ಬೆಂಗಳೂರಿನಲ್ಲಿ ಮತ್ತೆ ಹೆಚ್ಚಿದ ಡೆಂಗ್ಯೂ ಪ್ರಕರಣ; ಸ್ವಚ್ಛತೆ ಕಾಪಾಡದಿದ್ದರೆ ದಂಡ
ಡೆಂಗ್ಯೂ ಹರಡುವ ಸೊಳ್ಳೆಗಳು ನೀರು ನಿಂತ ಸ್ಥಳಗಳಲ್ಲಿ ಮತ್ತು ಸ್ವಚ್ಛತೆ ಇಲ್ಲದ ಕಡೆಗಳಲ್ಲಿ ಉತ್ಪತ್ತಿಯಾಗಲಿದೆ. ಹೀಗಾಗಿ ಮನೆ ಅಕ್ಕಪಕ್ಕದ ಜಾಗವನ್ನು ಸ್ವಚ್ಚವಾಗಿಡಲು ಬಿಬಿಎಂಪಿ ಸೂಚನೆ ನೀಡಿದೆ.;
ಬೆಂಗಳೂರಿನಲ್ಲಿ ಮತ್ತೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ.
ಬೆಂಗಳೂರು ಮಹಾ ನಗರದಲ್ಲಿ ಡೆಂಗ್ಯೂ ಜ್ವರದ ಪ್ರಕರಣಗಳು ಮತ್ತೆ ಏರಿಕೆಯಾಗಿದ್ದು, ರೋಗ ನಿಯಂತ್ರಣಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಠಿಣ ಕ್ರಮಕ್ಕೆ ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ 1,582 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದ್ದು, ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವ ಅಶುಚಿತ್ವಕ್ಕೆ ದಂಡ ವಿಧಿಸಲು ಪಾಲಿಕೆ ನಿರ್ಧರಿಸಿದೆ.
ಸ್ವಚ್ಛತೆ ಕಾಪಾಡದ ಮನೆ ಮಾಲೀಕರಿಗೆ ನಗರ ಪ್ರದೇಶದಲ್ಲಿ 800 ರೂಪಾಯಿ ಮತ್ತು ಗ್ರಾಮೀಣ ಪ್ರದೇಶದಲ್ಲಿ 400 ರೂಪಾಯಿ ದಂಡ ವಿಧಿಸಲಾಗುತ್ತದೆ. ಅದೇ ರೀತಿ, ವಾಣಿಜ್ಯ ಸಂಸ್ಥೆಗಳಾದ ಹೋಟೆಲ್‌ಗಳು, ಶಾಲೆಗಳು, ರೆಸ್ಟೋರೆಂಟ್‌ಗಳು ಮತ್ತು ಅಂಗಡಿಗಳಿಗೆ ನಗರದಲ್ಲಿ 2,000 ರೂಪಾಯಿ ಹಾಗೂ ಗ್ರಾಮೀಣ ಭಾಗದಲ್ಲಿ 1,000 ರೂಪಾಯಿ ದಂಡ ನಿಗದಿಪಡಿಸಲಾಗಿದೆ. ಖಾಲಿ ನಿವೇಶನ ಮತ್ತು ನಿರ್ಮಾಣ ಸ್ಥಳಗಳಲ್ಲಿ ಸ್ವಚ್ಛತೆ ಇಲ್ಲದಿದ್ದರೆ ನಗರದಲ್ಲಿ 4,000 ರೂಪಾಯಿ ಮತ್ತು ಗ್ರಾಮೀಣ ಪ್ರದೇಶದಲ್ಲಿ 2,000 ರೂಪಾಯಿಗಳಷ್ಟು ಭಾರೀ ದಂಡ ತೆರಬೇಕಾಗುತ್ತದೆ.
ಡೆಂಗ್ಯೂ ಜ್ವರವು ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಈ ಸೊಳ್ಳೆಗಳು ನಿಂತ ಶುದ್ಧ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ಸಾಮಾನ್ಯವಾಗಿ ಹಗಲಿನ ಹೊತ್ತಿನಲ್ಲಿ ಕಚ್ಚುತ್ತವೆ. ರೋಗದ ಲಕ್ಷಣಗಳಾದ ತೀವ್ರ ಜ್ವರ, ವಿಪರೀತ ತಲೆನೋವು, ಸ್ನಾಯು ಮತ್ತು ಕೀಲು ನೋವು, ವಾಕರಿಕೆ, ವಾಂತಿ ಮತ್ತು ಚರ್ಮದ ಮೇಲೆ ದದ್ದುಗಳು ಕಾಣಿಸಿಕೊಳ್ಳುತ್ತವೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು, ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಬಿಬಿಎಂಪಿ ಮನವಿ ಮಾಡಿದೆ.