ಆರ್​​ಎಸ್​​ಎಸ್​​ ಚಟುವಟಿಕೆಯಲ್ಲಿ ಸರ್ಕಾರಿ ನೌಕರರು ಪಾಲ್ಗೊಂಡರೆ ಶಿಸ್ತು ಕ್ರಮ; ಸಿಎಂಗೆ ಖರ್ಗೆ ಪತ್ರ

ಯಾರೇ ಸರ್ಕಾರಿ ನೌಕರರು, ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂಥ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರಬಾರದು. ಅವುಗಳೊಂದಿಗೆ ಅನ್ಯಥಾ ಸಂಬಂಧ ಹೊಂದಿರಬಾರದು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

Update: 2025-10-16 07:47 GMT

ಸಚಿವ ಪ್ರಿಯಾಂಕ್‌ ಖರ್ಗೆ

Click the Play button to listen to article

ಯಾವುದೇ ರಾಜಕೀಯ ಪಕ್ಷ, ಸಂಘಟನೆಯ ಕಾರ್ಯಚಟುವಟಿಕೆಯಲ್ಲಿ ಸರ್ಕಾರಿ ನೌಕರರು ಪಾಲ್ಗೊಳ್ಳಬಾರದು. ನಿಯಮಗಳ ಪ್ರಕಾರವೇ ನೌಕರರು ಕರ್ತವ್ಯ ನಿರ್ವಹಿಸಲು ಆದೇಶ ಹೊರಡಿಸಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಸಿಎಂಗೆ ಮನವಿ ಮಾಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, ಸರ್ಕಾರದ ಸಂಬಳ ಪಡೆದು, ಕೆಲವು ರಾಜಕೀಯ ಹಾಗೂ ಇತರೆ ಸಂಘಟನೆಗಳ ಜೊತೆ ನೌಕರರು ಓಡಾಡುತ್ತಿದ್ದಾರೆ. ಸರ್ಕಾರಿ ನೌಕರರು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಬಹುದಾ ಎಂದು ಪ್ರಶ್ನಿಸಿದ್ದಾರೆ.

ಪತ್ರದಲ್ಲೇನಿದೆ ?

"ಯಾರೇ ಸರ್ಕಾರಿ ನೌಕರರು, ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂಥ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರಬಾರದು. ಅವುಗಳೊಂದಿಗೆ ಅನ್ಯಥಾ ಸಂಬಂಧ ಹೊಂದಿರಬಾರದು. ಯಾವುದೇ ರಾಜಕೀಯ ಚಳುವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸಬಾರದು. ಅದರ ಸಹಾಯಾರ್ಥ ಹಣಕಾಸು ವಂತಿಗೆ ಅಥವಾ ನೆರವು ನೀಡಬಾರದು. ಈ ಕುರಿತು ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದ್ದರೂ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಭಾಗವಹಿಸುತ್ತಿರುವುದನ್ನು ಗಮನಿಸಲಾಗಿದೆ.

ಆದ್ದರಿಂದ ರಾಜ್ಯದ ಸರ್ಕಾರಿ ಅಧಿಕಾರಿ ಮತ್ತು ನೌಕರರು ಆರ್‌ಎಸ್‌ಎಸ್‌ ಹಾಗೂ ಇತರೆ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಹಾಗೂ ಇದನ್ನು ಉಲ್ಲಂಘಿಸುವ ಅಧಿಕಾರಿ ನೌಕರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯನ್ನು ಹೊರಡಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಬಿಜೆಪಿ ಅವಧಿಯಲ್ಲೇ ಆದೇಶ

ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುವುದು ಬಿಟ್ಟು ಬೇರೆ ಯಾವುದೇ ಚಟುವಟಿಕೆ ನಡೆಯಬಾರದು ಎಂದು 2013ರಲ್ಲೇ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಆದೇಶ ಹೊರಡಿಸಿದ್ದಾರೆ. ಈಗ ಬಿಜೆಪಿಯವರು ಕೂಡ ಆರ್‌ಎಸ್‌ಎಸ್ ವಿರೋಧಿಗಳು ಆಗಿದ್ದಾರೆ. ಆರ್‌ಎಸ್‌ಎಸ್ ಆಗಲಿ ಅಥವಾ ತಾಲಿಬಾನಿಯಾಗಲಿ ಯಾರಿಗೂ ಶಾಲೆಗಳಲ್ಲಿ ಚಟುವಟಿಕೆ ನಡೆಸಲು ಅವಕಾಶ ಕೊಡಬಾರದು ಎಂದರು.

ಆರ್‌ಎಸ್‌ಎಸ್‌ ಬೇಕಾದರೆ ನೌಕರಿಗೆ ರಾಜೀನಾಮೆ ನೀಡಿ

ರಾಜ್ಯದ ಕೆಲವೆಡೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಅದರ ಬಗ್ಗೆ ನನಗೂ ಮಾಹಿತಿ ಬಂದಿತ್ತು. ಸರ್ಕಾರಿ ನೌಕರರಾಗಿರುವಾಗ ನಿಯಮ ಪಾಲನೆ ಆಗಬೇಕು, ಗಣವೇಷ ಹಾಕಿಕೊಂಡು ಪಿಡಿಒ, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಆರೋಗ್ಯ ಅಧಿಕಾರಿಗಳು ಓಡಾಡಿದ್ದಾರೆ. ಅವರೆಲ್ಲರನ್ನು ಅಮಾನತು ಮಾಡಲಾಗುವುದು. ಆರ್‌ಸ್‌ಎಸ್‌ಗೆ ಸೇರಬೇಕು ಎಂಬ ಆಸೆಯಿದ್ದರೆ ನೌಕರಿ ಬಿಟ್ಟು ಸೇರಿಕೊಳ್ಳಿ. ನಿವೃತ್ತಿ ಆದಮೇಲೆ ಕೆಲವು ಐಎಎಸ್ ಅಧಿಕಾರಿಗಳು ಸಂಘಕ್ಕೆ ಹೋಗಿದ್ದಾರೆ. ಅಧಿಕಾರದಲ್ಲಿದ್ದಾಗ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಟಿಪ್ಪು ಸುಲ್ತಾನ್ ಬಗ್ಗೆ ಹಾಡಿ ಹೊಗಳಿದ್ದರು. ಈಗ ಟಿಪ್ಪು ವಿರೋದಿಯಾಗಿದ್ದಾರೆ ಅಷ್ಟೇ ಎಂದರು. 

ಏನಿದು ವಿವಾದ ?

ಶಾಲೆಗಳು, ಮೈದಾನಗಳು, ಮುಜರಾಯಿ ಇಲಾಖೆ ದೇವಸ್ಥಾನ ಅಥವಾ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸಂಘಟನೆಯು ಶಾಖೆ, ಸಾಂಘಿಕ್‌ ಅಥವಾ ಬೈಠಕ್‌ಗಳ ಹೆಸರಿನಲ್ಲಿ ಯಾವುದೇ ಚಟುವಟಿಕೆ ನಡೆಸುವ ಬಗ್ಗೆ ನಿಷೇಧ ಹೇರಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನಡಾವಳಿಯೊಂದನ್ನು ಕಳುಹಿಸಿದ್ದರು. ಈ ಬಗ್ಗೆ ಪರಿಶೀಲಿಸಿ ಕೂಡಲೇ ಅಗತ್ಯ ಕ್ರಮ ಜರುಗಿಸಲು ಸಿದ್ದರಾಮಯ್ಯ ಮುಖ್ಯ ಕಾರ್ಯದರ್ಶಿಗೆ ಮುಚ್ಚಳಿಕೆ ಬರೆದು ಸೂಚಿಸಿದ್ದರು.

ಖರ್ಗೆಗೆ ಬೆದರಿಕೆ ಕರೆ

ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿರ್ಬಂಧಿಸಬೇಕೆಂಬ ಪ್ರಸ್ತಾಪದ ನಂತರ  ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬರುತ್ತಿರುವ ಜೀವ ಬೆದರಿಕೆ ಕರೆಗಳ ಕುರಿತು ಸ್ವತಃ ಸಚಿವರೇ ಬುಧವಾರ (ಆ.15) ಆಡಿಯೋ ಸಾಕ್ಷಿ ಬಹಿರಂಗಪಡಿಸಿದ್ದರು. ಈ ಕುರಿತು ತಮ್ಮ ʼಎಕ್ಸ್ʼ ಖಾತೆಯಲ್ಲಿ ವ್ಯಕ್ತಿಯೊಬ್ಬರು ಕರೆ ಮಾಡಿ ಬೆದರಿಕೆ ಹಾಕಿರುವ ಆಡಿಯೊವನ್ನು ಹಂಚಿಕೊಂಡಿದ್ದು, ಆರ್‌ಎಸ್‌ಎಸ್‌ ಸಂಸ್ಕಾರವನ್ನು ಪ್ರಶ್ನಿಸಿದ್ದರು. ಕೆಲ ದಿನಗಳಿಂದ ನನಗೆ ನಿರಂತರವಾಗಿ ಬರುತ್ತಿದ್ದ ಬೆದರಿಕೆ ಮತ್ತು ನಿಂದನೆಯ ಕರೆಗಳಲ್ಲಿ ಇದೊಂದು ಸ್ಯಾಂಪಲ್ ಅಷ್ಟೇ. ನನ್ನ ತಾಯಿ, ಸಹೋದರಿಯರ ಹೆಸರು ಹಿಡಿದು ತುಚ್ಚವಾಗಿ ನಿಂದಿಸುವುದನ್ನು ಶಾಖೆಗಳಲ್ಲಿ ನೀಡುವ ಸಂಸ್ಕಾರವೇ ಎಂದು ಕಿಡಿಕಾರಿದ್ದರು.

Tags:    

Similar News