Dengue Outbreak | ರಾಜ್ಯದಲ್ಲಿ 7 ಸಾವಿರ ದಾಟಿದ ಡೆಂಗ್ಯೂ ಪ್ರಕರಣಗಳು
ರಾಜ್ಯದಲ್ಲಿ ಡೆಂಗ್ಯೂ ಸೋಕಿನ ಅಬ್ಬರ ಜೋರಾಗಿದೆ. ಶನಿವಾರ ಒಂದೇ ದಿನ 175 ಜನರಲ್ಲಿ ಡೆಂಗ್ಯೂ ಸೋಂಕು ಪತ್ತೆಯಾಗಿದೆ. ಈವರೆಗೆ 7000 ಮಂದಿಗೆ ಡೆಂಗ್ಯೂ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿಯೂ ಡೆಂಗ್ಯೂ ವ್ಯಾಪಕವಾಗಿ ಹರಡುತ್ತಿದ್ದು, ಒಂದೇ ದಿನದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 115 ಜನರಲ್ಲಿ ಡೆಂಗ್ಯೂ ದೃಢಪಟ್ಟಿದೆ. ಈಗಾಗಲೇ ಸೋಂಕಿತ 352 ಜನರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 127 ಸೋಂಕಿತರು ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 175 ಜನರಲ್ಲಿ ಡೆಂಗ್ಯೂ ವರದಿಯಾಗಿದ್ದು, ಹೊಸದಾಗಿ ದೃಢಪಟ್ಟ ಪ್ರಕರಣಗಳಲ್ಲಿ ಒಂದು ವರ್ಷದೊಳಗಿನ ಓರ್ವ ಮಗು, ಒಂದರಿಂದ 18 ವರ್ಷದೊಳಗಿನ 53 ಮಂದಿ ಹಾಗೂ 18 ವರ್ಷ ಮೇಲ್ಪಟ್ಟ 121 ಜನರು ಸೇರಿದ್ದಾರೆ.
ಶುಕ್ರವಾರ ಬೆಂಗಳೂರಿನ ಅಂಜನಾಪುರದ 11 ವರ್ಷದ ಬಾಲಕ ಡೆಂಗ್ಯೂನಿಂದ ಮೃತಪಟ್ಟಿದ್ದಾನೆ. ಆತನಿಗೆ ನಡೆಸಲಾದ 'ರ್ಯಾಪಿಡ್ ಆ್ಯಂಟಿಜನ್' ಪರೀಕ್ಷೆಯಲ್ಲಿ ಡೆಂಗ್ಯೂ ದೃಢಪಟ್ಟಿದೆ. ಇದರಿಂದಾಗಿ 'ಎಲಿಸಾ' ಪರೀಕ್ಷೆ ನಡೆಸಲು ಬಿಬಿಎಂಪಿ ನಿರ್ಧರಿಸಿದೆ. ಇದರಲ್ಲಿಯೂ ಡೆಂಗ್ಯೂ ದೃಢಪಟ್ಟಲ್ಲಿ 'ಸಾವಿನ ಲೆಕ್ಕಗಳ ವರದಿ ಸಿದ್ಧಪಡಿಸಿ, ಮರಣದ ಬಗ್ಗೆ ಅಧಿಕೃತವಾಗಿ ದೃಢಪಡಿಸಲಾಗುತ್ತದೆʼ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಕೆಲವೆಡೆ ಡೆಂಗ್ಯೂ ಶಂಕಿತ ಮರಣ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳ 'ಸಾವಿನ ಲೆಕ್ಕಗಳ ವರದಿ ಸಿದ್ಧಪಡಿಸಿದ ಬಳಿಕ ಮರಣಕ್ಕೆ ಕಾರಣ ಖಚಿತಪಡಿಸಿ, ಡೆಂಗ್ಯೂ ದೃಢಪಟ್ಟಲ್ಲಿ ದೈನಂದಿನ ಡೆಂಗ್ಯೂ ವರದಿಯಲ್ಲಿ ಸೇರ್ಪಡೆ ಮಾಡಲಾಗುತ್ತದೆʼ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.