ಆಸ್ಪತ್ರೆಯಿಂದ ಡಿಸ್‌ಚಾರ್ಜ್‌: ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ ಖಾತೆಯಲ್ಲಿ “ನನ್ನ ಆರೋಗ್ಯಕ್ಕಾಗಿ ಶುಭ ಹಾರೈಸಿದ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಮತ್ತು ಬೆಂಬಲಿಗರಿಗೆ ಹೃತ್ಪೂರ್ವಕ ಧನ್ಯವಾದಗಳು. ನಾನು ಶೀಘ್ರದಲ್ಲೇ ನನ್ನ ಕೆಲಸ ಕಾರ್ಯಗಳನ್ನು ಪ್ರಾರಂಭಿಸುತ್ತೇನೆ” ಎಂದು ಪೋಸ್ಟ್‌ ಮಾಡಿದ್ದಾರೆ.

Update: 2025-10-03 06:19 GMT

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ

ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಪೇಸ್ ಮೇಕರ್ ಶಸ್ತ್ರಚಿಕಿತ್ಸೆಗೆ ಒಳಗಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಮಂಗಳವಾರ ರಾತ್ರಿ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಖರ್ಗೆ ಅವರಿಗೆ ವೈದ್ಯರು ಪೇಸ್‌ ಮೇಕರ್‌ ಶಸ್ತ್ರಚಿಕಿತ್ಸೆ ಮಾಡಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಅವರ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಖರ್ಗೆ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಶೀಘ್ರದಲ್ಲೇ ಕರ್ತವ್ಯಕ್ಕೆ ಮರಳಲಿದ್ದಾರೆ ಎಂದು ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ಆರೋಗ್ಯವಾಗಿದ್ದಾರೆ. ನಿಮ್ಮೆಲ್ಲರ ಶುಭ ಹಾರೈಕೆ, ಬೆಂಬಲಕ್ಕೆ ಧನ್ಯವಾದಗಳು. ಶೀಘ್ರವೇ ಅವರು ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಿದೆ.

ಈ ಮಧ್ಯೆ, ಮಲ್ಲಿಕಾರ್ಜುನ ಖರ್ಗೆ ಕೂಡ ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ ಖಾತೆಯಲ್ಲಿ “ನನ್ನ ಆರೋಗ್ಯಕ್ಕಾಗಿ ಶುಭ ಹಾರೈಸಿದ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಮತ್ತು ಬೆಂಬಲಿಗರಿಗೆ ಹೃತ್ಪೂರ್ವಕ ಧನ್ಯವಾದಗಳು. ನಾನು ಶೀಘ್ರದಲ್ಲೇ ನನ್ನ ಕೆಲಸ ಕಾರ್ಯಗಳನ್ನು ಪ್ರಾರಂಭಿಸುತ್ತೇನೆ” ಎಂದು ಪೋಸ್ಟ್‌ ಮಾಡಿದ್ದಾರೆ. 

ಖರ್ಗೆ ಅವರಿಗೆ ಏನಾಗಿತ್ತು? 

ಉಸಿರಾಟದ ಸಮಸ್ಯೆ ಕಂಡು ಬಂದ ಕಾರಣ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಂಗಳವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದಲ್ಲಿ ಅಸಹಜತೆ ಕಂಡುಬಂದ ಕಾರಣ ವೈದ್ಯರ ಸಲಹೆ ಮೇರೆಗೆ ಪೇಸ್‌ ಮೇಕರ್‌ ಅಳವಡಿಸಲು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ, ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅವರ ಆರೋಗ್ಯ ಸ್ಥಿರವಾಗಿದೆ. ಎರಡು ಮೂರು ದಿನಗಳ ವಿಶ್ರಾಂತಿ ಬಳಿಕ ಅವರು ಕೆಲಸ ಕಾರ್ಯಗಳಿಗೆ ಹಾಜರಾಗಲಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವಾರು ನಾಯಕರು ಆಸ್ಪತ್ರೆಗೆ ಭೇಟಿ ನೀಡಿ, ಖರ್ಗೆ ಅವರ ಆರೋಗ್ಯ ವಿಚಾರಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ನಾಯಕರೂ ಕೂಡ ದೂರವಾಣಿ ಮೂಲಕ ಶೀಘ್ರ ಚೇತರಿಕೆ ಹಾರೈಸಿದ್ದರು.

Tags:    

Similar News