಳು ಕಾರ್ಯಕ್ರಮ ಮಾಡಲು ಒಂದೇ ಬಾರಿ ಅನುಮತಿ ಕೇಳುತ್ತಾರೆ. ಆದರೆ ಪೊಲೀಸ್ ಇಲಾಖೆ ಯಾರಿಗಾದರು ಒಬ್ಬರಿಗೆ ಮಾತ್ರ ಅನುಮತಿ ನೀಡುತ್ತಾರೆ. ಇಲ್ಲವೇ ಯಾರಿಗೂ ನೀಡುವುದಿಲ್ಲ ಎಂದು ಹೇಳಿದರು.
ಬೆದರಿಕೆ ಕರೆಗಳ ತನಿಖೆ
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಯಾರು ಬೆದರಿಕೆ ಹಾಕಿದ್ದಾರೆ, ಎಲ್ಲಿಂದ ಕರೆಗಳು ಬರುತ್ತಿವೆ ಎಂಬುದನ್ನು ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಇತ್ತೀಚೆಗೆ ಹೇಳಿದ್ದರು.
ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಿಸುವ ವಿಚಾರವಾಗಿ ಸಚಿವರು ಅಭಿಪ್ರಾಯ ಹೇಳಿರಬಹುದು, ಆದರೆ, ಸರ್ಕಾರದ ತೀರ್ಮಾನವಲ್ಲ. ಅಭಿಪ್ರಾಯ ವ್ಯಕ್ತಪಡಿಸಿದ ಮಾತ್ರಕ್ಕೆ ಬೆದರಿಕೆ ಹಾಕುವುದು ಸರಿಯಲ್ಲ. ಎಲ್ಲವನ್ನು ಪರಿಶೀಲನೆ ಮಾಡಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ಧರು. ಬೆದರಿಕೆ ಕರೆಗಳನ್ನು ಪತ್ತೆ ಹಚ್ಚುವುದು ಕೆಲ ಸಂದರ್ಭದಲ್ಲಿ ಕಷ್ಟ ಆಗಲಿದೆ, ಆದರೂ ಅದನ್ನು ಮಾಡಲೇಬೇಕಾಗುತ್ತದೆ ಎಂದು ತಿಳಿಸಿದ್ದರು.
ಏನಿದು ಆರ್‌ಎಸ್‌ಎಸ್ ವಿವಾದ?
ಶಾಲೆಗಳು, ಮೈದಾನಗಳು, ಮುಜರಾಯಿ ಇಲಾಖೆ ದೇವಸ್ಥಾನ ಅಥವಾ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸಂಘಟನೆಯು ಶಾಖೆ, ಸಾಂಘಿಕ್ ಅಥವಾ ಬೈಠಕ್‌ಗಳ ಹೆಸರಿನಲ್ಲಿ ಯಾವುದೇ ಚಟುವಟಿಕೆ ನಡೆಸುವ ಬಗ್ಗೆ ನಿಷೇಧ ಹೇರಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನಡಾವಳಿಯೊಂದನ್ನು ಕಳುಹಿಸಿದ್ದರು. ಈ ಬಗ್ಗೆ ಪರಿಶೀಲಿಸಿ ಕೂಡಲೇ ಅಗತ್ಯ ಕ್ರಮ ಜರುಗಿಸಲು ಸಿದ್ದರಾಮಯ್ಯ ಮುಖ್ಯ ಕಾರ್ಯದರ್ಶಿಗೆ ಮುಚ್ಚಳಿಕೆ ಬರೆದು ಸೂಚಿಸಿದ್ದರು.