Dasara Add Row | ಕುಂಬಳಕಾಯಿ ಕಳ್ಳರು ಹೆಗಲು ಮುಟ್ಟಿಕೊಂಡಂತೆ... ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು
'ಇಡೀ ಜಾಹೀರಾತಿನಲ್ಲಿ ಯಾವುದೇ ವ್ಯಕ್ತಿ ಅಥವಾ ಪಕ್ಷದ ಹೆಸರು ಹೇಳಿಲ್ಲ. ಬೇರೆ ಯಾರಿಗೂ ಇಲ್ಲದ ಸಮಸ್ಯೆ ಬಿಜೆಪಿಯವರಿಗೆ ಮಾತ್ರ ಯಾಕೆ ಕಾಡಿದೆ? ಇದು ಕುಂಬಳಕಾಯಿ ಕಳ್ಳರು ಹೆಗಲು ಮುಟ್ಟಿಕೊಂಡ ಹಾಗಾಯಿತು' ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ದಸರಾ ಜಾಹೀರಾತು ಬಗ್ಗೆ ಟೀಕಿಸಿದ ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಕುಂಬಳಕಾಯಿ ಕಳ್ಳ ಎಂದರೆ ಬಿಜೆಪಿಯವರು ಹೆಗಲು ಮುಟ್ಟಿನೋಡಿಕೊಂಡ ಹಾಗಾಯಿತು ಎಂದು ಹೇಳಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಸಿ.ಎಂ 'ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷೆ ನೀಡುವುದೇ ದಸರೆಯ ಸಂದೇಶ. ವಿಜಯನಗರ ಅರಸರು ವಿಜಯದ ಸಂಕೇತವಾಗಿ ಪ್ರಾರಂಭಿಸಿರುವ ಆಯುಧಪೂಜೆ - ದಸರಾ ಉತ್ಸವವನ್ನು ಮೈಸೂರು ಒಡೆಯರ್ ಮುಂದುವರೆಸಿದ್ದು. ಇಂದಿಗೂ ಆ ಪರಂಪರೆಯನ್ನು ಪಾಲಿಸಲಾಗುತ್ತಿದೆ. 'ಜನಪರವಾಗಿರುವ ನಮ್ಮ ಸರ್ಕಾರವನ್ನು ದುಷ್ಟರಿಂದ ರಕ್ಷಿಸು ಎಂದು ಜಾಹೀರಾತಿನ ಮೂಲಕ ಪ್ರಾರ್ಥಿಸಲಾಗಿದೆ. ಇದು ದಸರಾದ ಆಶಯವೂ ಆಗಿದೆ' ಎಂದು ಜಾಹೀರಾತನ್ನು ಸಮರ್ಥಿಸಿಕೊಂಡಿದ್ದಾರೆ.
'ಇಡೀ ಜಾಹೀರಾತಿನಲ್ಲಿ ಯಾವುದೇ ವ್ಯಕ್ತಿ ಅಥವಾ ಪಕ್ಷದ ಹೆಸರು ಹೇಳಿಲ್ಲ. ಬೇರೆ ಯಾರಿಗೂ ಇಲ್ಲದ ಸಮಸ್ಯೆ ಬಿಜೆಪಿಯವರಿಗೆ ಮಾತ್ರ ಯಾಕೆ ಕಾಡಿದೆ? ಇದು ಕುಂಬಳಕಾಯಿ ಕಳ್ಳರು ಹೆಗಲು ಮುಟ್ಟಿಕೊಂಡ ಹಾಗಾಯಿತು' ಎಂದು ಹೇಳಿದ್ದಾರೆ.
ಜಾಹೀರಾತು ಮೂಲಕ ತಿರುಗೇಟು ನೀಡಿದ ಸರ್ಕಾರ
ರಾಜ್ಯ ಸರ್ಕಾರ ದಸರಾದ ಅಂಗವಾಗಿ ಎಲ್ಲಾ ಪತ್ರಿಕೆಗಳ ಮುಖಪುಟದಲ್ಲೇ ‘ದುಷ್ಟ ಶಕ್ತಿ ಎದುರು ಸತ್ಯದ ಜಯ. ಸರ್ಕಾರವನ್ನ ಅಸ್ಥಿರಗೊಳಿಸಲು ವಾಮಮಾರ್ಗ, ಮೋಸದಿಂದ ಯತ್ನಿಸುತ್ತಿರುವ ದುಷ್ಟಶಕ್ತಿಗಳನ್ನು ತಾಯಿ ಚಾಮುಂಡೇಶ್ವರಿ ನಿಗ್ರಹಿಸಲಿ’ ಎಂಬ ಪೂರ್ಣ ಪುಟದ ಜಾಹೀರಾತು ಪ್ರಕಟವಾಗಿತ್ತು. ಇದು ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಸರ್ಕಾರದ ಅಸ್ಥಿರಗೊಳಿಸಲು ಬಿಜೆಪಿಯಿಂದ ಷಡ್ಯಂತ್ರ ಎಂದು ಆರೋಪಿಸುತ್ತಲೇ ಬಂದಿದ್ದಾರೆ. ದಸರಾಗೆ ಶುಭಾಶಯ ಕೋರುವ ಸರ್ಕಾರದ ಜಾಹೀರಾತಿನ ಮೂಲಕ ಬಿಜೆಪಿ ಹಾಗೂ ಜೆಡಿಎಸ್ಗೆ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ.
ಜಾಹೀರಾತು ಬಗ್ಗೆ ಶೋಭಾ, ಕುಮಾರಸ್ವಾಮಿ ಕಿಡಿ
ಜಾಹೀರಾತಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ರಾಜ್ಯದಲ್ಲಿ ಮೋಸವನ್ನು ಸ್ಥಿರಗೊಳಿಸಲು ಸರ್ಕಾರ ಹೊರಟಿದೆ. ಸ್ಥಿರಗೊಳಿಸುವುದು, ಅಸ್ಥಿರಗೊಳಿಸುವುದು ನಮ್ಮ ಕೈಯಲ್ಲಿ ಇಲ್ಲ, ಚಾಮುಂಡಿ ತಾಯಿ ಕೈಯಲ್ಲಿ ಇದೆ ಎಂದು ಕಿಡಿಕಾರಿದ್ದರು.
ದುಷ್ಟಶಕ್ತಿಗಳು ಯಾರು ಎಂಬುದನ್ನು ಜನರು ತೀರ್ಮಾನ ಮಾಡುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದರು. ಸರ್ಕಾರದ ಹಣವನ್ನು ಇಂಥಾ ಜಾಹೀರಾತಿಗೆ ಖರ್ಚು ಮಾಡಿ ಲೂಟಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
ಈ ಜಾಹಿರಾತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಎಕ್ಸ್ ಖಾತೆಯಲ್ಲಿ ಟೀಕಿಸಿದ್ದ ಬಿಜೆಪಿ, ನೀವು ಜಾಹೀರಾತು ನೀಡುವುದರಿಂದ ನೀವು ಮಾಡಿರುವ ಪಾಪಕರ್ಮ, ಭ್ರಷ್ಟಾಚಾರಗಳು ಪರಿಹಾರವಾಗುವುದಿಲ್ಲ ಎಂದು ರಾಜ್ಯ ಸರ್ಕಾರದ ಜಾಹೀರಾತಿಗೆ ಟಾಂಗ್ ನೀಡಿತ್ತು. ನವರಾತ್ರಿ ಎಂಬುದಕ್ಕೆ ಹಿಂದೂ ಧರ್ಮದಲ್ಲಿ ಪೌರಾಣಿಕ ಮಹತ್ವವಿದೆ. ದುರ್ಗೆಯ ನವ ಅವತಾರಗಳನ್ನು ಆರಾಧಿಸುವ ಈ ಹಬ್ಬವನ್ನು ಭ್ರಷ್ಟ ಮುಖ್ಯಮಂತ್ರಿ, ಮುಡಾ ಹಗರಣದ ಎ1 ಆರೋಪಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯಕ್ಕಾಗಿ ಬಳಸಿಕೊಂಡಿರುವುದು ಅಕ್ಷಮ್ಯ ಎಂದು ಕಿಡಿಕಾರಿತ್ತು.