ಬೆಂಗಳೂರಿನಲ್ಲಿ ಪ್ರತಿವರ್ಷ 360 ಕೋಟಿ ರೂ. ಮೌಲ್ಯದ 943 ಟನ್ ಆಹಾರ ವ್ಯರ್ಥ
ಹಸಿವಿನ ಸಂಕಟ, ಅನ್ನದ ಮೌಲ್ಯ ನನಗೆ ಗೊತ್ತು. ಅದಕ್ಕಾಗಿಯೇ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ನಾವು ಒಂದು ಕಾಲದಲ್ಲಿ ಅನ್ನಕ್ಕಾಗಿ ಅಮೆರಿಕದ ಮೇಲೆ ಅವಲಂಭಿತರಾಗಿದ್ದೆವು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಿಶ್ವ ಆಹಾರ ದಿನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.
"ಬೆಂಗಳೂರಿನಲ್ಲೇ ಪ್ರತಿ ವರ್ಷ 360 ಕೋಟಿ ರೂ. ಮೌಲ್ಯದ 943 ಟನ್ ಆಹಾರ ವ್ಯರ್ಥವಾಗುತ್ತಿದೆ. ಗೊತ್ತಿದ್ದೂ ಆಹಾರವನ್ನು ವ್ಯರ್ಥ ಮಾಡುವುದು ಅನ್ನಕ್ಕೆ ತೋರುವ ಅಹಂಕಾರ ಮತ್ತು ಅನ್ನಬ್ರಹ್ಮನಿಗೆ ಮಾಡುವ ಅವಮಾನ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಗುರುವಾರ ನಗರದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯೋಜಿಸಿದ್ದ 'ವಿಶ್ವ ಆಹಾರ ದಿನ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. "ಕವಿ ಬೇಂದ್ರೆಯವರು ರೈತರನ್ನು 'ಅನ್ನಬ್ರಹ್ಮ' ಎಂದು ಕರೆದಿದ್ದಾರೆ. ಹೀಗಿರುವಾಗ ಅನ್ನವನ್ನು ಬಿಸಾಡುವುದು ಅನ್ನಬ್ರಹ್ಮನಿಗೆ ಮಾಡುವ ಅಪಮಾನ" ಎಂದು ಜಿಕೆವಿಕೆ ಅಧ್ಯಯನವನ್ನು ಉಲ್ಲೇಖಿಸಿ ಹೇಳಿದರು. "ಹಸಿವಿನ ಸಂಕಟ ಮತ್ತು ಅನ್ನದ ಮೌಲ್ಯ ನನಗೆ ಚೆನ್ನಾಗಿ ಗೊತ್ತು. ಇದೇ ಕಾರಣಕ್ಕೆ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಒಂದು ಕಾಲದಲ್ಲಿ ನಾವು ಅನ್ನಕ್ಕಾಗಿ ಅಮೆರಿಕದ ಮೇಲೆ ಅವಲಂಬಿತರಾಗಿದ್ದೆವು. ಇಂದು ವಿದೇಶಗಳಿಗೆ ರಫ್ತು ಮಾಡುವ ಮಟ್ಟಿಗೆ ಬೆಳೆದಿದ್ದೇವೆ. ಆದರೆ, ಇದರ ಜೊತೆಗೇ ಆಹಾರ ವ್ಯರ್ಥ ಮಾಡುವ ಪ್ರಮಾಣ ಹೆಚ್ಚುತ್ತಿರುವುದು ಸರಿಯಲ್ಲ" ಎಂದು ಅವರು ಹೇಳಿದರು.
ಅನ್ನಭಾಗ್ಯ ಕಾಂಗ್ರೆಸ್‌ನ ಬದ್ಧತೆ
"ಆಹಾರ ವ್ಯರ್ಥ ಮಾಡುವುದು ಪಾಪದ ಕೆಲಸ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಹೇಳಿದ್ದರು. ಯಾರೂ ಹಸಿವಿನಿಂದ ಮಲಗಬಾರದು ಎನ್ನುವುದು ಕಾಂಗ್ರೆಸ್ ಪಕ್ಷದ ಬದ್ಧತೆ. ಅದಕ್ಕಾಗಿಯೇ ನಾವು ಬಡವರ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ" ಎಂದರು. ದೇಶದಲ್ಲಿ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಾಗ, ಪ್ರತಿಪಕ್ಷವಾಗಿದ್ದ ಬಿಜೆಪಿ ಅದನ್ನು ತೀವ್ರವಾಗಿ ವಿರೋಧಿಸಿತ್ತು ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು ಎಂದು ಸಿಎಂ ಒತ್ತಿ ಹೇಳಿದರು. "ಆ ಕಡೆ ಬಿಜೆಪಿಗೂ ಚಪ್ಪಾಳೆ ತಟ್ಟಿ, ಈ ಕಡೆ ಬಡವರಿಗೆ ಕಾರ್ಯಕ್ರಮ ಕೊಟ್ಟ ಕಾಂಗ್ರೆಸ್‌ಗೂ ಚಪ್ಪಾಳೆ ತಟ್ಟುವ ಕೆಲಸ ಮಾಡಬೇಡಿ. ಅನ್ನದ ಪರವಾಗಿರುವ ಕಾಂಗ್ರೆಸ್‌ನ ಬದ್ಧತೆಯನ್ನು ಅರ್ಥ ಮಾಡಿಕೊಳ್ಳಿ" ಎಂದು ಅವರು ಜನತೆಗೆ ಕರೆ ನೀಡಿದರು.
ಕಾಳಸಂತೆ ತಡೆಗೆ ಕಠಿಣ ಕ್ರಮ
ಸರ್ಕಾರ ವಿತರಿಸುವ ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು. "ಕಾಳಸಂತೆ ಮಾರಾಟವನ್ನು ತಪ್ಪಿಸುವ ಉದ್ದೇಶದಿಂದಲೇ ನಾವು 5 ಕೆ.ಜಿ ಅಕ್ಕಿ ನೀಡಿ, ಉಳಿದ ಐದು ಕೆ.ಜಿ.ಗೆ ಸಮನಾದ ಕಾಳು ಮತ್ತು ಬೇಳೆಗಳನ್ನು ವಿತರಿಸಲು ತೀರ್ಮಾನಿಸಿದ್ದೇವೆ. ಆಹಾರದ ಬಗ್ಗೆ ಜಾಗೃತಿ ವಹಿಸುವುದು ಮತ್ತು ಸಣ್ಣ ರೈತರನ್ನು ರಕ್ಷಿಸುವುದು ನಮ್ಮ, ನಿಮ್ಮ ಹಾಗೂ ನಾಗರಿಕ ಸಮಾಜದ ಜವಾಬ್ದಾರಿಯಾಗಿದೆ" ಎಂದು ಅವರು ತಿಳಿಸಿದರು.