ಧರ್ಮಸ್ಥಳ ಪ್ರಕರಣ: 'ಅನಾಮಿಕ ಸಾಕ್ಷಿಯನ್ನು ಗಲ್ಲಿಗೇರಿಸಿ'; ಶಾಸಕ ಎಸ್.ಆರ್. ವಿಶ್ವನಾಥ್ ಆಗ್ರಹ
'ಈ ಅಪಪ್ರಚಾರವನ್ನು ಖಂಡಿಸಿ ಮತ್ತು ಕ್ಷೇತ್ರದ ಪರವಾಗಿ ನಿಲ್ಲಲು, 'ಧರ್ಮಸ್ಥಳ ಉಳಿಸಿ' ಎಂಬ ಘೋಷವಾಕ್ಯದೊಂದಿಗೆ ಆಗಸ್ಟ್ 16 ರಂದು ಬೃಹತ್ ಅಭಿಯಾನಕ್ಕೆ ಚಾಲನೆ ನೀಡುವುದಾಗಿ ವಿಶ್ವನಾಥ್ ಪ್ರಕಟಿಸಿದರು.;
ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಅಸಹಜ ಸಾವುಗಳ ಪ್ರಕರಣವು ಇದೀಗ ತೀವ್ರ ರಾಜಕೀಯ ತಿರುವು ಪಡೆದುಕೊಂಡಿದೆ. ಕ್ಷೇತ್ರದ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿರುವ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, 'ಧರ್ಮಸ್ಥಳದ ಜೊತೆ ನಾವು' ಎಂಬ ಅಭಿಯಾನವನ್ನು ಘೋಷಿಸಿದ್ದಾರೆ. ಪ್ರಕರಣದ ಪ್ರಮುಖ ಸಾಕ್ಷಿ 'ಅನಾಮಿಕ ಭೀಮ'ನೇ ಮೊದಲ ಆರೋಪಿ, ಆತನನ್ನು ಗಲ್ಲಿಗೇರಿಸಬೇಕು ಎಂದು ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗೌರಿಬಿದನೂರಿನಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವನಾಥ್, "ಧರ್ಮಸ್ಥಳ ಅತ್ಯಂತ ಪವಿತ್ರವಾದ ಮತ್ತು ಶಕ್ತಿಶಾಲಿಯಾದ ಪುಣ್ಯಕ್ಷೇತ್ರ. ಇತ್ತೀಚೆಗೆ ಈ ಕ್ಷೇತ್ರದ ವಿರುದ್ಧ ಸುಳ್ಳು ಅಪಪ್ರಚಾರ ನಡೆಸಲಾಗುತ್ತಿದೆ. ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳುವ ಅನಾಮಿಕ ವ್ಯಕ್ತಿಯೇ ಈ ಪ್ರಕರಣದ ಮೊದಲ ಆರೋಪಿ. ಕೊಲೆ, ಅತ್ಯಾಚಾರಗಳ ಬಗ್ಗೆ ತಿಳಿದಿದ್ದರೂ ಇಷ್ಟು ದಿನ ಸುಮ್ಮನಿದ್ದ ಆತನನ್ನೇ ಮೊದಲು ಗಲ್ಲಿಗೇರಿಸಬೇಕು," ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಅನಾಥ ಶವಗಳ ಸಂಸ್ಕಾರ ಮಾಡುವ ಕೆಲಸದಲ್ಲಿದ್ದ ಆ ವ್ಯಕ್ತಿ, ಶವಗಳ ಮೇಲಿನ ಒಡವೆಗಳನ್ನು ಕದಿಯುತ್ತಿದ್ದ ಕಾರಣಕ್ಕೆ ಕೆಲಸದಿಂದ ತೆಗೆದುಹಾಕಲಾಗಿತ್ತು. ಈಗ ಆತ ಸೇಡಿನ ಮನೋಭಾವದಿಂದ ಮಂಜುನಾಥ ಸ್ವಾಮಿಯ ಕ್ಷೇತ್ರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾನೆ," ಎಂದು ಶಾಸಕರು ಆರೋಪಿಸಿದರು.
ಬೃಹತ್ ಅಭಿಯಾನಕ್ಕೆ ಚಾಲನೆ
ಈ ಅಪಪ್ರಚಾರವನ್ನು ಖಂಡಿಸಿ ಮತ್ತು ಕ್ಷೇತ್ರದ ಪರವಾಗಿ ನಿಲ್ಲಲು, 'ಧರ್ಮಸ್ಥಳ ಉಳಿಸಿ' ಎಂಬ ಘೋಷವಾಕ್ಯದೊಂದಿಗೆ ಆಗಸ್ಟ್ 16 ರಂದು ಬೃಹತ್ ಅಭಿಯಾನಕ್ಕೆ ಚಾಲನೆ ನೀಡುವುದಾಗಿ ಅವರು ಘೋಷಿಸಿದರು. "ಯಲಹಂಕದಿಂದ ಕೇಸರಿ ಧ್ವಜ ಕಟ್ಟಿದ 200ಕ್ಕೂ ಹೆಚ್ಚು ಕಾರುಗಳಲ್ಲಿ ನಾವು ಧರ್ಮಸ್ಥಳಕ್ಕೆ ರ್ಯಾಲಿ ನಡೆಸಿ, ಮಂಜುನಾಥ ಸ್ವಾಮಿಯ ದರ್ಶನ ಪಡೆಯುತ್ತೇವೆ. ಈ ಅಭಿಯಾನವು ಯಲಹಂಕದಿಂದ ಆರಂಭವಾಗಿ, ನಂತರ ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸಲಿದೆ," ಎಂದು ಅವರು ತಿಳಿಸಿದರು.
ಇದೇ ವೇಳೆ, ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಯು ತಕ್ಷಣವೇ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಎಸ್.ಆರ್. ವಿಶ್ವನಾಥ್ ಆಗ್ರಹಿಸಿದರು.