ಐಎಂಎ ಹಗರಣ | ನಿಷ್ಪಕ್ಷಪಾತ ತನಿಖೆ ನಡೆಸಲು ಸಿಬಿಐಗೆ ನಿರ್ದೇಶಿಸಿ: ಸಿಟಿಜನ್ ರೈಟ್ಸ್ ಫೌಂಡೇಷನ್
ರಾಜ್ಯದ ನೂರಾರು ಜನರಿಗೆ ಕೋಟ್ಯಂತರ ರೂ. ವಂಚನೆ ಮಾಡಿರುವ ಐಎಂಎ (ಐ ಮಾನಿಟರಿ ಅಡ್ವೈಸರಿ) ಹಗರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸುವಂತೆ ಸಿಬಿಐ ಸೇರಿದಂತೆ ಎಲ್ಲ ತನಿಖಾ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಿಟಿಜನ್ ರೈಟ್ಸ್ ಫೌಂಡೇಷನ್ ಒತ್ತಾಯಿಸಿದೆ.
ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಫೌಂಡೇಷನ್ ಅಧ್ಯಕ್ಷ ಕೆ.ಎ.ಪಾಲ್ ಅವರು, ಹಗರಣದಲ್ಲಿ ಪ್ರಭಾವಿ ರಾಜಕಾರಣಿಗಳ ಹೆಸರು ಕೇಳಿಬಂದರೂ ತನಿಖಾ ಸಂಸ್ಥೆ ಸಿಬಿಐ ಅವರನ್ನು ವಿಚಾರಣೆಯಿಂದ ದೂರ ಇಟ್ಟಿದೆ. ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಲು ರಾಜ್ಯ ಸರ್ಕಾರ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.
2021 ಸೆ.26 ರಂದು ಸಚಿವ ಸಂಪುಟ ಸಿಬಿಐ ತನಿಖೆಗೆ ಇದ್ದ ಮುಕ್ತ ಅನುಮತಿಯನ್ನು ಹಿಂಪಡೆದಿದೆ. ರಾಜ್ಯದ ಹಿತಾಸಕ್ತಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದರೆ ಅದು ಉತ್ತಮ ನಡೆ ಎಂದು ಭಾವಿಸುತ್ತೇವೆ. ಅದೇ ರೀತಿ, ಐಎಂಎ ಸಹಿತ ಹಲವು ಪ್ರಕರಣಗಳಲ್ಲೂ ವಂಚನೆಗೆ ಒಳಗಾಗಿರುವ ಜನರ ಪರವಾಗಿ ರಾಜ್ಯ ಸರ್ಕಾರ ನಿಲ್ಲಬೇಕು. ರಾಜ್ಯದ ಹಲವು ಪ್ರಕರಣಗಳಲ್ಲಿ ಸಿಬಿಐ ಸಮರ್ಪಕ ತನಿಖೆ ನಡೆಸಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯ ಸರ್ಕಾರ ಸಿಬಿಐಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು ಕೇಂದ್ರವಾಗಿರಿಸಿಕೊಂಡು ಕಾರ್ಯಾಚರಿಸುತ್ತಿದ್ದ ಐಎಂಎ ಸಂಸ್ಥೆ, ಹೆಚ್ಚಿನ ಬಡ್ಡಿ ನೀಡುವ ಆಮಿಷ ತೋರಿಸಿ ಜನರಿಂದ ಠೇವಣಿ ಸಂಗ್ರಹಿಸುತ್ತಿತ್ತು. ಠೇವಣಿಯ ನೂರಾರು ಕೋಟಿ ಹಣವನ್ನು ವಂಚಿಸಿದೆ. ಹಗರಣ ಮುಚ್ಚಿಹಾಕುವ ಸಲುವಾಗಿ ಠೇವಣಿಯನ್ನು ರಾಜಕಾರಣಿಗಳು, ಪೊಲೀಸರು, ಕಂದಾಯ ಇಲಾಖೆ ಸಹಿತ ವಿವಿಧ ಇಲಾಖೆ ಅಧಿಕಾರಿಗಳಿಗೆ ಲಂಚ ನೀಡಿರುವುದಾಗಿ ಕಂಪನಿ ಮುಖ್ಯಸ್ಥ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿರುವ ಕಾರಣ ನಿಷ್ಪಕ್ಷಪಾತ ತನಿಖೆಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಐಎಂಎ ಹಗರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿತ್ತು. ಬಳಿಕ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಿತ್ತು.
ರಾಜಕಾರಣಿಗಳು ಭಾಗಿಯಾಗಿರುವ ಶಂಕೆ
ಐಎಂಎ ಹಗರಣದಲ್ಲಿ ಪ್ರಮುಖ ರಾಜಕಾರಣಿಗಳು ಭಾಗಿಯಾಗಿರುವ ಶಂಕೆ ಇದೆ. ಈ ವಿಚಾರವನ್ನು ಪ್ರಮುಖ ಆರೋಪಿಯಾದ ನಿಜಾಮುದ್ದೀನ್ ಎಂಬಾತ 2019 ಜೂನ್ 23 ರಂದು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರ ಮುಂದೆ ಸ್ವಯಂಪ್ರೇರಿತ ಹೇಳಿಕೆ ದಾಖಲಿಸಿದ್ದಾನೆ. ಅದೇ ರೀತಿ 2018ರ ವಿಧಾನಸಭಾ ಅವಧಿಯಲ್ಲಿ ಕೆಲ ರಾಜಕಾರಣಿಗಳಿಗೆ ಹಣ ನೀಡಿರುವುದಾಗಿ ಐಎಂಎ ಕಂಪನಿ ಮುಖ್ಯಸ್ಥ ಮನ್ಸೂರ್ ಖಾನ್ ಹೇಳಿಕೊಂಡಿದ್ದಾನೆ.
ಸಿಬಿಐ ತನಿಖೆಗೆ ವಹಿಸಿದ ಕೆಲ ದಿನಗಳಲ್ಲೇ ಸರ್ಕಾರ ಕೂಡ ಬದಲಾಗಿದ್ದು, ನಿಜಾಮುದ್ದೀನ್ ಹೆಸರಿಸಿದ್ದ ಕೆಲವರ ವಿಚಾರಣೆ ಮಾತ್ರ ನಡೆದಿದೆ. ಉಳಿದವರ ವಿಚಾರಣೆ ನಡೆಸಿಲ್ಲ. ಸಿಬಿಐ ಅಧಿಕಾರಿಗಳು ಯಾವ ಕಾರಣದಿಂದ ಪ್ರಭಾವಿ ವ್ಯಕ್ತಿಗಳ ವಿಚಾರಣೆಗೆ ಹಿಂದೇಟು ಹಾಕುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಹಲವು ಪ್ರಕರಣಗಳಲ್ಲಿ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದ್ದರೂ, ವಿಚಾರಣೆ ಪೂರ್ಣಗೊಳ್ಳುವ ಮೊದಲೇ ಆರೋಪಿಗಳು ಖುಲಾಸೆ ಆಗಿದ್ದಾರೆ. ಇದನ್ನು ಗಮನಿಸಿದರೆ, ಕೇಂದ್ರ ಸರ್ಕಾರದ ವ್ಯಾಪ್ತಿಯ ತನಿಖಾ ಸಂಸ್ಥೆಯಿಂದ ಜನರಿಗೆ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಅನುಮಾನ ಮೂಡುತ್ತಿದೆ. ಹಾಗಾಗಿ ಐಎಂಎ ಪ್ರಕರಣದ ಪಾರದರ್ಶಕ ತನಿಖೆಗೆ ಸರ್ಕಾರ ನಿರ್ದೇಶನ ನೀಡಬೇಕು ಎಂದು ಪಾಲ್ ಕೋರಿದ್ದಾರೆ.