ಆನೇಕಲ್‌ನಲ್ಲಿ ವಿಶ್ವ ದರ್ಜೆಯ ಕ್ರಿಕೆಟ್ ಸ್ಟೇಡಿಯಂಗೆ ಸಚಿವ ಸಂಪುಟ ಅನುಮೋದನೆ
ಕರ್ನಾಟಕದಲ್ಲಿ ಇದು ಬಹುಶಃ ಮೂರನೇ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವಾಗಲಿದೆ. ಈಗಾಗಲೇ ಮೈಸೂರಿನಲ್ಲಿ ಒಂದನ್ನು ನಿರ್ಮಿಸಲು ಏಪ್ರಿಲ್‌ನಲ್ಲಿ ಸರ್ಕಾರ ನಿರ್ಧರಿಸಿದೆ ಮತ್ತು ಇನ್ನೊಂದು ತುಮಕೂರಿನಲ್ಲಿ ನಿರ್ಮಾಣ ಹಂತದಲ್ಲಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ ಅಂದಾಜು 2,350 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ಮತ್ತು ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಆನೇಕಲ್ ಬಳಿಯ ಸೂರ್ಯನಗರ ನಾಲ್ಕನೇ ಹಂತದ ವಿಸ್ತರಣೆ ಪ್ರದೇಶದಲ್ಲಿ ಬರುವ ಇಂದ್ಲವಾಡಿ ಗ್ರಾಮದಲ್ಲಿ 75 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ಮತ್ತು ಕ್ರೀಡಾ ಸಂಕೀರ್ಣ ನಿರ್ಮಿಸಲು ವಸತಿ ಇಲಾಖೆಯ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ. ವಿವರವಾದ ಯೋಜನಾ ವರದಿ ಮತ್ತು ಕಾರ್ಯಸಾಧ್ಯತಾ ಅಧ್ಯಯನವನ್ನು ಸಿದ್ಧಪಡಿಸಲು ನಾವು ಇಲಾಖೆಗೆ ನಿರ್ದೇಶನ ನೀಡಿದ್ದೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಕರ್ನಾಟಕದಲ್ಲಿ ಇದು ಮೂರನೇ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವಾಗಲಿದೆ. ಈಗಾಗಲೇ ಮೈಸೂರಿನಲ್ಲಿ ಒಂದನ್ನು ನಿರ್ಮಿಸಲು ಏಪ್ರಿಲ್‌ನಲ್ಲಿ ಸರ್ಕಾರ ನಿರ್ಧರಿಸಿದೆ. ಇನ್ನೊಂದು ತುಮಕೂರಿನಲ್ಲಿ ನಿರ್ಮಾಣ ಹಂತದಲ್ಲಿದೆ.
ವಸತಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಮಾತನಾಡಿ, ಕ್ರೀಡಾಂಗಣವು 80,000 ಆಸನ ಸಾಮರ್ಥ್ಯವನ್ನು ಹೊಂದಿದ್ದು, 24 ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಿಗೆ ಸೌಲಭ್ಯಗಳನ್ನು ಹಾಗೂ 3,000 ಆಸನಗಳ ಸಾಮರ್ಥ್ಯದ ಸಭಾಂಗಣವನ್ನು ಒಳಗೊಂಡಿರುತ್ತದೆ. ಈ ವಿಶ್ವ ದರ್ಜೆಯ ಸೌಲಭ್ಯಗಳೊಂದಿಗೆ, ಇದು ದೇಶದ ಅತಿದೊಡ್ಡ ಕ್ರೀಡಾಂಗಣಗಳಲ್ಲಿ ಒಂದಾಗಲಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಈಗಿರುವ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯ ಕೇವಲ 38,000 ಆಗಿದ್ದು, ಸಣ್ಣ ನಗರಗಳು ಈಗಾಗಲೇ ದೊಡ್ಡ ಕ್ರೀಡಾಂಗಣಗಳನ್ನು ಹೊಂದಿವೆ ಎಂದು ವಸತಿ ಇಲಾಖೆಯ ದಾಖಲೆಗಳು ತಿಳಿಸಿದೆ. 2004 ರಿಂದ ಚಿನ್ನಸ್ವಾಮಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ನಡೆದಿಲ್ಲ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಸರ್ಕಾರದ ನಡುವಿನ ಸಂಬಂಧಗಳು ಅಂದಿನಿಂದಲೂ ಹದಗೆಟ್ಟಿವೆ. ಕಾಲ್ತುಳಿತದ ತನಿಖೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಆಯೋಗವು, ಕಾರ್ಯಕ್ರಮಗಳನ್ನು ಹೆಚ್ಚು ಸೂಕ್ತವಾದ ಸ್ಥಳಗಳಿಗೆ ಸ್ಥಳಾಂತರಿಸಲು ಶಿಫಾರಸು ಮಾಡಿತ್ತು ಎಂದು ತಿಳಿಸಿದರು.
ವಿಶ್ವದರ್ಜೆಯ ಸೌಲಭ್ಯಗಳು
ಹೊಸ ಕ್ರೀಡಾಂಗಣವು ಕೇವಲ ಕ್ರಿಕೆಟ್‌ಗೆ ಸೀಮಿತವಾಗದೇ ಬಹು ಕ್ರೀಡೆಗಳನ್ನು ಆಯೋಜಿಸಲು ಅನುಕೂಲ ಆಗುವಂತೆ ವಿನ್ಯಾಸಗೊಳಿಸಲಾಗುವುದು.
ಹೊಸ ಕ್ರೀಡಾಂಗಣವು ಕೇವಲ ಕ್ರಿಕೆಟ್‌ಗೆ ಕ್ರೀಡಾಂಗಣವು ಕೆಳಗಿನಂತಿರುವ ಸೌಲಭ್ಯಗಳನ್ನು ಹೊಂದಿರಲಿದೆ:
ಕ್ರೀಡಾಂಗಣವು ಒಟ್ಟು 80 ಸಾವಿರ ಆಸನ ವ್ಯವಸ್ಥೆ ಹೊಂದಿರಲಿದೆ. 24 ಕ್ರೀಡೆಗಳಿಗೆ ಒಳಾಂಗಣ ಮತ್ತು ಹೊರಾಂಗಣ ಸೌಲಭ್ಯಗಳು, ಕ್ರೀಡಾ ತರಬೇತಿ ಕೇಂದ್ರಗಳು ಇರಲಿವೆ.
ಆಟಗಾರರು, ಅಧಿಕಾರಿಗಳು, ಪ್ರೇಕ್ಷಕರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. 3 ಸಾವಿರ ಆಸನಗಳ ಸಭಾಂಗಣ ನಿರ್ಮಾಣ ಮಾಡಲಿದ್ದು, ಸಾಂಸ್ಕೃತಿಕ, ಕ್ರೀಡಾ ಸಮಾರಂಭಗಳಿಗೆ ಬಳಸಲಾಗುವುದು.
ಜಿಮ್, ತರಬೇತಿ ವಲಯಗಳು ಮತ್ತು ಸ್ವಿಮ್ಮಿಂಗ್ ಪೂಲ್ ಸೌಲಭ್ಯ ಇರಲಿದೆ. ಕಾಲ್ತುಳಿತ ಇನ್ನಿತರೆ ಅಪಾಯ ತಪ್ಪಿಸಲು ವಿಶಾಲ ದ್ವಾರಗಳು, ತುರ್ತು ನಿರ್ಗಮನ ವ್ಯವಸ್ಥೆ ಒಳಗೊಂಡಿರಲಿದೆ.
ಸಾವಿರಾರು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇರಲಿದೆ ಎಂದು ಕ್ರೀಡಾ ಇಲಾಖೆ ಮೂಲಗಳು ತಿಳಿಸಿವೆ.
‘ಸ್ಪೋರ್ಟ್ಸ್ ಸಿಟಿ’ ಕನಸು
ಈ ಯೋಜನೆಯು ಪೂರ್ಣಗೊಂಡ ನಂತರ ಬೆಂಗಳೂರು ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರದ ಅಗ್ರ ಕೇಂದ್ರಗಳಲ್ಲಿ ಒಂದಾಗಿ ಬೆಳೆಯುವ ನಿರೀಕ್ಷೆ ಇದೆ. ಹೊಸ ಕ್ರೀಡಾಂಗಣವು ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳು, ವಿಶ್ವಕಪ್ ಟೂರ್ನಿಗಳು, ಸಂಗೀತ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಉತ್ಸವಗಳಿಗೂ ವೇದಿಕೆಯಾಗಲಿದೆ.
ತಜ್ಞರ ಪ್ರಕಾರ, ಈ ಯೋಜನೆ ಕರ್ನಾಟಕದ ಕ್ರೀಡಾ ಮೂಲಸೌಕರ್ಯವನ್ನು ಹೊಸ ಹಾದಿಗೆ ಕರೆದೊಯ್ಯಲಿದೆ. ಸುರಕ್ಷತೆ, ಸೌಲಭ್ಯ ಮತ್ತು ನಗರಾಭಿವೃದ್ಧಿಯನ್ನು ಸಮನ್ವಯಗೊಳಿಸಿರುವ ಪ್ರಥಮ ಮಾದರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಗುಜರಾತ್ ನಲ್ಲಿ ಅತಿ ದೊಡ್ಡ ಕ್ರೀಡಾಂಗಣ
ಗುಜರಾತಿನ ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣ ವಿಶ್ವದ ಅತಿ ದೊಡ್ಡ ಮೈದಾನ ಎಂಬ ಖ್ಯಾತಿ ಪಡೆದಿದೆ. ಇದೀಗ ದೇಶದ ಎರಡನೇ ಅತಿ ದೊಡ್ಡ ಕ್ರೀಡಾಂಗಣ ಬೆಂಗಳೂರು ಹೊರವಲಯದಲ್ಲಿ ನಿರ್ಮಾಣವಾಗಲಿದೆ. ನರೇಂದ್ರ ಮೋದಿ ಕ್ರೀಡಾಂಗಣವು 1.32 ಲಕ್ಷ ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಹೊಂದಿದ್ದರೆ, ಬೆಂಗಳೂರಿನ ಉದ್ದೇಶಿತ ಹೊಸ ಕ್ರೀಡಾಂಗಣ 80,000 ಆಸನ ವ್ಯವಸ್ಥೆ ಹೊಂದಿರಲಿದೆ. ಮೋಟೆರಾ ಮೈದಾನವು (ಮೋದಿ ಕ್ರೀಡಾಂಗಣ) ಎರಡು ಅಭ್ಯಾಸ ಮೈದಾನ, ನಾಲ್ಕು ಡ್ರೆಸ್ಸಿಂಗ್ ರೂಮ್, 11 ಪಿಚ್‌ಗಳು ಮತ್ತು 360-ಡಿಗ್ರಿ ಪ್ರೊಜೆಕ್ಷನ್ ಲೈಟಿಂಗ್ ವ್ಯವಸ್ಥೆ ಹೊಂದಿದೆ.
2023ರ ವಿಶ್ವಕಪ್ ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಪಂದ್ಯಗಳು ಇಲ್ಲಿ ನಡೆದಿದ್ದವು. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣವು 68 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದು, 1864ರಲ್ಲಿ ಇದರ ನಿರ್ಮಾಣವಾಗಿದೆ. ಹೈದರಾಬಾದ್ ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣವು 55 ಸಾವಿರ ಅಸನ ವ್ಯವಸ್ಥೆ ಹೊಂದಿದೆ. ಸ್ಮಾರ್ಟ್ ಕ್ಯಾಮೆರಾ, ಸೂರ್ಯನ ಬೆಳಕಿನ ಪ್ರಭಾವಕ್ಕೆ ತಕ್ಕಂತೆ ವಿನ್ಯಾಸಗೊಂಡ ಛಾವಣಿ, ಮತ್ತು ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದೆ.