ಧರ್ಮಸ್ಥಳ ಪ್ರಕರಣ: ಎನ್‌ಐಎ ತನಿಖೆಗೆ ಆಗ್ರಹಿಸಿ ಇಂದು ಜೆಡಿಎಸ್, ನಾಳೆ ಬಿಜೆಪಿ ಪಾದಯಾತ್ರೆ

ಹಾಸನವನ್ನು ಯಾತ್ರೆಯ ಕೇಂದ್ರ ಸ್ಥಾನವನ್ನಾಗಿ ಮಾಡಲಾಗಿದ್ದು, ರಾಜ್ಯದ ವಿವಿಧೆಡೆಯಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಭಕ್ತರು ಹಾಸನದಲ್ಲಿ ಸಮಾವೇಶಗೊಳ್ಳಲಿದ್ದಾರೆ.;

Update: 2025-08-31 03:44 GMT

   ಜೆಡಿಎಸ್‌ ಯುವ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಪ್ರಕರಣವು ಇದೀಗ ತೀವ್ರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (SIT) ತನಿಖೆಯ ಮೇಲೆ ನಂಬಿಕೆಯಿಲ್ಲ ಎಂದು ಆರೋಪಿಸಿರುವ ಪ್ರಮುಖ ವಿರೋಧ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ, ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸಬೇಕೆಂದು ಆಗ್ರಹಿಸಿ, ಪ್ರತ್ಯೇಕವಾಗಿ 'ಧರ್ಮಸ್ಥಳ ಚಲೋ' ಪಾದಯಾತ್ರೆಗಳನ್ನು ಹಮ್ಮಿಕೊಂಡಿವೆ.

ಇಂದು ಜೆಡಿಎಸ್‌ನಿಂದ 'ಧರ್ಮಸ್ಥಳ ಯಾತ್ರೆ'

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ, ಜೆಡಿಎಸ್ ಪಕ್ಷವು ಇಂದು (ಭಾನುವಾರ, ಆಗಸ್ಟ್ 31) 'ಧರ್ಮಸ್ಥಳ ಯಾತ್ರೆ'ಯನ್ನು ಹಮ್ಮಿಕೊಂಡಿದೆ. ಮಂಡ್ಯದಲ್ಲಿ ಈ ಕುರಿತು ಮಾಹಿತಿ ನೀಡಿದ ನಿಖಿಲ್ ಕುಮಾರಸ್ವಾಮಿ, "ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆಯನ್ನು ಹಾಳು ಮಾಡಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಇದರ ಹಿಂದೆ ವಿದೇಶಿ ಫಂಡಿಂಗ್ ಇರುವ ಅನುಮಾನವಿದೆ. ಈ ಸತ್ಯಾಸತ್ಯತೆಯನ್ನು ಹೊರತರಲು ಎನ್‌ಐಎ ತನಿಖೆಯೊಂದೇ ಮಾರ್ಗ," ಎಂದು ಹೇಳಿದರು.

ಹಾಸನವನ್ನು ಯಾತ್ರೆಯ ಕೇಂದ್ರ ಸ್ಥಾನವನ್ನಾಗಿ ಮಾಡಲಾಗಿದ್ದು, ರಾಜ್ಯದ ವಿವಿಧೆಡೆಯಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಭಕ್ತರು ಹಾಸನದಲ್ಲಿ ಸಮಾವೇಶಗೊಳ್ಳಲಿದ್ದಾರೆ. ಅಲ್ಲಿಂದ ಧರ್ಮಸ್ಥಳದ ನೇತ್ರಾವತಿ ನದಿಗೆ ತೆರಳಿ, ಪುಣ್ಯಸ್ನಾನ ಮಾಡಿದ ನಂತರ, ಮಂಜುನಾಥ ಸ್ವಾಮಿ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಯಾತ್ರೆಯಲ್ಲಿ ಜೆಡಿಎಸ್‌ನ ಲೋಕಸಭಾ ಸದಸ್ಯರು, ಶಾಸಕರು ಮತ್ತು ಮಾಜಿ ಸಚಿವರು ಭಾಗವಹಿಸಲಿದ್ದಾರೆ.

ನಾಳೆ ಬಿಜೆಪಿಯಿಂದ 'ಧರ್ಮಸ್ಥಳ ಚಲೋ'

ಇದೇ ವಿಚಾರವಾಗಿ, ಬಿಜೆಪಿ ಕೂಡ ಸೆಪ್ಟೆಂಬರ್ 1 ರಂದು (ಸೋಮವಾರ) 'ಧರ್ಮಸ್ಥಳ ಚಲೋ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, "ಮಂಜುನಾಥ ಸ್ವಾಮಿಯ ಕೋಟ್ಯಂತರ ಭಕ್ತರ ಆಶಯದಂತೆ, ಸರ್ಕಾರವು ತಕ್ಷಣವೇ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು. ಈ ಆಗ್ರಹವನ್ನು ಮುಂದಿಟ್ಟುಕೊಂಡು ನಾವು ಧರ್ಮಸ್ಥಳ ಚಲೋ ನಡೆಸುತ್ತಿದ್ದೇವೆ," ಎಂದು ಹೇಳಿದರು.

ಅಂದು ಮಧ್ಯಾಹ್ನ 2 ಗಂಟೆಗೆ ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಮೂಡಿಸುವ ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡುವ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Similar News