'ಕೊಂದವರು ಯಾರು?': ಸೌಜನ್ಯ ಪ್ರಕರಣದಲ್ಲಿ ಜನಾಂದೋಲನಕ್ಕೆ ಮಹಿಳಾ ಹೋರಾಟಗಾರರ ಕರೆ
ಸ್ಥಳೀಯರು ಹೋರಾಟವನ್ನು ಆರದೆ ಜೀವಂತವಾಗಿ ಹಿಡಿದುಕೊಂಡು ಬಂದಿದ್ದಾರೆ. ನಾವು ನೊಂದವರ ಮನೆಗಳಿಗೆ ಹೋದಾಗ ಅಲ್ಲಿ ಯಾರಾದರೂ ನಮ್ಮನ್ನು ಹಿಂಬಾಲಿಸುತ್ತಿದ್ದಾರ ಎನ್ನುವ ಭಾವನೆ ಇತ್ತು ಎಂದು ಮಹಿಳಾ ಪರ ಹೋರಾಟಗಾರರಾದ ಮಲ್ಲಿಗೆ ತಿಳಿಸಿದರು.;
ಸಭೆಯಲ್ಲಿ ಮಹಿಳಾ ಹೋರಾಟಗಾರ್ತಿಯರು ಭಿತ್ತಿಪತ್ರ ಪ್ರದರ್ಶಿಸಿದರು.
ಸೌಜನ್ಯಳನ್ನು ಕೊಂದವರು ಯಾರೆಂದು ಜಗತ್ತಿಗೆ ಗೊತ್ತಿದೆ, ಆದರೂ ನ್ಯಾಯ ಸಿಕ್ಕಿಲ್ಲ. ಈ ಅನ್ಯಾಯದ ವಿರುದ್ಧ ಮತ್ತೊಂದು ಜನಾಂದೋಲನ ಆಗಬೇಕಿದೆ," ಎಂದು ಮಹಿಳಾ ಹೋರಾಟಗಾರ್ತಿ ಕೆ.ಎಸ್. ವಿಮಲಾ ಅವರು ಮಂಗಳವಾರ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಆಕ್ರೋಶಭರಿತ ಕರೆ ನೀಡಿದರು.
'ನೊಂದವರೊಂದಿಗೆ ನಾವು-ನೀವು' ಸಂಘಟನೆಯು 'ಕೊಂದವರು ಯಾರು?' ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ಸಭೆಯಲ್ಲಿ, ಧರ್ಮಸ್ಥಳ ಪ್ರಕರಣದಲ್ಲಿ ನ್ಯಾಯಕ್ಕಾಗಿ ದಶಕಗಳಿಂದ ನಡೆಯುತ್ತಿರುವ ಹೋರಾಟದ ಮುಂದಿನ ಹಾದಿಯ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಹಲವು ಮಹಿಳಾ ಪರ ಹೋರಾಟಗಾರರು, ತನಿಖಾ ಸಂಸ್ಥೆಗಳ ವೈಫಲ್ಯ ಮತ್ತು ರಾಜಕೀಯ ಒತ್ತಡಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೊಂದವರನ್ನು ರಕ್ಷಿಸಲಾಗುತ್ತಿದೆ
"ಪಂಚಾಯತ್ ಚುನಾವಣೆಯಲ್ಲಿ ನಾಮಪತ್ರ ವಾಪಸ್ ಪಡೆಯಲು ನಿರಾಕರಿಸಿದ್ದಕ್ಕೆ ದೇವಾನಂದ್ ಎಂಬುವವರು ತಮ್ಮ ಮಗಳನ್ನು ಬಲಿ ಕೊಡಬೇಕಾಯಿತು. ಇಂತಹ ಅನೇಕ ಘಟನೆಗಳು ನಡೆದಿವೆ. ಕೊಂದವರು ಯಾರೆಂಬುದು ಎಲ್ಲರಿಗೂ ತಿಳಿದಿದ್ದರೂ, ಅವರನ್ನು ರಕ್ಷಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ," ಎಂದು ವಿಮಲಾ ಆರೋಪಿಸಿದರು.
ಪೊಲೀಸರ ಬೇಜವಾಬ್ದಾರಿ ಮತ್ತು ತನಿಖೆ ಹಾದಿ ತಪ್ಪಿಸುವ ಯತ್ನ
ಮಹಿಳಾ ದೌರ್ಜನ್ಯ ತಡೆ ಕುರಿತ ಉಗ್ರಪ್ಪ ಸಮಿತಿಯ ಸದಸ್ಯೆ ಜ್ಯೋತಿ ಅವರು ಮಾತನಾಡಿ, "ಧರ್ಮಸ್ಥಳದಲ್ಲಿ ಪ್ರತಿವರ್ಷ ಸುಮಾರು 100 ಅಸಹಜ ಸಾವುಗಳು ಸಂಭವಿಸುತ್ತವೆ ಎಂದು ಅಂದಿನ ಎಎಸ್‌ಪಿ ಅವರೇ ಸಮಿತಿ ಮುಂದೆ ಒಪ್ಪಿಕೊಂಡಿದ್ದರು. ಆದರೂ, ಈ ಸಾವುಗಳನ್ನು ತಡೆಯಲು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿ ನಡೆದ ಯಾವುದೇ ಪ್ರಕರಣದಲ್ಲೂ ಅಪರಾಧಿಗಳಿಗೆ ಶಿಕ್ಷೆಯಾಗಿಲ್ಲ, ಇದಕ್ಕೆ ಪೊಲೀಸರ ಬಳಿ ಉತ್ತರವಿಲ್ಲ," ಎಂದು ಪೊಲೀಸ್ ಇಲಾಖೆಯ ಬೇಜವಾಬ್ದಾರಿತನವನ್ನು ಟೀಕಿಸಿದರು.
ಹೋರಾಟಗಾರ್ತಿ ಚಂಪಾವತಿ ಅವರು, "ಎಸ್‌ಐಟಿ ತನಿಖೆಯನ್ನು ಹಾದಿ ತಪ್ಪಿಸುವ ಪ್ರಯತ್ನಗಳು ನಡೆಯಬಾರದು. ನಾವು ನೊಂದವರ ಕುಟುಂಬಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ, ಅವರಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ," ಎಂದು ಸ್ಪಷ್ಟಪಡಿಸಿದರು.
ಭಯದ ವಾತಾವರಣ
"ಸ್ಥಳೀಯ ಹೋರಾಟಗಾರರು ಇಂದಿಗೂ ಈ ಹೋರಾಟವನ್ನು ಜೀವಂತವಾಗಿಟ್ಟಿದ್ದಾರೆ. ಆದರೆ, ನೊಂದವರ ಮನೆಗೆ ಭೇಟಿ ನೀಡಿದಾಗ ಯಾರೋ ಹಿಂಬಾಲಿಸುತ್ತಿರುವ ಭಯದ ವಾತಾವರಣವಿದೆ. ತನಿಖೆಗೆ ಸಹಕರಿಸುವವರಿಗೂ ಬೆದರಿಕೆ ಒಡ್ಡಲಾಗುತ್ತಿದೆ," ಎಂದು ಹೋರಾಟಗಾರ್ತಿ ಮಲ್ಲಿಗೆ ಆತಂಕ ವ್ಯಕ್ತಪಡಿಸಿದರು.