Mysore MUDA Case | ಇಡಿ ಮುಟ್ಟುಗೋಲು ಹಾಕಿಕೊಂಡ ಸ್ಥಿರಾಸ್ತಿ ಮಾಹಿತಿ ಬಹಿರಂಗಕ್ಕೆ ಆಗ್ರಹ

ಇಡಿ ಮುಟ್ಟುಗೋಲು ಹಾಕಿಕೊಂಡ ನಿವೇಶನಗಳ ಮಾಹಿತಿ ಸೂಚನಾ ಫಲಕದಲ್ಲಿ ಹಾಕಬೇಕು. ಸದರಿ ನಿವೇಶನ ಖರೀದಿ ಮಾಡದಂತೆ ಪ್ರಕಟಣೆ ನೀಡಬೇಕು ಎಂದು ಸ್ನೇಹಮಯಿ ಕೃಷ್ಣ ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.;

Update: 2025-01-19 07:24 GMT
ಸ್ನೇಹಮಯಿ ಕೃಷ್ಣ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆ ತೀವ್ರಗೊಂಡಿದೆ.

142 ಮುಡಾ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಬೆನ್ನಲ್ಲೇ ಮತ್ತಷ್ಟು ಅಕ್ರಮ ನಡೆದಿರುವ ಸಾಧ್ಯತೆ ಹಿನ್ನೆಲೆಯಲ್ಲಿ 631ನಿವೇಶನಗಳ ವಿವರ ಕೋರಿ ಮುಡಾಗೆ ಇಡಿ ಪತ್ರ ಬರೆದಿದೆ.

ಈ ಮಧ್ಯೆ, ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿರುವ 142 ನಿವೇಶನಗಳ ಮಾಹಿತಿ ಬಹಿರಂಗಪಡಿಸುವಂತೆ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರು ಮುಡಾ ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಮುಡಾದಿಂದ ಶೇ 50:50 ಅನುಪಾತದಲ್ಲಿ ನಿವೇಶನ ಪಡೆದುಕೊಂಡವರು ಇಡಿ ತನಿಖೆಯ ಭಯ ಹಾಗೂ ಪ್ರಾಧಿಕಾರಕ್ಕೆ ನಿವೇಶನ ಹಿಂತಿರುಗಿಸಬೇಕೆಂಬ ಆತಂಕದಲ್ಲಿ ಕಡಿಮೆ ಬೆಲೆಗೆ ನಿವೇಶನ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅಮಾಯಕರು ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಇಡಿ ಮುಟ್ಟುಗೋಲು ಹಾಕಿಕೊಂಡಿರುವ 142 ನಿವೇಶನಗಳ ಪ್ರದೇಶ, ನಿವೇಶನದ ಸಂಖ್ಯೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕು. ಆ ಮೂಲಕ ಅಮಾಯಕರು ಮೋಸ ಹೋಗುವುದನ್ನು ತಪ್ಪಿಸಬೇಕು ಎಂದು ವಾಟ್ಸ್ ಆಪ್ ಮೂಲಕ ಮುಡಾ ಆಯುಕ್ತರಿಗೆ ರವಾನಿಸಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಭಾನುವಾರ ಕಚೇರಿ ರಜೆ ಇರುವ ಕಾರಣ ಮುಡಾ ಆಯುಕ್ತರ ಮೊಬೈಲ್ ಸಂಖ್ಯೆಗೆ ವಾಟ್ಸ್ ಆಪ್ ಮೂಲಕ ಪತ್ರ ರವಾನಿಸಿದ್ದೇನೆ. ಸೋಮವಾರ ಕಚೇರಿಗೆ ಖುದ್ದು ಭೇಟಿ ನೀಡಿದ ಅಧಿಕೃತ ಪತ್ರ ನೀಡುತ್ತೇನೆ ಎಂದು ಸ್ನೇಹಮಯಿ ಕೃಷ್ಣ ಅವರು ಭಾನುವಾರ ಮೈಸೂರಿನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇಡಿ ಮುಟ್ಟುಗೋಲು ಹಾಕಿಕೊಂಡಿರುವ ನಿವೇಶನಗಳ ಮಾಹಿತಿಯನ್ನು ಮುಡಾ ಕಚೇರಿಯ ಸೂಚನಾ ಫಲಕದಲ್ಲಿ ಹಾಕಬೇಕು. ಸದರಿ ನಿವೇಶನಗಳನ್ನು ಯಾರೂ ಖರೀದಿ ಮಾಡಬಾರದೆಂದು ಪ್ರಕಟಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ಶುಕ್ರವಾರವಷ್ಟೇ ಜಾರಿ ನಿರ್ದೇಶನಾಲಯ ಮುಡಾದಿಂದ ಹಂಚಿಕೆಯಾಗಿದ್ದ 300 ಕೋಟಿ ರೂ. ಮೌಲ್ಯದ 142 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿತ್ತು.

ಅಕ್ರಮಕ್ಕೆ ಕೋಡ್‌ವರ್ಡ್‌ ಬಳಕೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯಕ್ಕೆ ಮಹತ್ವದ ಸುಳಿವು ದೊರೆತಿದೆ. ಈಚೆಗೆ ಪ್ರಕರಣ ಸಂಬಂಧ ಮೈಸೂರಿನ ಬಿಲ್ಡರ್‌ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಜಯರಾಂ ನಿವಾಸದ ಮೇಲೆ ದಾಳಿ ನಡೆಸಿ, ಶೋಧಿಸಿದ್ದ ತನಿಖಾಧಿಕಾರಿಗಳು ಡೈರಿ ದೊರೆತಿದ್ದು, ಅದರಲ್ಲಿ ಅಕ್ರಮ ವಹಿವಾಟಿಗೆ ಕೋಡ್‌ ವರ್ಡ್‌ ಬಳಸಿರುವುದು ಪತ್ತೆಯಾಗಿದೆ.

ಜಯರಾಮ್ ಅವರು ಕೋಕನಟ್ ಎಂಬ ಹೆಸರಿನಲ್ಲಿ ಕೋಡ್‌ ವರ್ಡ್ ಬಳಸಿದ್ದಾರೆ. 1 ಕೋಕನಟ್ ಎಂದರೆ 1 ಲಕ್ಷ ರೂಪಾಯಿ. 50 ಕೋಕನಟ್ ಎಂದರೆ 50 ಲಕ್ಷ ರೂ. ಮತ್ತು 100 ಕೋಕನಟ್ ಎಂದರೆ 1 ಕೋಟಿ ಎಂಬ ಕೋಡ್ ವರ್ಡ್‌ ಬಳಸಿರುವುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಆಪ್ತರ ಮನೆಗಳ ಮೇಲೆ ನಡೆಸಿದ ದಾಳಿಯ ವೇಳೆ ದೊರೆತಿರುವ ಹಲವು ಆಧಾರಗಳ ಮೇಲೆ ಮುಡಾದಿಂದ ಹಂಚಿಕೆಯಾಗಿರುವ 631 ನಿವೇಶನಗಳ ಮಾಹಿತಿ ಒದಗಿಸುವಂತೆ ಜಾರಿ ನಿರ್ದೇಶನಾಲಯವು ಮುಡಾಗೆ ಪತ್ರ ಬರೆದಿದೆ. ಇದರಿಂದ ನಿವೇಶನ ಹಂಚಿಕೆಯ ಮತ್ತಷ್ಟು ಅಕ್ರಮಗಳು ಬಹಿರಂಗವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Tags:    

Similar News