ದರ್ಶನ್ ಜಾಮೀನು ರದ್ದು ಕೋರಿ ಅರ್ಜಿ, ಏ.2 ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

ನಟ ದರ್ಶನ್ ಅವರಿಗೆ ನೀಡಲಾದ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಏಪ್ರಿಲ್ 2 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.;

Update: 2025-03-18 09:22 GMT

ನಟ ದರ್ಶನ್‌

ಚಿತ್ರದುರ್ಗದ  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ನೀಡಲಾದ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಏಪ್ರಿಲ್ 2 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.

ಕರ್ನಾಟಕ ಹೈಕೋರ್ಟ್ ಈ ಹಿಂದೆ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಿತ್ತು. ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸಬೇಕಿತ್ತು. ಆದರೆ ವಿಚಾರಣೆಗೆ ಪಟ್ಟಿಯಾಗದ ಹಿನ್ನೆಲೆ ದರ್ಶನ್ ಪ್ರಕರಣದಲ್ಲಿನ ರಾಜ್ಯದ ವಿಶೇಷ ವಕೀಲ ಅನಿಲ್ ನಿಶಾನಿ ಅರ್ಜಿ ವಿಚಾರಣೆ ನಡೆಸುವಂತೆ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಕೋರ್ಟ್ ಏ. 2 ರಂದು ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಕಳೆದ ವಿಚಾರಣೆಯಲ್ಲಿ ಅರ್ಜಿ ವಿಚಾರಣೆಗೆ ಒಪ್ಪಿಕೊಂಡಿದ್ದ ಸುಪ್ರೀಂಕೋರ್ಟ್ ನಟ ದರ್ಶನ್ ಸೇರಿದಂತೆ ಇತರೆ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಮೂಲಗಳ ಪ್ರಕಾರ ಈವರೆಗೂ ದರ್ಶನ್ ಸುಪ್ರೀಂಕೋರ್ಟ್ ನೋಟಿಸ್‌ಗೆ ಪ್ರತಿಕ್ರಿಯಿಸಿಲ್ಲ ಹಾಗೂ ಅವರ ವಕೀಲರು ವಕಾಲತ್ತು ಕೂಡಾ ಹಾಕಿಲ್ಲ.

2024 ರಲ್ಲಿ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ದರ್ಶನ್‌ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು  ದರ್ಶನ್ ಮತ್ತು ಗ್ಯಾಂಗ್‌ ಅವರನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಅವರ ಆಪ್ತ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ 13 ಮಂದಿ ಆರೋಪಿಗಳಾಗಿ ಬಂಧಿಸಲಾಗಿತ್ತು. 

ನಟ ದರ್ಶನ್ 131 ದಿನಗಳ ಜೈಲುವಾಸದ ನಂತರ ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಅ.30 ರಂದು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ನಂತರ ಹೈಕೋರ್ಟ್ ಡಿ.13 ರಂದು ದರ್ಶನ್ ಮತ್ತು ಪ್ರಮುಖ ಆರೋಪಿ ಪವಿತ್ರ ಗೌಡ ಸೇರಿದಂತೆ ಇತರ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು.

Tags:    

Similar News