ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಉದ್ಯೋಗಿಯಿಂದ 2 ಲಕ್ಷ ರೂಪಾಯಿ ಸುಲಿಗೆ, ಆರು ಮಂದಿ ಅರೆಸ್ಟ್!

ಹಣ ಪಡೆದ ನಂತರ, ಆರೋಪಿಗಳು ರಾಕೇಶ್ ಅವರನ್ನು ಬೈಕ್‌ನಲ್ಲಿ ವೀರಸಂದ್ರ ಸಮೀಪದ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.;

Update: 2025-07-29 04:58 GMT

ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರಿನಲ್ಲಿ ಡೇಟಿಂಗ್ ಆ್ಯಪ್‌ಗಳನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡಿ, ಅಮಾಯಕರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಒಂದು ಜಾಲವನ್ನು ಯಲಹಂಕ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.

ಈ ವಂಚನೆಗೆ ಬಲಿಯಾದವರು ತೆಲಂಗಾಣ ಮೂಲದ ರಾಕೇಶ್ ರೆಡ್ಡಿ. ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಇವರು, ಮಹದೇವಪುರದ ಬೋಯಿಂಗ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಒಂದು ತಿಂಗಳ ಹಿಂದೆ, ಡೇಟಿಂಗ್ ಆ್ಯಪ್‌ನಲ್ಲಿ ಸಂಗೀತಾ ಸಹಾನಿ (36) ಎಂಬ ಮಹಿಳೆ ರಾಕೇಶ್ ರೆಡ್ಡಿ ಅವರಿಗೆ ಪರಿಚಯವಾಗಿದ್ದಳು. ಸಂಗೀತಾ, ತನ್ನನ್ನು ರಾಜಸ್ಥಾನದ ರಾಕಿ ಎಂದು ಪರಿಚಯಿಸಿಕೊಂಡು, ತಾನು ಅವಿವಾಹಿತೆ ಹಾಗೂ ಬೆಂಗಳೂರಿನಲ್ಲಿ ಬಿಸಿನೆಸ್ ಅನಾಲಿಸ್ಟ್ ಎಂದು ನಂಬಿಸಿದ್ದಳು. ಪರಿಚಯ ದಟ್ಟವಾದ ಬಳಿಕ, ಇಬ್ಬರೂ ವಾಟ್ಸ್ಆ್ಯಪ್‌ನಲ್ಲಿ ನಿರಂತರ ಸಂಪರ್ಕದಲ್ಲಿದ್ದರು. ಜುಲೈ 18 ರಂದು ಸಂಜೆ ಯಲಹಂಕದ ಗ್ಯಾಲರಿಯಾ ಮಾಲ್‌ನ ಸ್ಟಾರ್‌ಬಕ್ಸ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದಾರೆ. ಅಲ್ಲಿಂದ, ಆಟೋದಲ್ಲಿ ಸಂಗೀತಾಳ ಮನೆಗೆ ತೆರಳಿದ್ದಾರೆ.

 ಸಂಗೀತಾಳ ಮನೆಯಲ್ಲಿ ರಾಕೇಶ್ ಮತ್ತು ಸಂಗೀತಾ ಇಬ್ಬರೂ ಮದ್ಯಪಾನ ಮಾಡುತ್ತಿದ್ದಾಗ, ಉಳಿದ ಐವರು ಆರೋಪಿಗಳು ಏಕಾಏಕಿ ಮನೆಗೆ ನುಗ್ಗಿದ್ದಾರೆ. ತಾವು ಮನೆಯ ಮಾಲೀಕರೆಂದು ಹೇಳಿಕೊಂಡು, "ಮನೆಯಲ್ಲಿ ಮದ್ಯಪಾನ ಮಾಡುವಂತಿಲ್ಲ" ಎಂದು ಗಲಾಟೆ ಆರಂಭಿಸಿದ್ದಾರೆ. ನಂತರ, ಇಬ್ಬರ ಬ್ಯಾಗ್‌ಗಳನ್ನು ಪರಿಶೀಲಿಸುವ ನಾಟಕವಾಡಿ, ಸಂಗೀತಾ ಮೊದಲೇ ಇರಿಸಿದ್ದ ಅಡುಗೆ ಸೋಡಾವನ್ನು ಹೊರತೆಗೆದು, ಅದು ಎಂಡಿಎಂಎ ಡ್ರಗ್ಸ್ ಎಂದು ಬೆದರಿಸಿದ್ದಾರೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸುವುದಾಗಿ ಬೆದರಿಸಿ, ರಾಕೇಶ್ ರೆಡ್ಡಿ ಅವರಿಂದ 15 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಭಯಗೊಂಡ ರಾಕೇಶ್, ಹಂತ ಹಂತವಾಗಿ 2 ಲಕ್ಷ ರೂಪಾಯಿ ಆರೋಪಿಗಳ ಖಾತೆಗೆ ವರ್ಗಾಯಿಸಿದ್ದಾರೆ. ಹಣ ಪಡೆದ ನಂತರ, ಆರೋಪಿಗಳು ರಾಕೇಶ್ ಅವರನ್ನು ಬೈಕ್‌ನಲ್ಲಿ ವೀರಸಂದ್ರ ಸಮೀಪದ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ಈ ಘಟನೆಯ ನಂತರ ರಾಕೇಶ್ ರೆಡ್ಡಿ ಯಲಹಂಕ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು, ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳೆಂದರೆ: ಸಂಗೀತಾ ಸಹಾನಿ (36), ಈ ಪ್ರಕರಣದ ಪ್ರಮುಖ ಸೂತ್ರಧಾರಿ ಶರಣಬಸಪ್ಪ ಬಾಳಿಗೆರ್ (50), ಬೀರಬಲ್ ಮಜ್ಜಗಿ (21), ಅಭಿಷೇಕ್ (19), ಶ್ಯಾಮ್ ಸುಂದರ್ ಪಾಂಡೆ (20) ಮತ್ತು ರಾಜು ಮಾನೆ (34). ಪೊಲೀಸರ ತನಿಖೆಯಿಂದ, ಸಂಗೀತಾ ಸಹಾನಿ ಉತ್ತರ ಪ್ರದೇಶ ಮೂಲದವಳಾಗಿದ್ದು, ಈ ಹಿಂದೆ ಡಾನ್ಸ್ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದಳು ಎಂಬ ಮಾಹಿತಿ ಬಹಿರಂಗವಾಗಿದೆ. ಅಲ್ಲದೆ, ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಶರಣಬಸಪ್ಪ ಬಾಳಿಗೆರ್ ವಿರುದ್ಧ 2023ರಲ್ಲಿ ಪುಟ್ಟೇನಹಳ್ಳಿ ಠಾಣೆಯಲ್ಲಿ ಇದೇ ರೀತಿಯ ವಂಚನೆ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Similar News