ಹಳೆ ಟ್ಯಾಂಕರ್ಗೆ ಪೇಂಟ್ ಹೊಡೆದು ಶುದ್ಧ ನೀರಿನ
ಜನಪರ ಯೋಜನೆ ಎಂಬ ಮಂತ್ರ ಜಪಿಸುತ್ತಲೇ, ಸರ್ಕಾರ ನಿಜವಾದ ಜನಪರತೆಯಿಂದ ದೂರವಾಗಿ, ಟ್ಯಾಂಕರ್‌ಗಳ ಮೇಲ್ಮೈ ಬಣ್ಣವನ್ನು ಬದಲಾಯಿಸುವ ಮೂಲಕ ಜನರ ಆರೋಗ್ಯಕ್ಕೆ ಬಣ್ಣದ ಲೇಪನವನ್ನು ಹಾಕುತ್ತಿದೆ.;
ಛಲವಾದಿ ನಾರಾಯಣಸ್ವಾಮಿ
ಮನೆ ಬಾಗಿಲಿಗೆ ಶುದ್ಧ ನೀರನ್ನು ತಲುಪಿಸುವ ಹೆಸರಿನಲ್ಲಿ ತುಕ್ಕು ಹಿಡಿದ ಹಳೆಯ ಟ್ಯಾಂಕರ್‌ಗಳಿಗೆ ಬಣ್ಣ ಬಳಿದು ನವೀಕರಿಸಿದಂತೆ ತೋರಿಸಿ, 'ಸಂಚಾರಿ ಕಾವೇರಿ' ಎಂಬ ಯೋಜನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಆರಂಭಿಸಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಜನಪರ ಯೋಜನೆ ಎಂಬ ಮಂತ್ರ ಜಪಿಸುತ್ತಲೇ, ಸರ್ಕಾರ ನಿಜವಾದ ಜನಪರತೆಯಿಂದ ದೂರವಾಗಿದೆ. ಟ್ಯಾಂಕರ್‌ಗಳ ಮೇಲ್ಮೈ ಬಣ್ಣವನ್ನು ಬದಲಾಯಿಸಿ ಮೂಲಕ ಜನರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿದೆ. ಈ ಯೋಜನೆಯ ರೂವಾರಿ ಮಂತ್ರಿಗಳ ಚಿಂತನೆಗೂ ತುಕ್ಕು ಹಿಡಿದಿದೆ ಎಂಬುದು ಸ್ಪಷ್ಟ ಎಂದು ಅವರು ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಈ ಯೋಜನೆಯನ್ನು 'ಮನೆ ಬಾಗಿಲಿಗೆ ಶುದ್ಧ ನೀರನ್ನು ತಲುಪಿಸುವ' ಯೋಜನೆ ಎಂದು ಹೇಳುವ ಬದಲಿಗೆ 'ತುಕ್ಕು ಹಿಡಿದ ಟ್ಯಾಂಕರ್‌ಗಳಲ್ಲಿ ಮನೆ ಬಾಗಿಲಿಗೆ ಅಶುದ್ಧ ನೀರನ್ನು ತಲುಪಿಸುವ' ಯೋಜನೆ ಎಂದು ಹೇಳುವುದು ಸೂಕ್ತ. ಅದಲ್ಲದೆ ಟ್ಯಾಂಕರ್‌ಗಳ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರವನ್ನು ಊಹಿಸಲು ಅಸಾಧ್ಯ ಮತ್ತು ಶುದ್ಧವಾದ ಟ್ಯಾಂಕರ್‌ಗಳಲ್ಲಿ ಶುದ್ಧವಾದ ನೀರನ್ನು ಕಳುಹಿಸಬೇಕಾದ ಇವರು ಅಶುದ್ಧವಾದ ಟ್ಯಾಂಕರ್ ಗಳಲ್ಲೂ ಇವರ ಜಾಹಿರಾತನ್ನು ಶುದ್ಧವಾಗಿ ಹಾಕಿಕೊಂಡಿರುವುದು ಹಾಸ್ಯಾಸ್ಪದ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ತುಕ್ಕು ಹಿಡಿದ ಟ್ಯಾಂಕರ್‌ಗಳಿಗೆ ಬಣ್ಣ ಬಳಿದು ಅವುಗಳಲ್ಲಿ ಬಿ.ಐ.ಎಸ್ ಪ್ರಮಾಣಿತ ನೀರನ್ನು ಪೂರೈಸಲಾಗುತ್ತಿದೆ ಎಂಬ ನಾಟಕವನ್ನು ಜನರು ನಂಬಲಾರರು. ವಿಧಾನಸೌಧದ ಆವರಣದಲ್ಲೇ ಇಂತಹ ತುಕ್ಕು ಹಿಡಿದ ಟ್ಯಾಂಕರ್‌ಗಳನ್ನು ಪ್ರದರ್ಶಿಸಿದ್ದು, ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಯ ನಿಲುವನ್ನು ಸ್ಪಷ್ಟಪಡಿಸುತ್ತದೆ. ಈ ಯೋಜನೆಯ ಟ್ಯಾಂಕರ್‌ಗಳಿಗೆ ಮಾತ್ರ ತುಕ್ಕು ಹಿಡಿದಿಲ್ಲ, ಯೋಜನೆ ರೂಪಿಸುವ ಕಲ್ಪನೆಗೂ, ಜವಾಬ್ದಾರಿ ನಿಯೋಜನೆಗೂ, ಸಿದ್ದರಾಮಯ್ಯ ಸರ್ಕಾರದ ಸಾರ್ವಜನಿಕ ಸೇವೆಯ ಮಾನವೀಯ ದೃಷ್ಟಿಕೋನಕ್ಕೂ ತುಕ್ಕು ಹಿಡಿದಿದೆ ಎಂದು ಅವರು ಟೀಕಿಸಿದ್ದಾರೆ.
ಸ್ವಚ್ಛತೆ, ಸುರಕ್ಷತೆ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಬೇಕಾದ ಸರ್ಕಾರ, ಭ್ರಷ್ಟಾಚಾರದಲ್ಲಿ ಮುಳುಗಿ ಸಾರ್ವಜನಿಕರ ಜೀವನಕ್ಕೆ ಗ್ಯಾರಂಟಿ ಇಲ್ಲದಂತೆ ಮಾಡಿದೆ ಎಂದು ತಿಳಿಸಿದ್ದಾರೆ.