ಆರ್‌ಎಸ್‌ಎಸ್‌ ವಿರುದ್ಧ ಸಿದ್ದರಾಮಯ್ಯ 'ತಮಿಳುನಾಡು ಮಾದರಿ' ಅಸ್ತ್ರ, ಏನಿದರ ಮರ್ಮ?

ವರದಿ ಸ್ವೀಕರಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಕಾನೂನು ತಜ್ಞರೊಂದಿಗೆ ಚರ್ಚಿಸಿ, ಸಾಧಕ-ಬಾಧಕ ಪರಿಶೀಲಿಸಿ ನಿರ್ಧಾರ ಕೈಗೊಂಡಿದ್ದಾರೆ.

Update: 2025-10-17 01:30 GMT

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು "ತಮಿಳುನಾಡು ಮಾದರಿ"ಯನ್ನು ಅನುಸರಿಸಿರುವುದು ಕರ್ನಾಟಕದ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಸರ್ಕಾರದ ಈ ನಡೆ, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದ್ದು, ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದೆ.

ಪ್ರಿಯಾಂಕ್ ಖರ್ಗೆ ಪ್ರಸ್ತಾಪ, ಸಿಎಂ ಸೂಚನೆ: ಸರ್ಕಾರದ ನಡೆ ಏನು?

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಶಾಖೆ ಮತ್ತು ಬೈಠಕ್‌ಗಳಿಗೆ ನಿರ್ಬಂಧ ಹೇರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಡಾವಳಿ ಕಳುಹಿಸಿದ್ದರು. ಈ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಸಿದ್ದರಾಮಯ್ಯ, ತಮಿಳುನಾಡಿನಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ನಿಯಂತ್ರಿಸಲು ಅನುಸರಿಸುತ್ತಿರುವ ಕಾನೂನು ಮತ್ತು ನಿಯಮಾವಳಿಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.

ಅದರಂತೆ‌ ಸಿಎಂ ಸಿದ್ದರಾಮಯ್ಯ ಅವರು ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ, ಸಾಧಕ-ಬಾಧಕಗಳನ್ನು ಪರಿಶೀಲಿಸಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು, ಖಾಸಗಿ ಸಂಸ್ಥೆಗಳ ಆವರಣದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಕಡ್ಡಾಯಗೊಳಿಸಲಾಗಿದೆ.  

ಆರ್‌ಎಸ್‌ಎಸ್‌ ವಿರುದ್ಧ ಸಿದ್ದರಾಮಯ್ಯ ನಿಲುವು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನಿಂದಲೂ ಆರ್‌ಎಸ್‌ಎಸ್ ಸಿದ್ಧಾಂತವನ್ನು ವಿರೋಧಿಸುತ್ತಾ ಬಂದಿದ್ದಾರೆ. ಸಂಘವು ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸ್ವಯಂ ಸೇವಾ ಸಂಘಟನೆಯ ಹೆಸರಿನಲ್ಲಿ ರಾಜಕೀಯ ಗುರಿಗಳನ್ನು ಹೊಂದಿದೆ ಎಂದು ಅವರು ಹಲವು ಬಾರಿ ಸಾರ್ವಜನಿಕವಾಗಿ ಟೀಕಿಸಿದ್ದಾರೆ. ಆದರೆ, ಈ ಹಿಂದೆ ಆರ್‌ಎಸ್‌ಎಸ್‌ ಅಂಗಸಂಸ್ಥೆಗಳಿಗೆ ಭೂಮಿ ಹಂಚಿಕೆಯಂತಹ ವಿವಾದಗಳು ಎದ್ದಾಗಲೂ, ಸರ್ಕಾರ ನೇರ ಕ್ರಮ ಕೈಗೊಂಡಿರಲಿಲ್ಲ. ಇದೀಗ ಪ್ರಿಯಾಂಕ್ ಖರ್ಗೆ ಅವರ ಪ್ರಸ್ತಾಪವು ಸರ್ಕಾರದ ನಿಲುವಿನಲ್ಲಿ ಬದಲಾವಣೆಯ ಸ್ಪಷ್ಟ ಸೂಚನೆ ನೀಡಿದೆ.

ಜಾಲತಾಣದಲ್ಲಿ ತಾರಕಕ್ಕೇರಿದ ಚರ್ಚೆ

ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆ‌ ನಿರ್ಬಂಧಿಸುವ ವಿಚಾರ ದೀರ್ಘಕಾಲಿನ ಹೋರಾಟ, ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡರೂ ಅದು ಖಂಡಿತ ನ್ಯಾಯಾಲಯದ ಅಂಗಳಕ್ಕೆ ಹೋಗಲಿದೆ. ಅಲ್ಲಿ ಏನು ತೀರ್ಮಾನವಾಗಲಿದೆಯೋ ಗೊತ್ತಿಲ್ಲ. ಆದರೆ, ಆರ್ ಎಸ್ ಎಸ್ ಚಟುವಟಿಕೆ ನಿಯಂತ್ರಿಸಲು ಸುಲಭದ ಮಾರ್ಗವಿದೆ. ಮೊದಲು ರಾಜ್ಯದ ಕಾಂಗ್ರೆಸ್ ನಾಯಕರು ಸ್ವಯಂಪ್ರೇರಣೆಯಿಂದ ತಮ್ಮ ಒಡೆತನದ ಶಿಕ್ಷಣ ಸಂಸ್ಥೆಗಳಲ್ಲಿ ಆರ್ ಎಸ್.ಎಸ್ ಒಳಗೊಂಡಂತೆ ಸಂಘ ಪರಿವಾರದ ಚಟುವಟಿಕೆ ಮೊದಲು ನಿಷೇಧಿಸಬೇಕು ಎಂದು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಮಂಗಳೂರಿನ ಶಿಕ್ಷಣ ಸಂಸ್ಥೆಯಲ್ಲಿ ದೊಡ್ಡಮಟ್ಟದ ಎಬಿವಿಪಿ ಸಮ್ಮೇಳನ ನಡೆಯುತ್ತದೆ. ಅದರ ನಂತರ ಆ ಸಂಸ್ಥೆಯ ಮಾಲೀಕರು ವಿಧಾನ ಪರಿಷತ್ ಸದಸ್ಯರಾಗುತ್ತಾರೆ. ಇದು ವಾಸ್ತವದ ವಿಚಾರ, ಕಲ್ಲಡ್ಕದ ಪ್ರಭಾಕರ್ ಭಟ್ ಜೊತೆಯಲ್ಲಿಯೇ ಉತ್ತಮ‌ ಸಂಬಂಧ ಹೊಂದಿರುವರು ಶಾಸಕರು, ಸಚಿವರು, ಇನ್ನು ಏನೇನೋ ಆಗಿದ್ದಾರೆ. ಚುನಾವಣೆ ಹಿಂದಿನ ದಿನದವರೆಗೆ ಆರ್ ಎಸ್ ಎಸ್ ಬೈಠಕ್ ನಲ್ಲಿದ್ದವರನ್ನು ರಾಜಮರ್ಯಾದೆಯಿಂದ ಕರೆತಂದು ಕಾಂಗ್ರೆಸ್ ನಲ್ಲಿ ಟಿಕೆಟ್ ಕೊಟ್ಟಿರುವುದೂ ಉಂಟು ಎಂದು ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.

"ಆರ್ ಎಸ್ ಎಸ್ ಗೆ ಹೆದರುವವರು, ಅದರ ಜೊತೆ ಸಂಬಂಧ ಇಟ್ಟುಕೊಂಡವರು ಪಕ್ಷ ಬಿಟ್ಟು ತೊಲಗಿ…’’ ಎಂಬ ಹೇಳಿಕೆಗಳು ಸಂಘ ಪರಿವಾರದ ವಿರುದ್ಧ ಮಾತನಾಡುವ ನನ್ನಂತವರಿಗೆ ರೋಮಾಂಚನ ಉಂಟು ಮಾಡಲಿವೆ. ಆದರೆ, ಇದಕ್ಕೆ ಪ್ರತಿಯಾಗಿ ನಮ್ಮಂತಹವರಿಗೆ ಕೊಲೆ, ಹಲ್ಲೆ, ಬೆದರಿಕೆ, ತಂದೆ-ತಾಯಿ, ಅಕ್ಕ-ತಂಗಿ ಎನ್ನದೆ ಎಲ್ಲರ ಹೆಸರು ತೆಗೆದು ವಾಚಾಮಗೋಚರ ಬೈಗುಳದ ಸುರಿಮಳೆ ಸಾಮಾನ್ಯವಾಗಿ ಇರುತ್ತದೆ. ಈಗ ಅದೇ ಪರಿಸ್ಥಿತಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬಂದಿದೆ.  ಆರ್ ಎಸ್ ಎಸ್ ವಿರುದ್ದ ಮಾತನಾಡಿದ ತಪ್ಪಿಗೆ ಅವರು ಎಲ್ಲ ಬಗೆಯ ಬೆದರಿಕೆ, ಬೈಗುಳ ಕೇಳಬೇಕಾಗಿದೆ. ಒಬ್ಬಿಬ್ಬರನ್ನು ಹೊರತುಪಡಿಸಿದರೆ ಕಾಂಗ್ರೆಸ್ ಪಕ್ಷದ ಯಾವ ನಾಯಕರೂ ಖರ್ಗೆಯವರ ಪರವಾಗಿ ದನಿ ಎತ್ತುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

RSS ಪರ್ಯಾಯವಾದ ಸೈನ್ಯ ಕಟ್ಟುತ್ತಿದೆ. ಮನುಸ್ಮೃತಿ ಆಧರಿತ ರಾಷ್ಟ್ರ ಕಟ್ಟುವುದು ಅವರ ಉದ್ದೇಶ. ಅಗತ್ಯ ಬಿದ್ದರೆ ಗಲಭೆಯೆಬ್ಬಿಸಿ, ಸೈನ್ಯವನ್ನೇ ಮೂಲೆಗುಂಪು ಮಾಡಿ ಅಧಿಕಾರ ಹಿಡಿಯುವ ಕುತಂತ್ರ ಅವರದು. ತಾಲಿಬಾನ್ ಆಫ್ಘಾನಿಸ್ಥಾನದಲ್ಲಿ ಏನು ಮಾಡಿತೊ ಅದನ್ನೆ RSS ಇಲ್ಲಿ ಮಾಡುವ ಹುನ್ನಾರ ನಡೆಸಿದೆ. ಅದಕ್ಕಾಗಿ ಅವರು ನೋಂದಾಯಿಸಿಕೊಳ್ಳುತ್ತಿಲ್ಲ. ನಾಳೆ ಅವರ ಸದಸ್ಯರು ಯಾರಾದರೂ ಸಿಕ್ಕಿಬಿದ್ದರೆ ಅವರು ನಮ್ಮ ಸಂಘಟನೆಯವರಲ್ಲ ಎಂದು ಕೈತೊಳೆದುಕೊಳ್ಳುತ್ತದೆ. ಗಾಂಧಿ ಕೊಂದ ನಾಥೂರಾಂ ಗೂಡ್ಸೆಗೂ ಸಹ ಇದೇ ಆಗಿದ್ದು ಎಂದು ಬರೆದಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ್ ಖರ್ಗೆ ಜೊತೆಗೆ ನಾವೇಕೆ ನಿಲ್ಲಬೇಕು? ಎಂಬ ಹೆಸರಿನಲ್ಲಿ ಟ್ರೆಂಡ್ ಶುರುವಾಗಿದೆ. ಫೇಸ್ ಬುಕ್ ಬರಹಗಾರರೊಬ್ಬರು, ಭಾರತ ದೇಶ ಕಂಡ ಅಪ್ರತಿಮ ದೇಶಪ್ರೇಮಿ, ಮಹಾಮಾನವತಾವಾದಿ, ಬೋಧಿಸತ್ವ ಅಂಬೇಡ್ಕರ್ ಅವರ ಪ್ರತಿಕೃತಿಯನ್ನೇ ಸುಟ್ಟು ವಿಕೃತಿ ಮೆರೆದ RSS ಸಂಘಟನೆ ಪ್ರಿಯಾಂಕ್ ಖರ್ಗೆಯವರನ್ನು ಬಿಟ್ಟೀತೆ? ಎಂದು ಆತಂಕ ವ್ಯಕ್ತಪಡಿಸಿದರೆ, ಮತ್ತೊಬ್ಬರು ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಯನ್ನೇ ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡಿರುವ ಪ್ರಿಯಾಂಕ್ ಅವರು ಇಂತಹ ಬೆದರಿಕೆಗಳಿಗೆಲ್ಲ‌ ಜಗ್ಗುವವರಲ್ಲ. ಅವರು ಸುಖಾಸುಮ್ಮನೆ RSS ಮೇಲೆ ಮುಗಿಬಿದ್ದಿಲ್ಲ. ಅದರ ಚಿಂತನೆಗಳನ್ನು ವಿರೋಧಿಸುವುದರಿಂದ ಅವರಿಗೆ ವೈಯಕ್ತಿಕ ಲಾಭವೇನು ಇಲ್ಲ, ಆದರೂ ಒಬ್ಬ ನಿಸ್ವಾರ್ಥ ರಾಜಕಾರಣಿಯಾಗಿ, ಅದರಲ್ಲೂ ಪ್ರಜ್ಞಾವಂತ ಚಿಂತಕರಾಗಿ ಈ ನಡೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಪ್ರಿಯಾಂಕ್ ಖರ್ಗೆಅವರು RSS ಚಿಂತನೆ ವಿರೋಧಿಸಲು ಮೂರು ಕಾರಣ ಮುಂದಿಟ್ಟಿದ್ದಾರೆ.  

RSS ಭಾರತದ ಸಂವಿಧಾನವನ್ನು ವಿರೋಧಿಸುತ್ತದೆ. ಅದನ್ನು ಬದಲಾಯಿಸಬೇಕೆಂದು ಶತಾಯಗತಾಯ ಪ್ರಯತ್ನಿಸುತ್ತಿದೆ.

RSS ಭಾರತದ ದ್ವಜವನ್ನು ಅಗೌರವಿಸುತ್ತದೆ. ಭಗವಾದ್ವಜವನ್ನು ರಾಷ್ಟ್ರಧ್ವಜ ಮಾಡಬೇಕೆಂದುಕೊಂಡಿದೆ.

RSS ಭಾರತವನ್ನು ಕೇವಲ‌ 100 ವರ್ಷವಲ್ಲ, 1000 ವರ್ಷ ಹಿಂದಕ್ಕೆ ಕೊಂಡೊಯ್ದು SC, ST,OBC ಮಹಿಳೆಯರಿಗೆ ಶಿಕ್ಷಣ, ಸವಲತ್ತು, ಹಕ್ಕು ಇತ್ಯಾದಿಗಳನ್ನು ನಿರಾಕರಿಸಲು ಬಯಸುತ್ತದೆ.

ಇದು ಆರ್ ಎಸ್ ಎಸ್ ತನ್ನ ಗುಪ್ತ ಮಾರ್ಗಸೂಚಿಯನ್ನು ಇಂದು ಬಹಿರಂಗವಾಗಿ ಹೇಳಿಕೊಂಡಿದೆ.ಇದನ್ನು ಸಾಕಾರಗೊಳಿಸಲು ದಲಿತ, ಹಿಂದುಳಿದ ಯುವಕರನ್ನೆ ಅಚ್ಚುಕಟ್ಟಾಗಿ ಬಳಸಿಕೊಳ್ಳಲು ಅಣಿಯಾಗಿದೆ ಎಂದು ಉಲ್ಲೇಖಿಸಿದ್ದಾರೆ.

ತಮಿಳುನಾಡು ಮಾದರಿ ಏನು?

ತಮಿಳುನಾಡಿನಲ್ಲಿ, 2022ರಿಂದ ಡಿಎಂಕೆ ಸರ್ಕಾರವು ಆರ್‌ಎಸ್‌ಎಸ್‌ನ ಪಥಸಂಚಲನ ಮತ್ತು ಸಾರ್ವಜನಿಕ ರ‍್ಯಾಲಿಗಳಿಗೆ ಶಾಂತಿ-ಸೌಹಾರ್ದತೆಯ ಕಾರಣ ನೀಡಿ ಅನುಮತಿ ನಿರಾಕರಿಸುತ್ತಾ ಬಂದಿದೆ. ಅಲ್ಲಿ ಸಂಘದ ಸಾರ್ವಜನಿಕ ಕಾರ್ಯಕ್ರಮಗಳು, ಶಾಲಾ-ಕಾಲೇಜುಗಳಲ್ಲಿನ ಶಾಖೆಗಳು ಮತ್ತು ಶಿಬಿರಗಳಿಗೆ ಪೊಲೀಸ್ ಅನುಮತಿ ಕಡ್ಡಾಯಗೊಳಿಸುವ ಮೂಲಕ ಕಠಿಣ ನಿಯಂತ್ರಣ ಹೇರಲಾಗಿದೆ. ಇದೇ ಮಾದರಿಯನ್ನು ಕರ್ನಾಟಕದಲ್ಲಿಯೂ ಜಾರಿಗೆ ತರಲು ನಿರ್ಣಯ ಕೈಗೊಳ್ಳಲಾಗಿದೆ.

ಪ್ರಿಯಾಂಕ್ ಗೆ ಬಿಜೆಪಿ ತಿರುಗೇಟು

2002ರಲ್ಲಿ ಬೆಂಗಳೂರಿನ ನಾಗವಾರದಲ್ಲಿ ನಡೆದಿದ್ದ ಆರ್ ಎಸ್ಎಸ್ ಶಿಬಿರದ ಸಿದ್ಧತೆ ಪರಿಶೀಲಿಸಲು ಅಂದಿನ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರವಾಸೋದ್ಯಮ ಸಚಿವ ರೋಷನ್ ಬೇಗ್ ಭೇಟಿ ನೀಡಿದ್ದರು. ಈ ಫೋಟೊವನ್ನ ಬಿಜೆಪಿ ತನ್ನ ಫೇಸ್ ಬುಕ್ ಪುಟದಲ್ಲಿ ಅ.12 ರಂದು ಪ್ರಕಟಿಸಿತ್ತು. ಆ ಮುಲಕ ಪ್ರಿಯಾಂಕ್ ಖರ್ಗೆ ಅವರಿಗೆ ಕೌಂಟರ್ ನೀಡಿತ್ತು. 

“ಪ್ರಿಯಾಂಕ್ ಖರ್ಗೆ ಅವರೇ, ಆರ್ ಎಸ್ ಎಸ್ ವಿರುದ್ಧ ನೀವು ವಿಷ ಕಾರುತ್ತಿದ್ದೀರಿ,  ಆದರೆ, 2002ರಲ್ಲಿ ಬೆಂಗಳೂರಿನ ನಾಗವಾರದಲ್ಲಿ ನಡೆದ ಸಮರಸತಾ ಸಂಗಮ ಕಾರ್ಯಕ್ರಮದ ಸಮಯದಲ್ಲಿ ಅಂದು ಗೃಹಸಚಿವರಾಗಿದ್ದ ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಸ್ವತಃ ಆ ಶಿಬಿರಕ್ಕೆ ಭೇಟಿ ನೀಡಿ, ಆರ್ ಎಸ್ಎಸ್ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿಕೊಂಡಿದ್ದರು. ನೀವು ಈಗ ಹೈಕಮಾಂಡ್‌ ಮೆಚ್ಚಿಸಲು ನಾಟಕವಾಡುತ್ತಿದ್ದೀರಾ‌ ಎಂದು ಟೀಕಿಸಿತ್ತು.

ಬಿಜೆಪಿ ಮತ್ತು ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ

ಸರ್ಕಾರದ ಈ ಪ್ರಸ್ತಾಪಕ್ಕೆ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. "ಆರ್‌ಎಸ್‌ಎಸ್‌ ಸೇವೆ, ಶಿಸ್ತು ಮತ್ತು ರಾಷ್ಟ್ರಭಕ್ತಿಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಆದರೆ, ಕಾಂಗ್ರೆಸ್ ಸರ್ಕಾರವು ಸಂಘದ ಮೌಲ್ಯಗಳನ್ನು ಅಪರಾಧೀಕರಿಸಲು ಯತ್ನಿಸುತ್ತಿದೆ," ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ. "ತನ್ನ ಆಂತರಿಕ ಕಚ್ಚಾಟವನ್ನು ಮರೆಮಾಚಲು ಸರ್ಕಾರ ಈ ರಾಜಕೀಯ ನಾಟಕವಾಡುತ್ತಿದೆ," ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಆರೋಪಿಸಿದ್ದಾರೆ.

ಸರ್ಕಾರದ ಮುಂದಿರುವ ಸವಾಲುಗಳು

ಕರ್ನಾಟಕದಲ್ಲಿ ಆರ್‌ಎಸ್‌ಎಸ್‌ ಸಾಂಸ್ಕೃತಿಕವಾಗಿ ಮತ್ತು ಸಂಘಟನಾತ್ಮಕವಾಗಿ ಆಳವಾಗಿ ಬೇರೂರಿದೆ. ಶಿಕ್ಷಣ ಮತ್ತು ಸೇವಾ ಚಟುವಟಿಕೆಗಳ ಮೂಲಕ ಗ್ರಾಮೀಣ ಮಟ್ಟದಲ್ಲಿಯೂ ತನ್ನ ಪ್ರಭಾವವನ್ನು ಹೊಂದಿದೆ. ಇಂತಹ ಸಂದರ್ಭದಲ್ಲಿ ಸಂಘದ ಚಟುವಟಿಕೆಗಳನ್ನು ನಿಯಂತ್ರಿಸುವುದು ಸರ್ಕಾರಕ್ಕೆ ಸುಲಭದ ಸವಾಲಲ್ಲ. ಆದಾಗ್ಯೂ, ತನ್ನ ಧರ್ಮನಿರಪೇಕ್ಷ ನಿಲುವಿನ ಭಾಗವಾಗಿ, ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ಒಗ್ಗೂಡಿಸುವ ರಾಜಕೀಯ ತಂತ್ರವಾಗಿ ಕಾಂಗ್ರೆಸ್ ಈ ಹೆಜ್ಜೆ ಇಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಹಿಂದೆ ಮಹಾತ್ಮ ಗಾಂಧಿ ಹತ್ಯೆ, ತುರ್ತು ಪರಿಸ್ಥಿತಿ ಮತ್ತು ಬಾಬರಿ ಮಸೀದಿ ಧ್ವಂಸದಂತಹ ಸಂದರ್ಭಗಳಲ್ಲಿ ಆರ್‌ಎಸ್‌ಎಸ್‌ ನಿಷೇಧಕ್ಕೆ ಒಳಗಾಗಿತ್ತು. ಇದೀಗ ಕರ್ನಾಟಕ ಸರ್ಕಾರದ ಈ ನಡೆ, ರಾಜ್ಯದಲ್ಲಿ ಹೊಸ ರಾಜಕೀಯ ಬಿರುಗಾಳಿಯನ್ನೇ ಸೃಷ್ಟಿಸುವ ಲಕ್ಷಣಗಳು ಗೋಚರಿಸುತ್ತಿವೆ. 

Tags:    

Similar News