ಶೈಕ್ಷಣಿಕ ಸೂಚ್ಯಂಕದಲ್ಲಿ ಕುಸಿತ; ವಿಜಯನಗರ ಡಿಡಿಪಿಐ, ಬಿಇಒ ಅಮಾನತಿಗೆ ಸಿಎಂ ಆದೇಶ

Update: 2024-06-21 08:31 GMT

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಶೈಕ್ಷಣಿಕವಾಗಿ ವಿಜಯನಗರ ಜಿಲ್ಲೆ 10 ನೇ ಸ್ಥಾನದಿಂದ 27 ನೇ ಸ್ಥಾನಕ್ಕೆ ಕುಸಿದಿದೆ! ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗರಂ ಆಗಿದ್ದು, ಶಿಕ್ಷಣ ಇಲಾಖೆಯ ಡಿಡಿಪಿಐ (ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು) ಮತ್ತು ಬಿಇಒ (ಬ್ಲಾಕ್‌ ಶಿಕ್ಷಣಾಧಿಕಾರಿ) ಗಳನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ವಿಜಯನಗರದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ  ಶೈಕ್ಷಣಿಕ ಕುಸಿತಕ್ಕೆ ನಿಮ್ಮನ್ನು ಏಕೆ ಹೊಣೆ ಮಾಡಬಾರದು ಎಂದು ಡಿಡಿಪಿಐ ಅವರನ್ನು ಪ್ರಶ್ನಿಸಿದರು. ಎಸ್ಎಸ್ಎಲ್ಸಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಪ್ರಮಾಣ ಕುಸಿದಿರುವುದಕ್ಕೆನೀವೇ ಕಾರಣ. ನಿಮ್ಮ ಬಿಇಒ ಗಳು, ಶಿಕ್ಷಕರ ಪ್ರಯತ್ನ ಏನು? ಯಾವ ದಿಕ್ಕಿನಲ್ಲಿದೆ? ಈ ಕಳಪಡೆ ಸಾಧನೆಗೆ ನಿಮ್ಮ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕು ಎಂದು ನೀವೇ ಹೇಳಿ ಎಂದು ಸಿಎಂ ಡಿಡಿಪಿಐ ಗೆ ಪ್ರಶ್ನಿಸಿದರು. ಈ ಬಾರಿ ಶೇ೨೦ ರಷ್ಟು ಗ್ರೇಸ್ ಅಂಕಗಳನ್ನು ಕೊಟ್ಟರೂ ಈ ಮಟ್ಟಕ್ಕೆ ಕುಸಿದಿದ್ದೀರಿ ಎಂದರೆ ನಿಮ್ಮ ಒಟ್ಟು ಸಾಧನೆ ಬಗ್ಗೆ ನಿಮಗೆ ಸಮಾಧಾನ ಇದೆಯೇ ಎಂದು ಪ್ರಶ್ನಿಸಿದರು.

10 ನೇ ಸ್ಥಾನದಿಂದ 27 ನೇ ಸ್ಥಾನಕ್ಕೆ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಜಾರಿರುವಾಗ ನಿಮಗೆ ನಾಚಿಕೆ ಆಗಬೇಕಲ್ವಾ ಎಂದು ಸಿಇಒ ಅವರನ್ನು ಪ್ರಶ್ನಿಸಿದರು.  ಶಿಕ್ಷಣ ಇಲಾಖೆ ಕಾರ್ಯದರ್ಶಿ ರಿತೀಶ್ ಅವರಿಗೆ ಸಭೆ ಮಧ್ಯದಲ್ಲೇ ದೂರವಾಣಿ ಮೂಲಕ ಸಂಪರ್ಕಿಸಿದ ಸಿಎಂ, ಜಿಲ್ಲೆಯ ಕಳಪೆ ಸಾಧನೆ ಬಗ್ಗೆ ಪ್ರಶ್ನಿಸಿ, ಡಿಡಿಪಿಐ ಮತ್ತು ಬಿಇಒ ಇಬ್ಬರನ್ನೂ ತಕ್ಷಣದಿಂದ ಅಮಾನತ್ತಿನಲ್ಲಿ ಇಡಬೇಕು. ಸಿಇಒ ಅವರಿಗೆ ನೋಟಿಸ್ ನೀಡಬೇಕು ಎಂದು ಸೂಚಿಸಿ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಬಗ್ಗೆ ಗಂಭೀರವಾಗಿ ಯೋಜನೆಗಳನ್ನು ರೂಪಿಸುವಂತೆ ಸೂಚಿಸಿದರು. ಡಿಡಿಪಿಐ ಅವರನ್ನು ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರು ಸಭೆಯಿಂದ ಹೊರಗೆ ನಡೆಯುವಂತೆ ಸೂಚಿಸಿದರು.

ಇತರ ಸೂಚನೆಗಳು

ಈ ಮಟ್ಟದ ಫಲಿತಾಂಶದ ಕಾರಣಕ್ಕಾಗಿ ಸಂಬಂಧಪಟ್ಟವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ? ಪ್ರತಿ ತಿಂಗಳ ಸಭೆಗಳ ಸಭೆಗಳಲ್ಲಿ ಏನು ಸೂಚನೆ ನೀಡಿದ್ದೀರಿ ಎಂದು CEO ಮತ್ತು ಜಿಲ್ಲಾಧಿಕಾರಿಗೆ ಪ್ರಶ್ನಿಸಿದರು.

• ಶಿಕ್ಷಣ ವ್ಯವಸ್ಥೆ ಅತ್ಯಂತ ಕೆಟ್ಟಿದೆ. ಇದನ್ನು ಸರಿಯಾಗಿ ಸುಧಾರಿಸದಿದ್ದರೆ ಸಮಾಜಕ್ಕೆ ದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ. ಮಕ್ಕಳ ಭವಿಷ್ಯ ಏನಾಗಬೇಕು? ಇದರಲ್ಲಿ ಮಕ್ಕಳ ತಪ್ಪಿಲ್ಲ. ಡಿಡಿಪಿಐ, ಬಿಇಒ ಮತ್ತು ಶಿಕ್ಷಕ ಸಮೂಹ ಇದರ ಹೊಣೆ ಹೊರಬೇಕಲ್ಲವೇ ಎಂದು ಪ್ರಶ್ನಿಸಿದರು.

• ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಿಗೆ ಎಷ್ಟು ಬಾರಿ ಭೇಟಿ ನೀಡಿದ್ದೀರಿ? ಶೈಕ್ಷಣಿಕ ವಾತಾವರಣ ಮತ್ತು ಊಟ, ವ್ಯವಸ್ಥೆಯ ಗುಣಮಟ್ಟವನ್ನು ಎಷ್ಟು ಬಾರಿ ಪರಿಶೀಲಿಸಿದ್ದೀರಿ? ರಾಜ್ಯ ಸರಾಸರಿಗೆ ಹೋಲಿಸಿದರೆ ಜಿಲ್ಲೆಯ ಹಾಸ್ಟೆಲ್ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕಡಿಮೆ ಆಗಿದ್ದು ಏಕೆ ? ಯಾವ ವಿಷಯಗಳಲ್ಲಿ ದುರ್ಬಲ ಇದೆ ಆ ವಿಷಯಗಳಲ್ಲಿ ಪ್ರತ್ಯೇಕ ಕೋಚಿಂಗ್ ವ್ಯವಸ್ಥೆ ಮಾಡಿದ್ದೀರಿ? ಎಷ್ಟು ಮಂದಿ ವಿದ್ಯಾರ್ಥಿಗಳು ರಾತ್ರಿ ಹಾಸ್ಟೆಲ್ಗಳಲ್ಲೇ ಉಳಿಯುತ್ತಾರೆ? ಎಂದು ಪ್ರಶ್ನಿಸಿ ಯಾವ ಯಾವ ಅಧಿಕಾರಿ ಯಾವ ಯಾವ ಹಾಸ್ಟೆಲ್ಗಳಲ್ಲಿ ಬೇಟಿ ನೀಡಿದ್ದೀರಿ ? ಭೇಟಿ ನೀಡಿದ್ದರೂ ಇನ್ನೂ ಸಮಸ್ಯೆಗಳು ಏಕೆ ಉಳಿದಿವೆ ಎಂದು ಪ್ರಶ್ನಿಸಿದರು.

• ಎಸ್ಟಿ ಹಾಸ್ಟೆಲ್ಗಳಲ್ಲಿ, ಕ್ರೈಸ್ ಹಾಸ್ಟೆಲ್ಗಳಲ್ಲಿ ಅಗತ್ಯ ನಾಗರಿಕ ಸೌಲತ್ತುಗಳನ್ನು ಒದಗಿಸದ ಕಾರಣಕ್ಕೆ ಸಮಾಜ ಕಲ್ಯಾಣ ಇಲಾಖೆಯ ಡಿಡಿ ಮಂಜುನಾಥ್ ಅವರಿಗೆ ಲೋಕಾಯುಕ್ತ ದಿಂದ ನೋಟಿಸ್ ನೀಡಿರುವ ಪ್ರಕರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಈ ಲೋಪಕ್ಕೆ ರಾಜ್ಯ ಮಟ್ಟದಲ್ಲೇ ಟೆಂಡರ್ ನೀಡುವುದರಿಂದ ಈ ಸಮಸ್ಯೆ ಆಗುತ್ತಿದೆ, ಜಿಲ್ಲೆಗಳಿಗೆ ಸರಬರಾಜು ಆಗುವಾಗ ಲೇಟಾಗುತ್ತಿದೆ ಎನ್ನುವ ಉತ್ತರ ಅಧಿಕಾರಿಗಳಿಂದ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಜಿಲ್ಲಾ ಮಟ್ಟದಲ್ಲೇ ಟೆಂಡರ್ ಕರೆದು ಸರಬರಾಜು ಮಾಡಲು ಅವಕಾಶ ಮಾಡಿಕೊಡುವ ಬಗ್ಗೆ ಪರಿಶೀಲನೆ ನಡೆಸಲು ಸಿಎಂ ಸೂಚಿಸಿದರು.

• ಜಿಲ್ಲೆಯಲ್ಲಿ ಪ್ರಸ್ತುತ 200 ಬೆಡ್ ಆಸ್ಪತ್ರೆ ಕಾರ್ಯ ನಡೆಯುತ್ತಿದೆ. ಆದರೆ ಬೇಡಿಕೆ ಹಿನ್ನೆಲೆಯಲ್ಲಿ ಇದನ್ನು 400 ಬೆಡ್ ಆಸ್ಪತ್ರೆಯನ್ನಾಗಿ ಉನ್ನತೀಕರಿಸಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದಾರೆ..

• ನರೇಗಾದಲ್ಲಿ ಸಮಯಕ್ಕೆ ಸರಿಯಾಗಿ ಮಾನವ ದಿನಗಳ ಕೂಲಿ ಹಣ ಪಾವತಿಯಾಗಬೇಕು. ಅನಗತ್ಯ ಲೇಟ್ ಆಗಬಾರದು ಎನ್ನುವ ಸೂಚನೆ.

• ನರೇಗಾದಲ್ಲಿ ಅಂಗನವಾಡಿ ಕಟ್ಟಡಗಳು, ಶಾಲೆ ಕೊಠಡಿಗಳು, ಕಾಂಪೌಂಡ್ ಬೇಡಿಕೆಗಳು, ಊಟದ ಗುಣಮಟ್ಟ , ಅಡುಗೆ ಕೋಣೆಗಳು ಮತ್ತು ಶೌಚಾಲಯಗಳ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳ ಪ್ರಮಾಣಕ್ಕೆ ತಕ್ಕಂತೆ ಸವಲತ್ತುಗಳನ್ನು ಒದಗಿಸುವಂತೆ ಸೂಚನೆ ನೀಡಲಾಗಿದೆ.

• ಕಲುಶಿತ ನೀರು ಕುಡಿದ ಜನರ ಆರೋಗ್ಯ ಮತ್ತು ಜೀವಕ್ಕೆ ತೊಂದರೆ ಆದರೆ ಅದಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ಗಳೇ ಹೊಣೆ.

• ಜಿಲ್ಲೆಯಲ್ಲಿ ಹಿಂದಿನ ಸರ್ಕಾರ ಈ ಭಾಗಕ್ಕೆ ಒಂದೂ ಮನೆ ಕೊಟ್ಟಿಲ್ಲ. ನೀವು 500 ಕೋಟಿ ಕೊಟ್ಟಬಳಿಕ 1500 ಮನೆಗಳನ್ನು ಪೂರ್ಣಗೊಳಿಸಿ ಜನರಿಗೆ ವಿತರಿಸಿದ್ದೇವೆ. ಬಾಕಿ 1600 ಕ್ಕೂ ಮನೆಗಳನ್ನು ಸ್ಲಂ ಬೋರ್ಡ್ನಿಂದ ಪೂರ್ಣಗೊಳಿಸಿ ಜನರಿಗೆ ವಿತರಿಸುತ್ತೇವೆ. ಒಟ್ಟು ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮನೆಗಳನ್ನು ಈ ವರ್ಷದೊಳಗೆ ವಿತರಿಸಲಾಗುವುದು.

• ಈಗಾಗಲೇ 41 ಕೆರೆಗಳನ್ನು ತುಂಬಿಸಿ ಚಾಲ್ತಿ ನೀಡಲಾಗಿದೆ. ಈ ಮಳೆಗಾಲದಲ್ಲಿ ಬಾಕಿ ಇರುವ 9 ಕೆರೆಗಳನ್ನು ತುಂಬಿಸಿ ಲೋಕಾರ್ಪಣೆ ಮಾಡಲು ಸೂಚಿಸಲಾಗುವುದು.

Tags:    

Similar News