Actor Darshan Case | ದರ್ಶನ್‌ ಬಿಡುಗಡೆಗಾಗಿ ಮೂಕಾಂಬಿಕಾ ಮೊರೆ ಹೋದ ದರ್ಶನ್​ ಪತ್ನಿ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಜೈಲು ಸೇರಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್‌ ಬಿಡುಗಡೆಗೆ ಕೋರಿ ಪತ್ನಿ ವಿಜಯಲಕ್ಷ್ಮಿ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಚಂಡಿಕಾಯಾಗ ನಡೆಸಿದರು.

Update: 2024-07-26 10:45 GMT
ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದ ದರ್ಶನ್‌ ಪತ್ನಿ ವಿಜಯಲಕ್ಷ್ಮೀ
Click the Play button to listen to article

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್, ಕಳೆದ ಒಂದು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜೈಲಿನಿಂದ ದರ್ಶನ್‌ ಬಿಡುಗಡೆಗಾಗಿ ಅವರ ಪತ್ನಿ ವಿಜಯಲಕ್ಷ್ಮಿ ಅವರು ಶುಕ್ರವಾರ ಕೊಲ್ಲೂರಿನ ಮೂಕಾಂಬಿಕಾ ಕ್ಷೇತ್ರದಲ್ಲಿ ಚಂಡಿಕಾ ಹೋಮ ನಡೆಸಿದರು.

ವಿಜಯಲಕ್ಷ್ಮೀ ಅವರು ತಮ್ಮ ಕುಟುಂಬ ಮತ್ತು ಆಪ್ತರ ಜೊತೆ ಗುರುವಾರ ಕೊಲ್ಲೂರಿಗೆ ಆಗಮಿಸಿದ್ದು, ಮೂಕಾಂಬಿಕಾ ದೇವಿಯ ದರ್ಶನ ಪಡೆದಿದ್ದರು. ಬಳಿಕ ಶುಕ್ರವಾರ ಕ್ಷೇತ್ರದಲ್ಲಿ ನವ ಚಂಡಿಕಾ ಯಾಗ ನಡೆಸಿದರು.

ದೇವಾಲಯದ ಅರ್ಚಕರು ಮತ್ತು ಯತಿಗಳ ನೇತೃತ್ವದಲ್ಲಿ ಪೂಜೆ ಮತ್ತು ಚಂಡಿಕಾ ಹೋಮ ನಡೆದವು. 

ಡಿಸಿಎಂ ಭೇಟಿ ಮಾಡಿದ್ದ ವಿಜಯಲಕ್ಷ್ಮಿ

ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ನಿವಾಸಕ್ಕೆ ಭೇಟಿ ನೀಡಿದ್ದ ವಿಜಯಲಕ್ಷ್ಮಿ ಅವರು ಪ್ರಕರಣದಲ್ಲಿ ಕಾನೂನು ವ್ಯಾಪ್ತಿಯಲ್ಲಿ ನೆರವಾಗುವಂತೆ ಮನವಿ ಮಾಡಿದ್ದರು. ಆದರೆ, ಡಿಸಿಎಂ, ಅವರು ಅಪರಾಧ ಎಸಗಿಲ್ಲ ಎಂದರೆ ಬಿಡುಗಡೆಯಾಗುತ್ತಾರೆ ಎಂದು ಸಮಾಧಾನ ಹೇಳಿ ಕಳಿಸಿದ್ದರು. 

ಬಳಿಕ ಆ ಕುರಿತು ಅಧಿಕೃತ ಹೇಳಿಕೆ ನೀಡಿದ್ದ ಡಿಸಿಎಂ ಶಿವಕುಮಾರ್‌, ಅವರು ತಮ್ಮನ್ನು ಭೇಟಿ ಮಾಡಿದ್ದು ದರ್ಶನ್‌ ಪ್ರಕರಣದ ವಿಷಯದಲ್ಲಿ ಅಲ್ಲ; ಅವರ ಪುತ್ರನ ಶಿಕ್ಷಣದ ವಿಷಯ ಚರ್ಚಿಸಲು ಬಂದಿದ್ದರು ಎಂದು ಸ್ಪಷ್ಟನೆ ನೀಡಿದ್ದರು.

ಈ ನಡುವೆ, ಮನೆ ಊಟಕ್ಕಾಗಿ ಕೋರಿ ನಟ ದರ್ಶನ್‌ಗೆ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಕೂಡ ಕೋರ್ಟ್‌ ಗುರುವಾರ ( ಜುಲೈ ೨೫) ವಜಾಗೊಳಿಸಿದೆ. ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್‌ ಗೆ ಮನೆ ಊಟ ನೀಡುವುದಕ್ಕೆ ಕಾನೂನು ವ್ಯಾಪ್ತಿಯಲ್ಲಿ ಅವಕಾಶವಿಲ್ಲ ಎಂದು ಕೋರ್ಟ್‌ ಸಾರಾಸಗಟಾಗಿ ಅರ್ಜಿಯನ್ನು ತಳ್ಳಿಹಾಕಿತ್ತು.

ಪ್ರಕರಣದ ಹಿನ್ನಲೆ

ದರ್ಶನ್ ಆಪ್ತೆ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಆರೋಪಿಗಳಲ್ಲಿ ಒಬ್ಬನಾದ ರಾಘವೇಂದ್ರ ಎಂಬಾತ ರೇಣುಕಾ ಸ್ವಾಮಿಯನ್ನು ದರ್ಶನ್ ಭೇಟಿ ನೆಪದಲ್ಲಿ ಬೆಂಗಳೂರಿನ ಆರ್ ಆರ್ ನಗರದ ಶೆಡ್‌ಗೆ ಕರೆತಂದಿದ್ದ. ಇದೇ ಶೆಡ್‌ನಲ್ಲಿಯೇ ಜೂನ್ 8 ರಂದು ಆತನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು.

ನಂತರ ದರ್ಶನ್ ಸೂಚನೆ ಮೇರೆಗೆ ರೇಣುಕಾ ಸ್ವಾಮಿಯ ಶವವನ್ನು ಮೋರಿಗೆ ಎಸೆದು ಹೋಗಿದ್ದರು. ಮೋರಿಯಲ್ಲಿ ತೇಲುತ್ತಿದ್ದ ಶವವನ್ನು ಬೀದಿನಾಯಿಗಳು ಕಚ್ಚಿ ಎಳೆದು ತಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿರುವಾಗ ಈ ಕೊಲೆಯ ಹಿಂದಿನ ರೂವಾರಿ ದರ್ಶನ್ ಎಂದು ತಿಳಿದುಬಂದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 11 ರಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣ ಸಂಬಂಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ದರ್ಶನ್‌ ಸೇರಿದಂತೆ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ.

Tags:    

Similar News