ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟ | ರೈತರ ಜತೆಗಿನ ಸಭೆ ಅಪೂರ್ಣ; 10 ದಿನ ಸಮಯ ಕೇಳಿದ ಸಿಎಂ

ಭೂಸ್ವಾಧೀನ ಪ್ರಕ್ರಿಯೆಗೆ ಅಂತಿಮ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಕೆಲ ಕಾನೂನು ತೊಡಕುಗಳಿವೆ. ಅವುಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲು 10 ದಿನ ಕಾಲಾವಕಾಶ ನೀಡಿ ಎಂದು ಸಿಎಂ ಕೇಳಿಕೊಂಡಿದ್ದಾರೆ.;

Update: 2025-07-04 08:50 GMT
ಇತ್ತೀಚೆಗೆ ನಡೆದ ಸಭೆಯಲ್ಲಿ ದೇವನಹಳ್ಳಿ ರೈತರು ಸಿಎಂ ಅವರಿಗೆ ತಾವು ಬೆಳೆದ ಹೂವು, ಹಣ್ಣು ಹಾಗೂ ತರಕಾರಿ ತಂದು ತೋರಿಸಿದರು.

ಕೆಐಎಡಿಬಿ ಬಲವಂತದ ಭೂಸ್ವಾಧೀನ ವಿರೋಧಿಸಿ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಹಿನ್ನೆಲೆ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರು ರೈತರ ನಿಯೋಗದೊಂದಿಗೆ ನಡೆಸಿದ ಸಭೆ ಮತ್ತೆ ವಿಫಲವಾಗಿದೆ. 

ಭೂಸ್ವಾಧೀನ ಪ್ರಕ್ರಿಯೆಗೆ ಅಂತಿಮ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಕೆಲ ಕಾನೂನು ತೊಡಕುಗಳಿವೆ. ಅವುಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಹತ್ತು ದಿನಗಳ ಕಾಲಾವಕಾಶ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಕೋರಿದರು.  ಈ ಹಿನ್ನೆಲೆಯಲ್ಲಿ ಸಭೆ ಅಪೂರ್ಣಗೊಂಡಿದ್ದು, ಜು.15 ರಂದು ಮತ್ತೆ ಸಭೆ ಸೇರಲು ನಿರ್ಧರಿಸಲಾಗಿದೆ. 

ಅದೇ ರಾಗ, ಅದೇ ಹಾಡು

2024ಡಿ.24ರಂದು ಸಿಎಂ ಅಧಿಕೃತ ನಿವಾಸ ಕೃಷ್ಣಾದಲ್ಲಿ ಚನ್ನರಾಯಪಟ್ಟಣ ರೈತರು ಹಾಗೂ ಕೈಗಾರಿಕಾ ಸಚಿವರ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಅವರು ಜನವರಿ ಮೊದಲ ವಾರದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಆಗಲೂ ಅಂತಿಮ ಅಧಿಸೂಚನೆ ಪ್ರಕಟವಾಗಿರುವ ಹಿನ್ನೆಲೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವುದು ಕಷ್ಟ. ಆದಾಗ್ಯೂ, ಕಾನೂನು ತೊಡಕುಗಳ ಕುರಿತು ಪರಿಶೀಲಿಸಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದರು. 

ಜನವರಿ ಕಳೆದರೂ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ಪ್ರಕಟಿಸದ ಹಿನ್ನೆಲೆಯಲ್ಲಿ ರೈತರು ಹೋರಾಟ ತೀವ್ರಗೊಳಿಸಿದ್ದರು. ಕಳೆದ ಕೆಲ ದಿನಗಳ ಹಿಂದೆ ದೇವನಹಳ್ಳಿ ಚಲೋ ಹಮ್ಮಿಕೊಂಡಿದ್ದರು. ಆಗ ಸಾಹಿತಿಗಳು, ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದರು. 

ರೈತ ನಾಯಕರ ಬಂಧನ ಖಂಡಿಸಿ ಕಳೆದ ಆರು ದಿನಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ಆರಂಭಿಸಲಾಗಿತ್ತು. ಭೂಸ್ವಾಧೀನದ ಕುರಿತು ನಿರ್ಧಾರ ಕೈಗೊಳ್ಳಲು ಇಂದು(ಶುಕ್ರವಾರ) ಸಿಎಂ ಸಿದ್ದರಾಮಯ್ಯ ಅವರು ರೈತರ ನಿಯೋಗದಿಂದಿಗೆ ನಡೆಸಿದ ಸಭೆಯಲ್ಲಿ ಮತ್ತೆ ಕಾಲಾವಕಾಶ ಕೇಳಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. 

ಸಿಎಂ ನೀಡಿದ್ದ ಭರವಸೆ ಏನು?  

ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯಲ್ಲಿ 1777 ಎಕರೆ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಎರಡು ಗ್ರಾಮಗಳ ವ್ಯಾಪ್ತಿಯ 430 ಎಕರೆ ಭೂಸ್ವಾಧೀನಕ್ಕೆ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಹಾಗಾಗಿ ಅಂತಿಮ ಅಧಿಸೂಚನೆ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರು ಕಳೆದ ಡಿಸೆಂಬರ್‌ ತಿಂಗಳಲ್ಲಿ ಹೇಳಿದ್ದರು.

ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದಾಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಅಂತಿಮ ಅಧಿಸೂಚನೆ ಕೈಬಿಡುವ ಕುರಿತಂತೆ ಸರ್ಕಾರದ ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆಯಲಾಗುವುದು. ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಿ ಜನವರಿ ಮೊದಲ ವಾರದೊಳಗೆ ನಿರ್ಧಾರ ಪ್ರಕಟಿಸಲಾಗುವುದು. ರೈತರು ಆತಂಕಕ್ಕೆ ಒಳಗಾಗಬಾರದು ಎಂದು ಸಿಎಂ ರೈತ ಮುಖಂಡರಿಗೆ ಅಭಯ ನೀಡಿದ್ದರು.

ರೈತರ ವಾದವೇನು?

ಕೆಐಎಡಿಬಿ ಭೂಸ್ವಾಧೀನ ಕೈಬಿಡುವ ಹಾಗೂ ಮುಂದುವರಿಸುವ ಅಧಿಕಾರ ಸರ್ಕಾರಕ್ಕಿದೆ. ಈಗಾಗಲೇ ಮೂರು ಹಂತದಲ್ಲಿ ರೈತರು ಭೂಮಿ ಕಳೆದುಕೊಂಡಿದ್ದಾರೆ. ಅಳಿದುಳಿದ ಜಾಗವನ್ನೂ ಸ್ವಾಧೀನಪಡಿಸಿಕೊಂಡರೆ ನಾವು ಎಲ್ಲಿಗೆ ಹೋಗಬೇಕು. ಸರ್ಕಾರ ನೀಡುವ ಯಾವುದೇ ಪರಿಹಾರ, ಪುನರ್ವಸತಿ ನಮಗೆ ಬೇಕಾಗಿಲ್ಲ. ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟರೆ ಅಷ್ಟೇ ಸಾಕು ಎಂದು ರೈತ ಮುಖಂಡರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದರು.

"ಈಗಾಗಲೇ ಮೂರು ಬಾರಿ ನಡೆದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಈಗಲೂ ಸಾಕಷ್ಟು ಜಮೀನು ಖಾಲಿ ಉಳಿದಿದೆ. ಹಾಗಾಗಿ ಹೊಸದಾಗಿ ಭೂಸ್ವಾಧೀನ ನಡೆಸಬಾರದು. ಹೊಸ ಉದ್ಯಮಗಳಿಗೆ ಭೂಮಿ ಬೇಕಿದ್ದರೆ ಕೆಐಎಡಿಬಿ ಬಳಿ ಖಾಲಿ ಇರುವ ಜಮೀನನ್ನೇ ಹಂಚಬೇಕು. ಭೂಸ್ವಾಧೀನ ಪ್ರಕ್ರಿಯೆ ಕೈಬಿಡದ ಹೊರತು ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ರೈತರು ಹೇಳಿದ್ದರು.

Tags:    

Similar News