ಮೊಮ್ಮಗ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ಸುದ್ದಿ ನೋಡಿ ಕಣ್ಣೀರಿಟ್ಟ ಮಾಜಿ ಪ್ರಧಾನಿ ದೇವೇಗೌಡ
ಈ ವೇಳೆ ಮೊಮ್ಮಗನಿಗೆ ಶಿಕ್ಷೆ ಪ್ರಕಟ ಆಗುತ್ತಿರುವಂತೆಯೇ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಗಳಗಳನೆ ಕಣ್ಣೀರಿಟ್ಟಿದ್ದಾರೆ.;
ಮಾಜಿ ಪ್ರಧಾನಿ ದೇವೇಗೌಡ
ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ದೇವೇಗೌಡ ಅವರು ಬೆಳಗ್ಗಿನಿಂದಲೇ ಮೊಮ್ಮಗನ ತೀರ್ಪಿನ ಬಗ್ಗೆ ಕಾತುರದಿಂದ ಕಾಯುತ್ತಾ ಕುಳಿತಿದ್ದರು. ಮೊಮ್ಮಗ ಪ್ರಜ್ವಲ್ ರೇವಣ್ಣ ತಪ್ಪಿತಸ್ಥ ಎಂದು ನ್ಯಾಯಾಲಯ ಹೇಳಿದ್ದರಿಂದ ಬೆಳಿಗ್ಗೆಯೂ ಕಣ್ಣೀರು ಹಾಕಿದ್ದರು ಎಂದು ಮೂಲಗಳು ಹೇಳಿವೆ. ನ್ಯಾಯಾಲಯದ ತೀರ್ಪು ಪ್ರಕಟವಾಗುತ್ತಿದಂತೆ ಮತ್ತಷ್ಟು ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿದರು. ನ್ಯಾಯಾಲಯದ ತೀರ್ಪಿನಿಂದ ದೇವೇಗೌಡ ಅವರು ಚಿಂತಿತರಾಗಿದ್ದಾರೆ ಎನ್ನಲಾಗಿದೆ.
ಗುರುವಾರ ಕೋರ್ಟ್ ಪ್ರಜ್ವಲ್ ರೇವಣ್ಣ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ತಿಳಿಸಿತ್ತು. ಶನಿವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ತಿಳಿಸಿತ್ತು. ಈ ಹಿನ್ನಲೆ ಮಧ್ಯಾಹ್ನದಿಂದ ಮಾಜಿ ಪ್ರಧಾನಿ ಟಿವಿ ನೋಡುತ್ತಲೇ ಕುಳಿತಿದ್ದರು. ಈ ವೇಳೆ ಮೊಮ್ಮಗನಿಗೆ ಶಿಕ್ಷೆ ಪ್ರಕಟ ಆಗುತ್ತಿರುವಂತೆಯೇ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಗಳಗಳನೆ ಕಣ್ಣೀರಿಟ್ಟಿದ್ದಾರೆ.
ಮೈಸೂರಿನ ಕೆ.ಆರ್.ನಗರದ ಮಹಿಳೆ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಈ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376(2)(k) (ಮಹಿಳೆಯ ಮೇಲೆ ನಿಯಂತ್ರಣ ಅಥವಾ ಪ್ರಾಬಲ್ಯದ ಸ್ಥಾನದಲ್ಲಿದ್ದು ಅತ್ಯಾಚಾರ ಎಸಗುವುದು) ಮತ್ತು ಸೆಕ್ಷನ್ 376(2)(n) (ಒಬ್ಬನೇ ವ್ಯಕ್ತಿ ಅದೇ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗುವುದು) ಅಡಿಯಲ್ಲಿನ ಆರೋಪಗಳು ಸಾಬೀತಾಗಿವೆ. ಈ ಕಾರಣದಿಂದಾಗಿ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿದೆ.
ನ್ಯಾಯಾಲಯದ ತೀರ್ಪಿನ ಪ್ರಕಾರ, ಜೀವಾವಧಿ ಶಿಕ್ಷೆ ಮತ್ತು ದಂಡದ ಜೊತೆಗೆ ಸಂತ್ರಸ್ತೆಗೆ ಏಳು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.