ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್​; ಮೂರ್ತಿ ಪೂಜೆ ವಿರೋಧಿಸುವವರು ಉದ್ಘಾಟಿಸುವುದು ಹೇಗೆ?: ಯತ್ನಾಳ್ ಆಕ್ಷೇಪ

ದಸರಾ ಎಂಬುದು ಹಿಂದೂಗಳ ಶ್ರದ್ಧಾ ಕೇಂದ್ರವಾದ, ನಾಡದೇವತೆ ಚಾಮುಂಡೇಶ್ವರಿಯನ್ನು ಪೂಜಿಸುವ ಹಬ್ಬ. ಇಸ್ಲಾಂ ಧರ್ಮದ ಪ್ರಕಾರ ಮೂರ್ತಿ ಪೂಜೆಯನ್ನು ವಿರೋಧಿಸುವವರು ಎಂದು ಯತ್ನಾಳ್​ ಆರೋಪಿಸಿದ್ದಾರೆ.;

Update: 2025-08-24 09:24 GMT

ಬಸನಗೌಡ ಪಾಟೀಲ್ ಯತ್ನಾಳ್

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಲೇಖಕಿ ಭಾನು ಮುಷ್ತಾಕ್ ಅವರ ಹೆಸರು ಕೇಳಿಬರುತ್ತಿದ್ದಂತೆಯೇ, ಈ ಆಯ್ಕೆಗೆ ಇದೀಗ ಧಾರ್ಮಿಕ ಆಯಾಮ ದೊರೆತಿದೆ. ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ , ಈ ಆಯ್ಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


"ದಸರಾ ಎಂಬುದು ಹಿಂದೂಗಳ ಶ್ರದ್ಧಾ ಕೇಂದ್ರವಾದ, ನಾಡದೇವತೆ ಚಾಮುಂಡೇಶ್ವರಿಯನ್ನು ಪೂಜಿಸುವ ಹಬ್ಬ. ಇಸ್ಲಾಂ ಧರ್ಮದ ಪ್ರಕಾರ ಮೂರ್ತಿ ಪೂಜೆಯನ್ನು ವಿರೋಧಿಸುವವರು, ನಾಡದೇವಿಗೆ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟಿಸುವುದು ಎಷ್ಟು ಸರಿ?" ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.

ನಂಬಿಕೆಗಳ ಬಗ್ಗೆ ಸ್ಪಷ್ಟತೆ ಬೇಕು: ಯತ್ನಾಳ್ ಆಗ್ರಹ

ಈ ಕುರಿತು ತಮ್ಮ ಎಂದಿನ ಶೈಲಿಯಲ್ಲಿ ಪ್ರತಿಕ್ರಿಯಿಸಿರುವ ಯತ್ನಾಳ್, "ಲೇಖಕಿ ಭಾನು ಮುಷ್ತಾಕ್ ಅವರ ಬಗ್ಗೆ ವೈಯಕ್ತಿಕವಾಗಿ ಗೌರವವಿದೆ. ಆದರೆ, ಧಾರ್ಮಿಕ ಆಚರಣೆಗಳಿಗೆ ಅದರದ್ದೇ ಆದ ಪಾವಿತ್ರ್ಯತೆ ಇರುತ್ತದೆ. ಇಸ್ಲಾಂನಲ್ಲಿ ಮೂರ್ತಿ ಪೂಜೆ ನಿಷಿದ್ಧ. ಹೀಗಿರುವಾಗ, ಅವರು ತಮ್ಮ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ದಸರಾ ಉದ್ಘಾಟಿಸಲು ಒಪ್ಪುತ್ತಾರೆಯೇ? ಅಥವಾ ಅವರು ತಮ್ಮ ಮೂಲ ಧಾರ್ಮಿಕ ನಂಬಿಕೆಗಳನ್ನು ಬದಿಗಿಟ್ಟು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆಯೇ ಎಂಬುದರ ಬಗ್ಗೆ ಮೊದಲು ಸ್ಪಷ್ಟನೆ ನೀಡಬೇಕು," ಎಂದು ಒತ್ತಾಯಿಸಿದ್ದಾರೆ.

"ಒಂದು ವೇಳೆ ಅವರು ತಮ್ಮ ಧರ್ಮದ ನಂಬಿಕೆಗಳನ್ನು ಮೀರಿ ಉದ್ಘಾಟನೆ ಮಾಡಿದರೆ, ಅದು ಅವರ ಧರ್ಮಕ್ಕೆ ಮಾಡುವ ಅಪಚಾರವಾಗುತ್ತದೆ. ಒಂದು ವೇಳೆ, ಹಿಂದೂ ಧಾರ್ಮಿಕ ವಿಧಿವಿಧಾನಗಳನ್ನು ಪಾಲಿಸದೇ ಕೇವಲ ದೀಪ ಬೆಳಗುವುದಾದರೆ, ಅದು ನಾಡಹಬ್ಬದ ಸಂಪ್ರದಾಯಕ್ಕೆ ಮಾಡುವ ಅವಮಾನವಾಗುತ್ತದೆ. ಈ ಗೊಂದಲಗಳಿಗೆ ಸರ್ಕಾರ ಅವಕಾಶ ನೀಡಬಾರದು," ಎಂದು ಯತ್ನಾಳ್ ಹೇಳಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೀಮಿತಗೊಳಿಸಿ

ಯತ್ನಾಳ್ ಅವರು, "ಭಾನು ಮುಷ್ತಾಕ್ ಅವರ ಸಾಹಿತ್ಯಿಕ ಸೇವೆಯನ್ನು ಗೌರವಿಸಲು ದಸರಾ ವೇದಿಕೆಯನ್ನು ಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ, ಅವರನ್ನು ಧಾರ್ಮಿಕ ವಿಧಿವಿಧಾನಗಳಿರುವ ಉದ್ಘಾಟನಾ ಸಮಾರಂಭಕ್ಕೆ ಬದಲಾಗಿ, ದಸರಾ ಅಂಗವಾಗಿ ನಡೆಯುವ ಕವಿಗೋಷ್ಠಿ, ವಿಚಾರ ಸಂಕಿರಣ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಹ್ವಾನಿಸುವುದು ಸೂಕ್ತ. ಅದನ್ನು ಬಿಟ್ಟು, ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಮತ್ತು ಅವರ ನಂಬಿಕೆಗಳಿಗೂ ಇರಿಸುಮುರಿಸು ಉಂಟುಮಾಡುವ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳಬಾರದು," ಎಂದು ಎಚ್ಚರಿಸಿದ್ದಾರೆ.

Tags:    

Similar News