ಬರ ಭೀಕರ | ಕಚೇರಿಗಳಲ್ಲಿ ಪಕ್ಷಿ ರಕ್ಷಣೆಗೆ ನೀರಿನ ಬಟ್ಟಲು ಇಡುವಂತೆ ಡಿಸಿ ಮನವಿ

ನೀರು ಸಿಗದೆ ಸಾಯುತ್ತಿರುವ ಪಕ್ಷಿಗಳನ್ನು ರಕ್ಷಿಸಲು ಸರ್ಕಾರಿ ಕಚೇರಿಗಳ ತೆರೆದ ಜಾಗದಲ್ಲಿ ನೀರಿನ ಬಟ್ಟಲುಗಳನ್ನು ಇಡುವಂತೆ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಿ ದಾವಣಗೆರೆ ಜಿಲ್ಲಾಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆ.;

Update: 2024-04-09 13:36 GMT
ಪಕ್ಷಿಗಳಿಗೆ ನೀರು ಇಡುವಂತೆ ದಾವಣಗೆರೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Click the Play button to listen to article

ದಾವಣಗೆರೆ: ಭೀಕರ ಬರದ ಹಿನ್ನೆಲೆಯಲ್ಲಿ ಕರೆಕಟ್ಟೆಗಳು ಮತ್ತು ಇತರೆ ನೀರಿನ ಮೂಲಗಳು ಬತ್ತಿಹೋಗಿರುವುದರಿಂದ ನೀರು ಸಿಗದೆ ಸಾಯುತ್ತಿರುವ ಪಕ್ಷಿಗಳನ್ನು ರಕ್ಷಿಸಲು ದಾವಣಗೆರೆ ಜಿಲ್ಲಾಧಿಕಾರಿಗಳು ವಿನೂತನ ಪ್ರಯತ್ನ ನಡೆಸಿದ್ದಾರೆ. 

ತಮ್ಮ ವ್ಯಾಪ್ತಿಗೆ ಬರುವ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಟೆರೇಸ್‌, ವರಾಂಡ, ಆವರಣ ಸೇರಿದಂತೆ ತೆರೆದ ಜಾಗದಲ್ಲಿ ನೀರಿನ ಬಟ್ಟಲುಗಳನ್ನು ಇಡುವಂತೆ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಿ ದಾವಣಗೆರೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ ಸುತ್ತೋಲೆ ಹೊರಡಿಸಿದ್ದಾರೆ.

ಪ್ರಸ್ತುತ ಬೇಸಿಗೆಯಲ್ಲಿ ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ಉಂಟಾಗಿದ್ದು, ಕಳೆದ ವಾರದಿಂದ ಅಧಿಕ ಉಷ್ಣಾಂಶ ದಾಖಲಾಗಿದೆ. ಬಿಸಿಲಿನ ತೀವ್ರತೆಗೆ ಹಾಗೂ ಕುಡಿಯುವ ನೀರಿನ ಅಭಾವದಿಂದ ಪಕ್ಷಿಗಳ ಜೀವಕ್ಕೆ ಕುತ್ತುಬರುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸುವುದು ಅತ್ಯವಶ್ಯಕ. ಆದ್ದರಿಂದ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ, ಆವರಣದಲ್ಲಿ ಪಕ್ಷಿಗಳಿಗೆ ನೀರು ಕುಡಿಯಲು ಅನುಕೂಲವಾಗುವಂತೆ ಮಣ್ಣಿನ ಬೋಗುಣಿ, ಮಡಿಕೆ, ಪಾತ್ರೆಗಳಲ್ಲಿ ಸಾಕಷ್ಟು ನೀರು ತುಂಬಿಸಿ ಇರಿಸಲು ಆದೇಶಿಸಿದೆ ಎಂದು ದಾವಣಗರೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ತೀವ್ರ ಬರ ಉಂಟಾಗಿದ್ದು, ಬರದ ತೀವ್ರತೆ ವನ್ಯಜೀವಿಗಳಿಗೂ ತಟ್ಟಿದೆ. ನೀರು ಸಿಗದೆ ಕಾಡು ಪ್ರಾಣಿ, ಪಕ್ಷಿಗಳು ಸಾವನ್ನಪ್ಪಿರುವ ವರದಿ ಕೂಡ ಆಗಿದೆ. ನೀರಿನ ಕೊರತೆ ಮತ್ತು ಭೀಕರ ಬಿಸಿಗಾಳಿಯಿಂದಾಗಿ ಪ್ರಾಣಿ- ಪಕ್ಷಿಗಳು ಸಾಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಈ ವಿನೂತನ ಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Tags:    

Similar News