ಕೊಲೆ ಆರೋಪಿ ದರ್ಶನ್‌ಗೆ ರಾಜಾತಿಥ್ಯ: ಮತ್ತೆ ಇಬ್ಬರು ಅಧಿಕಾರಿಗಳ ಅಮಾನತು
ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಗೆ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಜೈಲು ಸಿಬ್ಬಂದಿಯ ಅಮಾನತಿನ ಬೆನ್ನಲ್ಲೇ ಮತ್ತೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ ಪ್ರಕರಣದ ಕುರಿತು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ.
ಸೋಮವಾರ ಬೆಳಿಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಕೈದಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸದೇ ಇರುವುದು, ಪ್ರಮುಖ ಆರೋಪಿಗಳನ್ನು ಭೇಟಿ ಮಾಡಿ ಹೋದ ನಂತರ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸದೇ ಇರುವುದು ಮುಂತಾದ ಲೋಪಗಳ ಕುರಿತು ಜೈಲಿನ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಘಟನೆಯಲ್ಲಿ ಲೋಪ ಎಸಗಿರುವುದು, ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಜೈಲಿನ ಮುಖ್ಯ ಸೂಪರಿಂಡೆಂಟ್ ಶೇಷಮೂರ್ತಿ ಹಾಗೂ ಸೂಪರಿಂಡೆಂಟ್ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಡಾ ಜಿ ಪರಮೇಶ್ವರ್ ಇದೇ ವೇಳೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಭೀಕರತೆ, ದರ್ಶನ್ ಬಂಧನ ಮತ್ತು ಪ್ರಕರಣದ ಗಂಭೀರತೆ ಏನೆಂಬುದು ಗೊತ್ತಿದೆ. ಆದರೂ ನಿಯಮಗಳನ್ನು ಮೀರಿ ಆರೋಪಿಗಳಿಗೆ ಟೀ, ಸಿಗರೇಟ್ ಮತ್ತಿತರ ಸವಲತ್ತುಗಳನ್ನು ನೀಡಲಾಗಿದೆ. ಜೈಲಿನಲ್ಲಿ ದಿನ ಇಪ್ಪತ್ತನಾಲ್ಕು ಗಂಟೆಯೂ ವಾರ್ಡನ್ಗಳು ಕರ್ತವ್ಯದಲ್ಲಿ ಇರುತ್ತಾರೆ. ಹಾಗಿದ್ದರೂ ಆ ಎಲ್ಲರ ಕಣ್ತಪ್ಪಿಸಿ ಇವೆಲ್ಲಾ ಸರಬರಾಜಾಗಿರುವುದು ಮತ್ತು ಗಂಭೀರ ಕೊಲೆ ಪ್ರಕರಣದ ಆರೋಪಿಗಳು ರಾಜಾರೋಷವಾಗಿ ನಡೆದುಕೊಂಡಿರುವುದು ಹೇಗೆ ಸಾಧ್ಯ ಎಂದು ಪರಮೇಶ್ವರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜೈಲಿನಲ್ಲಿ ಹೈಫ್ರೀಕ್ವೆನ್ಸಿ ಜಾಮರ್, ಅತ್ಯುತ್ತಮ ಗುಣಮಟ್ಟದ ಮೆಟಲ್ ಡಿಟೆಕ್ಟರ್, ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಇಷ್ಟೆಲ್ಲಾ ಬಂದೋಬಸ್ತ್ ಇರುವಾಗಲೂ ಕಾರಾಗೃಹದ ಒಳಗೆ ಸಿಗರೇಟ್, ಮೊಬೈಲ್ ತಲುಪಿರುವುದು ಹೇಗೆ ಎಂದು ಕೇಳಿದ ಅವರು, ರಾಜ್ಯದ ಎಲ್ಲಾ ಬಂಧೀಖಾನೆಗಳಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹಾಗೂ ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರಿಗೆ ಸೂಚನೆ ನೀಡಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಪರಪ್ಪನ ಅಗ್ರಹಾರ ಜೈಲಿನ ಏಳು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಇದೀಗ ಇಬ್ಬರು ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಈವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಒಂಭತ್ತು ಮಂದಿಯನ್ನು ಅಮಾನತು ಮಾಡಲಾಗಿದೆ.