ತೆಲಂಗಾಣ ಸಚಿವೆ ಕೊಂಡಾ ಸುರೇಖಾ ವಿರುದ್ಧ ಮಾನಹಾನಿ ಪ್ರಕರಣ
ಕೊಂಡಾ ಸುರೇಖಾ ಅವರು ನಮ್ಮ ಕುಟುಂಬದ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ಹಾಗೂ ರಾಜಕೀಯದಲ್ಲಿ ಅಗ್ಗದ ಪ್ರಚಾರ ಪಡೆಯಲು ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರಾಮರಾವ್ ಅವರು ನ್ಯಾಯಾಲಯಕ್ಕೆ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ.;
ತೆಲುಗು ನಟಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ವಿಚ್ಛೇದನಕ್ಕೆ ಬಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರೇ ಕಾರಣ ಎಂಬ ಹೇಳಿಕೆ ನೀಡಿದ್ದ ತೆಲಂಗಾಣ ಸಚಿವೆ ಕೊಂಡಾ ಸುರೇಖಾ ವಿರುದ್ಧ ಗುರುವಾರ ಮಾನನಷ್ಟ ಪ್ರಕರಣ ದಾಖಲಾಗಿದೆ.
ಅ.2 ರಂದು ತಮ್ಮ ಹೇಳಿಕೆಗೆ ಕ್ಷಮೆಯಾಚಿಸುವಂತೆ ಸಚಿವೆ ಕೊಂಡಾ ಸುರೇಖಾ ಅವರಿಗೆ ಕೆ.ಟಿ. ರಾಮರಾವ್ ನೋಟಿಸ್ ಕಳುಹಿಸಿದ್ದರು. ವೈಯಕ್ತಿಕ ಬದುಕು ಹಾಗೂ ಪ್ರತಿಷ್ಠೆಗೆ ಹಾನಿ ಉಂಟು ಮಾಡಿದ ಆರೋಪದ ಮೇಲೆ ಸುರೇಖಾ ವಿರುದ್ಧ ಹೈದರಾಬಾದ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಸುರೇಖಾ ಅವರು ನಮ್ಮ ಕುಟುಂಬದ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ಹಾಗೂ ರಾಜಕೀಯದಲ್ಲಿ ಅಗ್ಗದ ಪ್ರಚಾರ ಪಡೆಯಲು ಇಂತಹ ನೀಚ ಹೇಳಿಕೆ ನೀಡಿದ್ದಾರೆ ಎಂದು ರಾಮರಾವ್ ದೂರಿನಲ್ಲಿ ತಿಳಿಸಿದ್ದಾರೆ.
2024 ಏಪ್ರಿಲ್ ತಿಂಗಳಲ್ಲಿ ಚುನಾವಣಾ ಪ್ರಚಾರದ ವೇಳೆ ಸುರೇಖಾ ಅವರು ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದರು. ಆಗ ಚುನಾವಣಾ ಆಯೋಗ ಸುರೇಖಾ ಅವರಿಗೆ ಮಾತಿನಲ್ಲಿ ಸಂಯಮ ಪಾಲಿಸುವಂತೆ ಸೂಚಿಸಿತ್ತು ಎಂದಿದ್ದಾರೆ.
2021 ರಲ್ಲಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ವಿಚ್ಛೇದನಕ್ಕೆ ಕೆಟಿಆರ್ ಕಾರಣ ಎಂದು ಸುರೇಖಾ ಆರೋಪಿಸಿದ್ದರು, ಇದು ತೆಲುಗು ಚಿತ್ರರಂಗ ಹಾಗೂ ಆಂಧ್ರ ರಾಜಕಾರಣದಲ್ಲಿ ತೀವ್ರ ವಿವಾದ ಸೃಷ್ಟಿಸಿತ್ತು.
ಕೊಂಡಾ ಸುರೇಖಾ ಹೇಳಿಕೆಗೆ ನಟರಾದ ನಾಗಾರ್ಜುನ, ನಾಗ ಚೈತನ್ಯ ಹಾಗೂ ನಟಿ ಸಮಂತಾ ರುತ್ ಪ್ರಭು ಕೂಡ ಸಚಿವೆಯ ಹೇಳಿಕೆ ಖಂಡಿಸಿದ್ದರು. ನಟ ನಾಗಾರ್ಜುನ ಅವರು ಸುರೇಖಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕೂಡ ದಾಖಲಿಸಿದ್ದರು.