ಗಡಿಯಲ್ಲಿ ಜನಸಂಖ್ಯೆ ಬದಲಾವಣೆಯಿಂದ ದೇಶದ ಭದ್ರತೆ ಮೇಲೆ ಪರಿಣಾಮ: ಕೇಂದ್ರ ಸಚಿವ ಅಮಿತ್ ಶಾ
ಗಡಿ ಗ್ರಾಮಗಳಿಂದ ವಲಸೆ ಹೋಗುವುದನ್ನು ನಿಲ್ಲಿಸಲು ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮ ಆರಂಭಿಸಿದೆ.;
ಗಡಿ ಪ್ರದೇಶಗಳಲ್ಲಿ ಆಗುತ್ತಿರುವ ಜನಸಂಖ್ಯಾ ಬದಲಾವಣೆಗಳಿಂದ ದೇಶದ ಮತ್ತು ಅದರ ಗಡಿಗಳ ಭದ್ರತೆಯ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಎರಡು ದಿನಗಳ ವೈಬ್ರೆಂಟ್ ವಿಲೇಜಸ್ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಗಡಿ ಗ್ರಾಮಗಳಿಂದ ವಲಸೆ ಹೋಗುವುದನ್ನು ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮ ಆರಂಭಿಸಿದೆ. ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ ಗಡಿ ಗ್ರಾಮಗಳಲ್ಲಿ ಮೂಲಸೌಕರ್ಯ, ಸಂರಕ್ಷಣೆ ಮತ್ತು ಸಂಸ್ಕೃತಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ಉದ್ಯೋಗವನ್ನು ಹೆಚ್ಚಿಸುತ್ತಿದೆ. ಅರುಣಾಚಲ ಪ್ರದೇಶದಲ್ಲಿ ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮ ಜಾರಿಗೆ ತಂದ ನಂತರ ಅನೇಕ ಗಡಿ ಗ್ರಾಮಗಳಲ್ಲಿ ಜನಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದರು.
ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮ ಮೂರು ಪ್ರಮುಖ ಅಂಶಗಳನ್ನು ಆಧರಿಸಿದೆ. ಗಡಿ ಗ್ರಾಮಗಳಿಂದ ವಲಸೆ ಹೋಗುವುದನ್ನು ತಡೆಯುವುದು, ಗಡಿ ಗ್ರಾಮಗಳ ಪ್ರತಿಯೊಬ್ಬ ನಾಗರಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಶೇಕಡಾ ನೂರರಷ್ಟು ಪ್ರಯೋಜನ ಪಡೆಯುವುದನ್ನು ಖಾತ್ರಿಪಡಿಸಿಕೊಳ್ಳುವುದು, ಗಡಿ ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಲು ಗ್ರಾಮಗಳನ್ನು ಬಲವಾದ ಸಾಧನಗಳಾಗಿ ಅಭಿವೃದ್ಧಿಪಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಕಾರ್ಯಕ್ರಮ ಅಡಿಯಲ್ಲಿ ಮೊದಲೇ ಗುರುತಿಸಲಾದ ಗ್ರಾಮಗಳು ನಮ್ಮ ದೇಶ ಮತ್ತು ಅದರ ಗಡಿಗಳ ಭದ್ರತೆಯಲ್ಲಿ ಬಹಳ ಮಹತ್ವದ ಸಾಧನಗಳಾಗಿವೆ ಎಂದರು.
ಏನಿದು ವೈಬ್ರೆಂಟ್ ವಿಲೇಜಸ್
ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಸಿಕ್ಕಿಂ, ಉತ್ತರಾಖಂಡ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ಉತ್ತರದ ಗಡಿಗೆ ಹೊಂದಿಕೊಂಡಿರುವ 19 ಜಿಲ್ಲೆಗಳ 46 ಬ್ಲಾಕ್‌ಗಳಲ್ಲಿನ ಆಯ್ದ ಹಳ್ಳಿಗಳ ಸಮಗ್ರ ಅಭಿವೃದ್ಧಿಗಾಗಿ 2023ರ ಫೆ.15 ರಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ (ವಿವಿಪಿ) ಅನ್ನು ಸರ್ಕಾರ ಪ್ರಾರಂಭಿಸಿದೆ.
ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪರಂಪರೆ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಕೃಷಿ, ತೋಟಗಾರಿಕೆ ಸೇರಿದಂತೆ ಸಹಕಾರಿ ಸಂಘಗಳ ಅಭಿವೃದ್ಧಿ, ಔಷಧೀಯ ಸಸ್ಯಗಳು, ಗಿಡಮೂಲಿಕೆಗಳ ಕೃಷಿ ಇತ್ಯಾದಿಗಳ ಮೂಲಕ ಜೀವನೋಪಾಯ ಸೃಷ್ಟಿಗೆ ಅವಕಾಶಗಳನ್ನು ಸೃಷ್ಟಿಸಲು ಆಯ್ದ ಹಳ್ಳಿಗಳಲ್ಲಿ ಮಧ್ಯಸ್ಥಿಕೆಗಳ ಕೇಂದ್ರೀಕೃತ ಕ್ಷೇತ್ರಗಳನ್ನು ಈ ಕಾರ್ಯಕ್ರಮವು ಕಲ್ಪಿಸುತ್ತದೆ.
ಸಂಪರ್ಕವಿಲ್ಲದ ಹಳ್ಳಿಗಳಿಗೆ ರಸ್ತೆ ಸಂಪರ್ಕ, ವಸತಿ ಮತ್ತು ಗ್ರಾಮ ಮೂಲಸೌಕರ್ಯಗಳು, ನವೀಕರಿಸಬಹುದಾದ ಇಂಧನ ಸೇರಿದಂತೆ ಇಂಧನ, ದೂರದರ್ಶನ ಮತ್ತು ದೂರಸಂಪರ್ಕ ಸಂಪರ್ಕವನ್ನು ಒದಗಿಸುವುದು ಈ ಮಧ್ಯಸ್ಥಿಕೆಗಳಲ್ಲಿ ಸೇರಿದೆ. ಆಯ್ದ ಹಳ್ಳಿಗಳಲ್ಲಿ ಜನರು ವಾಸಿಸಲು ಸಾಕಷ್ಟು ಪ್ರೋತ್ಸಾಹವನ್ನು ಸೃಷ್ಟಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
16 ರಾಜ್ಯಗಳು ಮತ್ತು ಭೂ ಗಡಿಗಳಿಗೆ ಹೊಂದಿಕೊಂಡಿರುವ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಂತರರಾಷ್ಟ್ರೀಯ ಗಡಿಯ ಮೊದಲ ವಾಸಸ್ಥಳದಿಂದ 0-10 ಕಿ.ಮೀ ದೂರದಲ್ಲಿರುವ (ವೈಮಾನಿಕ ದೂರ) ಎಲ್ಲಾ ಜನಗಣತಿ ಗ್ರಾಮಗಳು, ಪಟ್ಟಣಗಳು, ಅರೆ ನಗರ ಮತ್ತು ನಗರ ಪ್ರದೇಶಗಳಲ್ಲಿ, ರಸ್ತೆ ಮತ್ತು ಸೇತುವೆಗಳು, ಆರೋಗ್ಯ, ಶಿಕ್ಷಣ, ಕೃಷಿ, ಕ್ರೀಡೆ, ಕುಡಿಯುವ ನೀರು ಮತ್ತು ನೈರ್ಮಲ್ಯ, ಅಂಗನವಾಡಿ, ಸಮುದಾಯ ಕೇಂದ್ರ, ಸಣ್ಣ ಪ್ರಮಾಣದ ಕೈಗಾರಿಕೆಗಳು ಇತ್ಯಾದಿಗಳಿಗೆ ಸಂಬಂಧಿಸಿದ ಅಗತ್ಯ ಮೂಲಸೌಕರ್ಯಗಳಲ್ಲಿನ ಗುರುತಿಸಲಾದ ಅಂತರಗಳಿಗಾಗಿ ಕಾಮಗಾರಿಗಳು, ಯೋಜನೆಗಳನ್ನು ಗಡಿ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ ಅಡಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ.
ಹಿಮಾಚಲ ಪ್ರದೇಶದ ಕಿನ್ನೌರ್ ಮತ್ತು ಲಾಹುಲ್ ಮತ್ತು ಸ್ಪಿತಿ ಜಿಲ್ಲೆಗಳ ಉತ್ತರ ಗಡಿಗೆ ಹೊಂದಿಕೊಂಡಿರುವ ಬ್ಲಾಕ್‌ಗಳಲ್ಲಿನ ಆಯ್ದ ಹಳ್ಳಿಗಳನ್ನು ವಿವಿಪಿ ವ್ಯಾಪ್ತಿಗೆ ಒಳಪಡಿಸಲಾಗಿದೆ. ಚಮೋಲಿ, ಉತ್ತರಕಾಶಿ ಮತ್ತು ರುದ್ರಪ್ರಯಾಗ ಜಿಲ್ಲೆಗಳ ಉತ್ತರ ಗಡಿಗೆ ಹೊಂದಿಕೊಂಡಿರುವ ಬ್ಲಾಕ್‌ಗಳಲ್ಲಿನ ಆಯ್ದ ಹಳ್ಳಿಗಳನ್ನು ಸಹ ವಿವಿಪಿ ವ್ಯಾಪ್ತಿಗೆ ಒಳಪಡಿಸಲಾಗಿದೆ.