ಪ್ರಣಾಳಿಕೆ ಪುನರಾವಲೋಕನ | ರೈತರಿಗೆ ಕಾಂಗ್ರೆಸ್ ಕೊಟ್ಟಿದ್ದ ಭರವಸೆಗಳೇನಾದವು?
ಗ್ಯಾರಂಟಿ ಯೋಜನೆಗಳ ಭಾರಕ್ಕೆ ಕುಸಿಯುತ್ತಿದೆಯೇ ಖಜಾನೆ? ಚುನಾವಣಾ ಪ್ರಣಾಳಿಕೆಯ ಇತರೆ ಭರವಸೆಗಳ ಕಥೆ ಏನಾಯಿತು? ಗ್ಯಾರಂಟಿಯೇತರ ಪ್ರಣಾಳಿಕೆ ಪೈಕಿ ರೈತರಿಗೆ ನೀಡಿದ ಭರವಸೆಗಳ ಪುನರಾವಲೋಕನ ಇಲ್ಲಿದೆ..;
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, 2 ಸಾವಿರ ಕೋಟಿ ರೂಪಾಯಿಗಳ ಸಾಲ ಮಾಡಲು ಮುಂದಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದಾಗಿ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ, ಹಾಗಾಗಿ ಸರ್ಕಾರ ಡಿಸೇಲ್ ಬಾಕಿ, ಭಿವಿಷ್ಯ ನಿಧಿ ವಂತಿಗೆ ಹಾಗೂ ವೇತನ ಬಾಕಿ ಮುಂತಾದ ಪಾವತಿಗಳನ್ನು ಬಾಕಿ ಉಳಿಸಿಕೊಂಡಿದೆ. ಆ ಹಿನ್ನೆಲೆಯಲ್ಲಿ ಹೊಸದಾಗಿ ಸಾಲ ಎತ್ತಲು ಮುಂದಾಗಿದೆ.
ಗ್ಯಾರಂಟಿ ಯೋಜನೆಗಳು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿಲ್ಲ ಎಂದು ಸರ್ಕಾರ ಪದೇಪದೆ ಹೇಳುತ್ತಿದ್ದರೂ ಆ ಯೋಜನೆಗಳಿಗೆ ಸಂಬಂಧಿಸಿದಂತೆ ಸಾರಿಗೆ ನಿಗಮಗಳು, ಎಸ್ಕಾಂಗಳಿಗೆ ಶಕ್ತಿ ಮತ್ತು ಗೃಹಜ್ಯೋತಿ ಯೋಜನೆಗಳ ಬಾಕಿ ಪಾವತಿಯ ವಿಷಯದಲ್ಲಿ ಬಾಕಿ ಪಾವತಿಸಿಲ್ಲ ಎಂಬ ದೂರುಗಳು ಆಯಾ ನಿಗಮಗಳಿಂದ ಆಗಾಗ ಕೇಳಿಬರುತ್ತಲೇ ಇದೆ. ಹಾಗಾಗಿ ಪ್ರತಿ ಬಾರಿ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂಬ ಮಾತುಗಳು ಕೇಳಿಬಂದಾಗಲೆಲ್ಲಾ ಗ್ಯಾರಂಟಿ ಯೋಜನೆಗಳಿಂದಾಗಿ ಬೊಕ್ಕಸ ಖಾಲಿಯಾಗಿದೆ ಎಂಬ ಹೇಳಿಕೆಗಳೂ ಹರಿದಾಡುವುದು ಮಾಮೂಲಿಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಮಾತುಗಳು ಕೇವಲ ಪ್ರತಿಪಕ್ಷಗಳ ಪಾಳೆಯದಿಂದ ಮಾತ್ರವಲ್ಲದೆ, ಸ್ವತಃ ಆಡಳಿತ ಪಕ್ಷದ ಮುಖಂಡರಿಂದಲೂ ಬಹಿರಂಗವಾಗಿಯೇ ವ್ಯಕ್ತವಾಗತೊಡಗಿವೆ.
ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಅಧಿವೇಶನದ ವೇಳೆಯಂತೂ ಸದನದಲ್ಲಿಯೇ ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿ ಸೇರಿದಂತೆ ಕನಿಷ್ಟ ಮೂಲಸೌಕರ್ಯಗಳಿಗೂ ಅನುದಾನ ಸಿಗುತ್ತಿಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ಧ ದನಿ ಎತ್ತಿದರು.
ಈ ನಡುವೆ, ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಚುನಾವಣಾ ಪ್ರಣಾಳಿಕೆಯ ಮೇಲೆ ಕಣ್ಣಾಡಿಸಿದರೆ, ನೀಡಿದ ಸಾಲು ಸಾಲು ಭರವಸೆಗಳ ಪೈಕಿ ಬೆರಳೆಣಿಕೆಯ ಭರವಸೆಗಳನ್ನೂ ಈಡೇರಿಸಲು ಸಾಧ್ಯವಾಗಿಲ್ಲ. ಅಧಿಕಾರಕ್ಕೆ ಬಂದು ಸರಿಸುಮಾರು ಒಂದೂಮುಕ್ಕಾಲು ವರ್ಷ ಕಳೆದರೂ ಪಂಚ ಗ್ಯಾರಂಟಿ ಯೋಜನೆಗಳನ್ನು ಹೊರತುಪಡಿಸಿ ಉಳಿದ ಭರವಸೆಗಳ ವಿಷಯದಲ್ಲಿ ಸರ್ಕಾರ ಮೌನಕ್ಕೆ ಜಾರಿದೆ.
ಅದರಲ್ಲೂ ಮುಖ್ಯವಾಗಿ ರಾಜ್ಯದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ತರ ಪಾತ್ರ ವಹಿಸಿರುವ ಕೃಷಿ ವಲಯಕ್ಕೆ ನೀಡಿದ್ದ ಭರವಸೆಗಳ ವಿಷಯದಲ್ಲಂತೂ ಸರ್ಕಾರ ತಾನು ಕೊಟ್ಟ ಮಾತನ್ನೇ ಮರೆತುಬಿಟ್ಟಿದೆಯೇ? ಎಂಬ ಅನುಮಾನ ಬರುವಂತಾಗಿದೆ.
ಹಾಗಾದರೆ ಕಳೆದ ಚುನಾವಣೆಯಲ್ಲಿ ಕೃಷಿ ವಲಯಕ್ಕೆ ಕಾಂಗ್ರೆಸ್ ಪಕ್ಷ ಕೊಟ್ಟಿದ್ದ ಭರವಸೆಗಳು ಏನೇನು? ಅವುಗಳಲ್ಲಿ ಎಷ್ಟು ಭರವಸೆಗಳನ್ನು ಸರ್ಕಾರ ಈಡೇರಿಸಿದೆ? ರೈತ ನಾಯಕರ ಆರೋಪಗಳೇನು? ಈ ಎಲ್ಲ ಮಾಹಿತಿ ಮುಂದಿದೆ.
ಸರ್ವ ಜನಾಂಗದ ಶಾಂತಿಯ ತೋಟ
ವಿಧಾನಸಭಾ ಚುನಾವಣೆಗೆ 8 ದಿನಗಳ ಮೊದಲು ಅಂದರೆ ಮೇ 2, 2023 ರಂದು ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಗೆ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಸರ್ವ ಜನಾಂಗದ ಶಾಂತಿಯ ತೋಟ - ಇದು ಕಾಂಗ್ರೆಸ್‌ನ ಬದ್ಧತೆ ಎಂಬ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು.
ಪ್ರಣಾಳಿಕೆಯಲ್ಲಿ ಒಟ್ಟು 142ಕ್ಕೂ ಹೆಚ್ಚು ಭರವಸೆಗಳನ್ನು ಕೊಡಲಾಗಿದೆ. ಅದರಲ್ಲಿ ಕೃಷಿ ವಲಯಕ್ಕೆ 57ಕ್ಕೂ ಹೆಚ್ಚಿನ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಕೊಡಲಾಗಿದೆ. ಆದರೆ ಈವರೆಗೆ ಒಂದೆರಡು ಭರವಸೆಗಳನ್ನು ಬಿಟ್ಟರೆ, ಉಳಿದ ಯಾವುದೇ ಭರವಸೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಈಡೇರಿಸಿಲ್ಲ ಎಂಬ ಆರೋಪವನ್ನು ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಮಾಡಿದ್ದಾರೆ.
‘ದ ಫೆಡರಲ್ ಕರ್ನಾಟಕ’ದೊಂದಿಗೆ ಮಾತನಾಡಿರುವ ಅವರು, ಕೃಷಿ ವಲಯಕ್ಕೆ ಕಾಂಗ್ರೆಸ್ ಪಕ್ಷ ಕೊಟ್ಟಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದ್ದಾರೆ.
ಕೃಷಿ ವಲಯಕ್ಕೆ ಕಾಂಗ್ರೆಸ್ ಕೊಟ್ಟಿದ್ದ ಪ್ರಮುಖ ಭರವಸೆಗಳು
• ಪುಣ್ಯಕೋಟಿ- ನಂದಿನಿ ನಮ್ಮದು, ನಂದಿನಿ ನಮ್ಮದೇ ಎಂಬ ಘೋಷಣೆ.
• ಮಿಷನ್ ಕ್ಷೀರ ಕ್ರಾಂತಿ- ಪ್ರತಿ ದಿನ 1̤5 ಕೋಟಿ ಲೀಟರ್ ಹಾಲು ಉತ್ಪಾದನೆ ಗುರಿ ಸಾಧನೆಗಾಗಿ ಯೋಜನೆ.
• ಪಶು ಭಾಗ್ಯ- ಉತ್ತಮ ತಳಿಯ ಹಸು/ಎಮ್ಮೆಗಳ ಖರೀದಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ.ವರೆಗೆ ಸಾಲ ಸೌಲಭ್ಯ.
• ಕುರಿಗಾಹಿ ಸಂವರ್ಧನಾ ನಿಧಿ- ಕುರಿ ಸಾಕಾಣಿಕೆಗಾಗಿ 1 ಸಾವಿರ ಕೋಟಿ ರೂ. ನಿಧಿ ಸ್ಥಾಪನೆ.
• ಕ್ಷೀರಧಾರೆ- ಪ್ರತಿ ಲೀಟರ್ ಹಾಲಿನ ಸಬ್ಸಿಡಿಯನ್ನು 5 ರೂ.ನಿಂದ 7ರೂ.ಗೆ ಹೆಚ್ಚಿಸುವ ಭರವಸೆ
• ಕ್ಷೀರ ಕ್ರಾಂತಿ ಕ್ರೆಡಿಟ್ ಕಾರ್ಡ್ - 50 ಸಾವಿರ ರೂ. ಕ್ರೆಡಿಟ್ ಮನಿಯೊಂದಿಗೆ ಎಲ್ಲಾ ಕೃಷಿಕರಿಗೆ ಕ್ರೆಡಿಟ್ ಕಾರ್ಡ್ ಕೊಡಲಾಗುವುದು.
• ಋಣಮುಕ್ತ ಕುರಿಗಾಹಿ ಯೋಜನೆ- ಎಲ್ಲಾ ಕುರಿ, ಮೇಕೆ ಸಾಕಾಣಿಕೆದಾರರ 1 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡುತ್ತೇವೆ.
• ಜಾನುವಾರು ಸಾಕಣೆದಾರರಿಂದ ಪ್ರತಿ ಕೆಜಿಗೆ 3 ರೂ,ನಂತೆ ಸೆಗಣಿ (ಗೊಬ್ಬರ) ಖರೀದಿ ಭರವಸೆ.
• ಮಹಿಳೆಯರಿಗೆ ಯಾವುದೇ ಭದ್ರತೆ ಪಡೆಯದೇ ಎರಡು ಹಸು ಅಥವಾ ಎಮ್ಮೆಗಳನ್ನು ಖರೀದಿಸಲು ಬಡ್ಡಿರಹಿತ ಗರಿಷ್ಠ ಸಾಲ. ದ್ರಾಕ್ಷಿ ಬೆಳೆಗಾರರಿಗೆ ಸಬ್ಸಿಡಿ ಒದಗಿಸಲು 500 ಕೋಟಿ ರೂ. ವಿನಿಯೋಗ ಮಾಡಲಾಗುವುದು.
• ಕಾಫಿ ಕರ್ನಾಟಕ ಬ್ರ್ಯಾಂಡ್ ಸೃಷ್ಟಿ.
• ರೇಷ್ಮೆ ಸ್ಥಿರತೆ ನಿಧಿಗೆ ಆರಂಭಿಕ ಹಂತದಲ್ಲಿ 2000 ಕೋಟಿ ರೂ. ಅನುದಾನ ಕೊಡುತ್ತೇವೆ.
• ಎಲ್ಲಾ ರೇಷ್ಮೆ ನೂಲು ರೀಲರ್‌ಗಳಿಗೆ 3 ಲಕ್ಷ ರೂ. ಬಡ್ಡಿರಹಿತ ಸಾಲ.
• ಪ್ರತಿ ಜಿಲ್ಲೆಗೆ ಒಂದರಂತೆ ರೈತರ ಮಾಲ್ ಆರಂಭ.
ಈಡೇರಿಸಿರುವುದು ಒಂದೆರಡು ಭರವಸೆ ಮಾತ್ರ
ಪ್ರಣಾಳಿಕೆಯಲ್ಲಿನ ಒಂದೆರಡು ಭರವಸೆಗಳನ್ನು ಮಾತ್ರ ರಾಜ್ಯ ಕಾಂಗ್ರೆಸ್ ಸರ್ಕಾರ ಈಡೇರಿಸಿದೆ ಎಂದು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭೂಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಹಾಗೂ ಎಪಿಎಂಸಿ ಕಾಯ್ದೆಗಳನ್ನು ರದ್ದು ಮಾಡುವ ಭರವಸೆಯನ್ನು ಕೊಡಲಾಗಿತ್ತು. ಆದರೆ ಅವುಗಳಲ್ಲಿ ಭೂಸುಧಾರಣೆ ತಿದ್ದುಪಡಿ ಕಾಯ್ದೆ ಹಾಗೆ ಮುಂದುವರೆದಿದ್ದು, ಕೇವಲ ಎಂಪಿಎಂಸಿ ಕಾಯ್ದೆಯನ್ನು ಮಾತ್ರ ಹಿಂದಕ್ಕೆ ಪಡೆದಿದ್ದಾರೆಂದು ಅವರು ಹೇಳಿದ್ದಾರೆ. ಜೊತೆಗೆ ಕೃಷಿ ಬೆಲೆ ಆಯೋಗವನ್ನು ಕಾಂಗ್ರೆಸ್ ಸರ್ಕಾರ ರಚನೆ ಮಾಡಿದೆ ಎಂದಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆ ಹಣವೂ ಖೋತಾ
ಈ ಹಿಂದಿನ ಸರ್ಕಾರದಲ್ಲಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷ ರೈತರಿಗೆ ಕೇಂದ್ರ ಸರ್ಕಾರದಿಂದ 6 ಸಾವಿರ ರೂಪಾಯಿ ಹಾಗೂ ರಾಜ್ಯ ಸರ್ಕಾರದಿಂದ 4 ಸಾವಿರ ರೂಪಾಯಿಗಳನ್ನು ಕೊಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಅದನ್ನು ನಿಲ್ಲಿಸಿದ್ದಾರೆ. ಜೊತೆಗೆ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹ ಧನ ಎಂದು 5 ರೂಪಾಯಿಗಳನ್ನು ಈ ಹಿಂದೆ ಕೊಡಲಾಗುತ್ತಿತ್ತು. ಆದರೆ ಈಗ ಕಳೆದ 7-8 ತಿಂಗಳುಗಳಿಂದ ಪ್ರೋತ್ಸಾಹಧನವನ್ನು ಕೊಟ್ಟಿಲ್ಲ. ಅದರ ಮೊತ್ತವೇ ಸುಮಾರು 700 ರಿಂದ 800 ಕೋಟಿ ರೂಪಾಯಿಗಳಷ್ಟಿದೆ. ರಾಜ್ಯದ ಸುಮಾರು 35 ಲಕ್ಷ ಜನ ರೈತರಿಗೆ ಇದರಿಂದ ತೊಂದರೆಯಾಗಿದೆ ಎಂದು ಕುರಬೂರು ವಿವರಿಸಿದ್ದಾರೆ.
ಆದರೆ ಪ್ರಣಾಳಿಕೆಯಲ್ಲಿ ಹಾಲು ಉತ್ಪಾದಕರಿಗೆ ಕೊಡುತ್ತಿದ್ದ ಪ್ರೋತ್ಸಾಹ ಧನವನ್ನು 5 ರೂಪಾಯಿಗಳಿಂದ 7 ರೂಪಾಯಿಗಳಿಗೆ ಹೆಚ್ಚಿಗೆ ಮಾಡುವ ಭರವಸೆಯನ್ನು ಕಾಂಗ್ರೆಸ್ ಪಕ್ಷ ಕೊಟ್ಟಿತ್ತು. ಜೊತೆಗೆ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಇದ್ದ ವಿದ್ಯಾನಿಧಿ ಯೋಜನೆಯನ್ನೂ ರಾಜ್ಯ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ ಎಂದು ಅವರು ʼದ ಫೆಡರಲ್ ಕರ್ನಾಟಕʼಕ್ಕೆ ಮಾಹಿತಿ ನೀಡಿದರು.
ಸಂಪರ್ಕಕ್ಕೆ ಸಿಗಲಿಲ್ಲ ಪ್ರಣಾಳಿಕೆ ಸಮಿತಿ ಅಧ್ಯಕ್ಷರು
ಈ ಕುರಿತು ರಾಜ್ಯ ಕಾಂಗ್ರೆಸ್ ಪಕ್ಷದಿಂದ ಪ್ರತಿಕ್ರಿಯೆಯನ್ನು ಪಡೆಯಲು ‘ದ ಫೆಡರಲ್ ಕರ್ನಾಟಕ’ ಪ್ರಯತ್ನಿಸಿತು.
ಆದರೆ ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ್, ಉಪಾಧ್ಯಕ್ಷರಾಗಿದ್ದ ಸಚಿವ ಮಧು ಬಂಗಾರಪ್ಪ ಸಂಪರ್ಕಕ್ಕೆ ಸಿಗಲಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ‘ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿರುವುದರ ಕುರಿತು ಸದ್ಯಕ್ಕೆ ಯಾವುದೇ ಮಾಹಿತಿ ನಮ್ಮ ಬಳಿ ಇಲ್ಲ. ಮಾಹಿತಿಯನ್ನು ಪಡೆದುಕೊಂಡು ಸ್ಪಷ್ಟನೆ ಕೊಡುವುದಾಗಿ ‘ದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.
ಜೊತೆಗೆ ರೈತ ಸಂಘಟನೆಗಳೊಂದಿಗೆ ಮುಖ್ಯಮಂತ್ರಿ ಈಗಾಗಲೇ 4 ಸಭೆಗಳನ್ನು ಮಾಡಿದ್ದಾರೆ ಎಂದೂ ಅವರು ಹೇಳಿದರು.
ಗ್ಯಾರಂಟಿ ಯೋಜನೆಗಳಿಂದ ಹಣಕಾಸು ಸ್ಥಿತಿ ಗಂಭೀರ?
ಗ್ಯಾರಂಟಿ ಯೋಜನಗಳಿಂದ ಉಳಿದ ಯಾವುದೇ ಭರವಸೆಗಳನ್ನು ಈಡೇರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಗುತ್ತಿಲ್ಲ ಎಂಬ ಚರ್ಚೆ ಕಾಂಗ್ರೆಸ್ ಪಕ್ಷದಲ್ಲಿಯೇ ಕೇಳಿ ಬಂದಿತ್ತು. ಹೀಗಾಗಿ ಕೆಲವು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಕಾಂಗ್ರೆಸ್ ಶಾಸಕರೇ ಆಗ್ರಹಿಸಿದ್ದರು. ಗ್ಯಾರಂಟಿ ಯೋಜನೆಗಳ ಜಾರಿಗೆ ಪ್ರತಿ ವರ್ಷ 52 ಸಾವಿರ ಕೋಟಿ ರೂಪಾಯಿಗಳ ಅಗತ್ಯವಿದೆ. ಹೀಗಾಗಿ ಅಭಿವೃದ್ಧಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರಕ್ಕೆ ಆಗುತ್ತಿಲ್ಲ ಎಂಬ ಚರ್ಚೆಗೆ ಮತ್ತೆ ಈಗ ಮಹತ್ವ ಬಂದಂತಾಗಿದೆ.