Dengue Outbreak | ಶಂಕಿತ ಡೆಂಗ್ಯೂ ಸೋಂಕಿಗೆ ಶಿವಮೊಗ್ಗ ನರ್ಸಿಂಗ್ ಆಫೀಸರ್ ಬಲಿ
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಇದೀಗ ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ನರ್ಸಿಂಗ್ ಆಫೀಸರ್ ಹೇಮಾ(45) ಸಾವುಕಂಡಿದ್ದಾರೆ.
ರಾಜ್ಯದಾದ್ಯಂತ ಡೆಂಗ್ಯೂ ಪ್ರಕರಣಗಳು ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರುತ್ತಿದೆ. ಈ ನಡುವೆ, ಶಂಕಿತ ಡೆಂಗ್ಯೂ ಜ್ವರಕ್ಕೆ ಶಿವಮೊಗ್ಗದ ಪ್ರತಿಷ್ಠಿತ ಮೆಗ್ಗಾನ್ ಆಸ್ಪತ್ರೆಯ ನರ್ಸಿಂಗ್ ಆಫೀಸರ್ ಬಲಿಯಾಗಿದ್ದಾರೆ.
ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಶಿವಮೊಗ್ಗ ಸರ್ಕಾರಿ ವೈದ್ಯಕೀಯ ಕಾಲೇಜಿನ ಮೆಗ್ಗಾನ್ ಆಸ್ಪತ್ರೆಯ ನರ್ಸಿಂಗ್ ಆಫೀಸರ್ ಹೇಮಾ(45) ಬುಧವಾರ ಸಾವುಕಂಡಿದ್ದಾರೆ.
ಭದ್ರಾವತಿಯ ನಿವಾಸಿಯಾದ ಅವರಿಗೆ 25 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಪದೇಪದೆ ಜ್ವರ ಬಂದು ಹೋಗುತ್ತಿತ್ತು. ಈ ಹಿನ್ನಲೆ ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಈ ನಡುವೆ ಜ್ವರ ಕಡಿಮೆಯಾದ ಬಳಿಕ ಕೆಲಸಕ್ಕೂ ಹೋಗಿಬಂದಿದ್ದರು.
ಬಳಿಕ ಹೇಮಾ ಅವರಿಗೆ ಜ್ವರ ತೀವ್ರವಾಗಿದ್ದು, ಕೋಮಾ ಸ್ಥಿತಿಗೆ ಹೋಗಿದ್ದರು. ಆ ಹಿನ್ನೆಲೆಯಲ್ಲಿ ಅವರಿಗೆ ಮಂಗಳವಾರ ಮಧ್ಯಾಹ್ನದಿಂದಲೇ ವೆಂಟಿಲೇಟರ್ ಹಾಕಲಾಗಿತ್ತು. ಈ ಮಧ್ಯೆ ಹೇಮಾ ಅವರ ಕುಟುಂಬ ಖಾಸಗಿ ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯಲು ಯೋಚಿಸಿದ್ದಾರೆ. ಕೊನೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ದಾರಿ ಮಧ್ಯೆಯೇ ಹೇಮಾ ಕೊನೆಯುಸಿರೆಳೆದಿದ್ದಾರೆ.
ಒಂದು ವಾರದಿಂದ ವ್ಯಾಪಕ ಡೆಂಗ್ಯೂ
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿದ್ದು, ಎರಡು ದಿನಗಳ ಹಿಂದೆ ಕೇವಲ 24 ತಾಸಿನಲ್ಲೇ ಸುಮಾರು ಐದು ನೂರು ಹೊಸ ಪ್ರಕರಣ ಪತ್ತೆಯಾಗಿದ್ದವು. ಆ ಮೂಲಕ ರಾಜ್ಯದಲ್ಲಿ ಒಟ್ಟು ದೃಢ ಪ್ರಕರಣಗಳ ಸಂಖ್ಯೆ 14 ಸಾವಿರ ಮೀರಿತ್ತು. ಆ ಪೈಕಿ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿಯೇ ಬರೋಬ್ಬರಿ 6382 ಪ್ರಕರಣ ದೃಢಪಟ್ಟಿದ್ದವು.
ಭಾನುವಾರ ಪತ್ತೆಯಾಗಿರುವ 469 ಹೊಸ ಡೆಂಗ್ಯೂ ಪ್ರಕರಣಗಳೂ ಸೇರಿದಂತೆ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3428 ಕ್ಕೆ ಏರಿಕೆ ಕಂಡಿದೆ. ಹೊಸದಾಗಿ 23 ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಸೋಂಕು ರಾಜ್ಯವ್ಯಾಪಿ ವ್ಯಾಪಿಸಿರುವ ಅಪಾಯ ಎದುರಾಗಿದೆ ಎಂದು ಸೋಮವಾರ ಹೇಳಲಾಗಿತ್ತು.
ಭಾನುವಾರ ಒಂದೇ ದಿನ ಬಿಬಿಎಂಪಿ ವ್ಯಾಪ್ತಿಯೊಂದರಲ್ಲೇ 1749 ಪರೀಕ್ಷೆಗಳನ್ನು ನಡೆಸಲಾಗಿದ್ದು, 292 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿತ್ತು. ಅಲ್ಲದೆ ಅಂದು, ಕಲಬುರ್ಗಿಯಲ್ಲಿ 20, ಉಡುಪಿಯಲ್ಲಿ 17, ಮೈಸೂರಿನಲ್ಲಿ 15, ರಾಮನಗರದಲ್ಲಿ 14, ಧಾರವಾಡದಲ್ಲಿ 12, ಬಳ್ಳಾರಿಯಲ್ಲಿ 11, ಚಿತ್ರದುರ್ಗ, ತುಮಕೂರು ಹಾಗೂ ಶಿವಮೊಗ್ಗದಲ್ಲಿ ತಲಾ 10 ಹೊಸ ಪ್ರಕರಣಗಳು ದೃಢಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಪ್ರಕರಣಗಳು ದೃಢಪಟ್ಟಿದ್ದವು.
ಆದರೆ ಗಮನಿಸಬೇಕಾದ ಸಂಗತಿ ಎಂದರೆ, ರಾಜ್ಯದ 23 ಜಿಲ್ಲೆಗಳಲ್ಲಿ ಹೊಸದಾಗಿ ದೃಢ ಪ್ರಕರಣಗಳು ವರದಿಯಾಗಿದ್ದವು.