ಧರ್ಮಸ್ಥಳ ಪ್ರಕರಣದಲ್ಲಿ ರಾಜಕೀಯ ಒತ್ತಡ, ಜಾತಿ ಸಮೀಕ್ಷೆ ಕುರ್ಚಿ ಉಳಿಸಿಕೊಳ್ಳುವ ತಂತ್ರ: ಬೊಮ್ಮಾಯಿ

ಜಾತಿ ಸಮೀಕ್ಷೆಯು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಬಳಸುತ್ತಿರುವ ರಾಜಕೀಯ ಅಸ್ತ್ರ ಎಂದು ಟೀಕಿಸಿದ ಬೊಮ್ಮಾಯಿ, ಸಮೀಕ್ಷೆಯಲ್ಲಿ 'ಮತಾಂತರಗೊಂಡ ಕ್ರೈಸ್ತರು' ಎಂಬ ಹೊಸ ಕಾಲಂ ಸೇರಿಸಿರುವುದು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಎಂದರು.;

Update: 2025-09-14 13:14 GMT

ಬಸವರಾಜ್‌ ಬೊಮ್ಮಾಯಿ

ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮೇಲೆ ರಾಜಕೀಯ ಒತ್ತಡವಿದ್ದು, ಷಡ್ಯಂತ್ರ ಮಾಡಿದ ಪ್ರಮುಖ ವ್ಯಕ್ತಿಗಳನ್ನು ಮುಟ್ಟದಂತೆ ತಡೆಯಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಮಾಸ್ಕ್ ಮ್ಯಾನ್' ದೂರು ಹುಸಿಯಾದ ನಂತರವೂ, ಹೊಸ ಹೊಸ ದೂರುಗಳು ದಾಖಲಾಗುತ್ತಿವೆ, ಆದರೆ ಎಸ್‌ಐಟಿ ತನಿಖೆ ನಿರೀಕ್ಷೆಗೆ ತಕ್ಕಂತೆ ನಡೆಯುತ್ತಿಲ್ಲ. ಪ್ರಕರಣದ ಹಿಂದಿರುವ ಮುಖ್ಯ ವ್ಯಕ್ತಿಗಳನ್ನು ಇನ್ನೂ ವಿಚಾರಣೆಗೊಳಪಡಿಸಿಲ್ಲ, ಅವರನ್ನು ಮುಟ್ಟುವುದಿಲ್ಲ ಎಂಬ ಖಾತ್ರಿ ಅವರಿಗಿದೆ. ಹೀಗಾಗಿ, ಎಸ್‌ಐಟಿ ಇದುವರೆಗಿನ ತನಿಖೆಯ ಬಗ್ಗೆ ಮಧ್ಯಂತರ ವರದಿ ಸಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಜಾತಿ ಸಮೀಕ್ಷೆಯು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಬಳಸುತ್ತಿರುವ ರಾಜಕೀಯ ಅಸ್ತ್ರ ಎಂದು ಟೀಕಿಸಿದ ಬೊಮ್ಮಾಯಿ, ಸಮೀಕ್ಷೆಯಲ್ಲಿ 'ಮತಾಂತರಗೊಂಡ ಕ್ರೈಸ್ತರು' ಎಂಬ ಹೊಸ ಕಾಲಂ ಸೇರಿಸಿರುವುದು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಎಂದರು. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ, ಸಿಎಂ ಮತಾಂತರವನ್ನು ಅವರ ಹಕ್ಕು ಎನ್ನುತ್ತಾರೆ. ಇದು ಆಸೆ, ಆಮಿಷ ಒಡ್ಡಿ ಮಾಡಿದ ಮತಾಂತರವಾಗಿದ್ದು, ಧರ್ಮ-ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಎಂದು ಅವರು ಆರೋಪಿಸಿದರು. ಡಿಸೆಂಬರ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ನಡೆಯುತ್ತಿರುವಾಗ, ಸಿಎಂ ತಮ್ಮ ಕುರ್ಚಿ ಗಟ್ಟಿಮಾಡಿಕೊಳ್ಳಲು ಜಾತಿ ಸಮೀಕ್ಷೆ ವರದಿಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದರು.

ವೀರಶೈವ-ಲಿಂಗಾಯತ ಮಹಾಸಭೆಯು ಸಂಪೂರ್ಣ ಕಾಂಗ್ರೆಸ್‌ಮಯವಾಗಿದೆ ಎಂದು ಟೀಕಿಸಿದ ಅವರು, ಮಹಾಸಭೆಯು ಒಂದು ಕಡೆ ಹೊಸ ಧರ್ಮ, ಇನ್ನೊಂದು ಕಡೆ ವೀರಶೈವ, ಮತ್ತೊಂದೆಡೆ ಲಿಂಗಾಯತ ಎನ್ನುವ ಮೂಲಕ ಗೊಂದಲ ಸೃಷ್ಟಿಸಬಾರದು ಎಂದು ಎಚ್ಚರಿಸಿದರು. ಭಾರತ್-ಪಾಕ್ ಕ್ರಿಕೆಟ್ ಪಂದ್ಯವನ್ನು ದೇಶದ ಜನರ ಭಾವನೆಗಳಿಗೆ ಬೆಲೆ ಕೊಟ್ಟು ನಡೆಸದಿರುವುದು ಒಳಿತಿತ್ತು ಎಂದು ಅಭಿಪ್ರಾಯಪಟ್ಟ ಅವರು, ಹಾಸನ ಗಣೇಶ ವಿಸರ್ಜನೆ ದುರಂತದಲ್ಲಿ ಮಡಿದ ಅಮಾಯಕರ ಕುಟುಂಬಗಳಿಗೆ ಸರ್ಕಾರ ದಾಖಲೆ ಪ್ರಮಾಣದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. 

Tags:    

Similar News