Internal Reservation: Part -6 | ಆದಿ ಕರ್ನಾಟಕ, ಆದಿ ಆಂಧ್ರ ಹಾಗೂ ಆದಿ ದ್ರಾವಿಡ ಎಂದರೇನು? ಜಾತಿ ಸೂಚಕಗಳಾಗಿದ್ದು ಹೇಗೆ?

ತಮಿಳು ಭಾಷಿಕ ದಲಿತರು ಆದಿ ದ್ರಾವಿಡರು. ತೆಲುಗು ಭಾಷಿಕ ಪರಿಶಿಷ್ಟರನ್ನು ಆದಿ ಆಂಧ್ರ ಎಂದು ಪರಿಗಣಿಸಲಾಗಿದೆ. ಕನ್ನಡ ಭಾಷೆ ಮಾತನಾಡುವರು ಆದಿ ಕರ್ನಾಟಕ ಸಮುದಾಯದವರು.;

Update: 2025-04-11 02:50 GMT

ಪರಿಶಿಷ್ಟ ಜಾತಿಯಲ್ಲಿ ಉಪಜಾತಿಗಳ ನಿಖರ ದತ್ತಾಂಶ ಸಂಗ್ರಹಣೆಗೆ ನ್ಯಾ.ನಾಗಮೋಹನದಾಸ್ ನೇತೃತ್ವದಲ್ಲಿ ಹೊಸ ಸಮೀಕ್ಷೆಗೆ ತಯಾರಿ ನಡೆದಿದೆ. 2011ರ ಜಾತಿಗಣತಿಯಲ್ಲಿ 7.29 ಲಕ್ಷ ಜನರು ಉಪಜಾತಿಗಳನ್ನು ಉಲ್ಲೇಖಿಸದ ಪರಿಣಾಮ ಒಳ ಮೀಸಲಾತಿ ಕಗ್ಗಂಟಾಗಿ ಮಾರ್ಪಟ್ಟಿದ್ದು, ಮೂಲ ಜಾತಿಗಳ ನಿಖರ ದತ್ತಾಂಶ ಸಂಗ್ರಹಣೆಗಾಗಿ ಹೊಸ ಸಮೀಕ್ಷೆ ಅನಿವಾರ್ಯ ಎನಿಸಿದೆ.

ರಾಜರ ಆಳ್ವಿಕೆಯಿಂದಲೂ ಚಾಲ್ತಿಗೆ ಬಂದ ಜಾತಿಸೂಚಕಗಳು ಪ್ರಾದೇಶಿಕವಾಗಿ ಭಿನ್ನವಾಗಿದ್ದು, ಮೀಸಲಾತಿ ವರ್ಗೀಕರಣಕ್ಕೆ ಸಮಸ್ಯೆ ತಂದೊಡ್ಡಿವೆ. ಜಾತಿ ವ್ಯವಸ್ಥೆಯಲ್ಲಿ ಆದಿ ಕರ್ನಾಟಕ, ಆದಿ ಆಂಧ್ರ ಹಾಗೂ ಆದಿ ದ್ರಾವಿಡ ಜಾತಿ ಸೂಚಕಗಳು ಪ್ರಬಲವಾಗಿ ಗುರುತಿಸಿಕೊಂಡಿದ್ದು, ಉಪ ಜಾತಿಗಳ ಹೆಸರು ನೇಪಥ್ಯೆಕ್ಕೆ ಸರಿದಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳ ಜನಸಂಖ್ಯೆ, ಪ್ರದೇಶವಾರು ಭಿನ್ನತೆ, ಗುಂಪುಗಳ ಐತಿಹ್ಯದ ಕುರಿತ ವರದಿ ಇಲ್ಲಿದೆ.

ಜಾತಿ, ಉಪಜಾತಿಗಳ ಜನಸಂಖ್ಯೆ ಎಷ್ಟಿದೆ?

2011 ರ ಜಾತಿಗಣತಿ ವರದಿಯ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 1.05 ಕೋಟಿ ಇದೆ. ಇವರಲ್ಲಿ 7.29 ಲಕ್ಷ ಜನರು ಯಾವುದೇ ಉಪ ಜಾತಿ ನಮೂದಿಸದಿರುವುದು ಕಂಡುಬಂದಿದೆ.

ಅಂದರೆ ನಿಖರವಾದ ಜನಸಂಖ್ಯೆ 97.56 ಲಕ್ಷ ಎಂದು ಪರಿಗಣಿಸಿದ್ದು, ಇದರಲ್ಲಿ ಆದಿ ಕರ್ನಾಟಕ 29.21 ಲಕ್ಷ ಇದ್ದರೆ, ಆದಿ ದ್ರಾವಿಡರು 7.95 ಲಕ್ಷ ಇದ್ದಾರೆ ಎಂಬುದನ್ನು ಕಾಂಗ್ರೆಸ್ ಸರ್ಕಾರವು ಸಚಿವ ಸಂಪುಟದ ಮುಂದೆ ಮಂಡಿಸಿದ್ದ ಟಿಪ್ಪಣಿಯಲ್ಲಿ ಉಲ್ಲೇಖಿಸಿತ್ತು.

ಪರಿಶಿಷ್ಟ ಜಾತಿಯ ನಾಲ್ಕು ವರ್ಗಗಳಲ್ಲಿ ಬರುವ ಮೊದಲ ಗುಂಪಿನಲ್ಲಿ(ಮಾದಿಗ) ಆದಿದ್ರಾವಿಡ, ಭಂಬಿ, ಮಾದಿಗ, ಸಮಗಾರ ಜಾತಿಗಳಿವೆ. ಈ ಗುಂಪಿನ ಜನಸಂಖ್ಯೆ 32.60 ಲಕ್ಷ ಇದೆ. ಎರಡನೇ ಗುಂಪಿನಲ್ಲಿ(ಹೊಲೆಯ) ಆದಿ ಕರ್ನಾಟಕ, ಛಲವಾದಿ, ಚನ್ನದಾಸರ, ಹೊಲೆಯ, ಮಹರ್ ಜಾತಿಗಳಿದ್ದು, ಇವರ ಜನಸಂಖ್ಯೆ 32.58 ಲಕ್ಷ ಜನಸಂಖ್ಯೆ ಎಂದು ತೋರಿಸಿದೆ. ಮೂರನೇ ಗುಂಪಿನಲ್ಲಿ(ಸ್ಪೃಶ್ಯ) ಬಂಜಾರ, ಭೋವಿ, ಕೊರಚ, ಕೊರಮ ಹಾಗೂ ಸಮಾನಾಂತರ ಜಾತಿಗಳಿದ್ದು, ಒಟ್ಟು 26.51 ಲಕ್ಷ ಜನಸಂಖ್ಯೆ ಹೊಂದಿವೆ. ನಾಲ್ಕನೇ ಗುಂಪಿಗೆ ಸೇರುವ ಅಸ್ಪಶ್ಯತೆಗೆ ಒಳಗಾಗಿರುವ ಹಾಗೂ ಕಡಿಮೆ ಜನಸಂಖ್ಯೆ ಹೊಂದಿರುವ 88 ಜಾತಿಗಳಿದ್ದು, ಇವುಗಳ ಜನಸಂಖ್ಯೆ 5.87 ಲಕ್ಷವಿದೆ ಎಂಬುದನ್ನು ಸರ್ಕಾರವೇ ಟಿಪ್ಪಣಿಯಲ್ಲಿ ನಮೂದಿಸಿತ್ತು.

ಬೆಂಗಳೂರು ನಗರ ಜಿಲ್ಲೆಯಲ್ಲಿ ಆದಿ ಕರ್ನಾಟಕ ಜಾತಿ ಸೂಚಕದಲ್ಲಿರುವ ಸಮುದಾಯದ ಜನಸಂಖ್ಯೆ 4,46,146 ಇದೆ. ಆದಿ ಆಂಧ್ರ ಸಮುದಾಯ 16,331, ಆದಿ ದ್ರಾವಿಡರು 3,00,739 ಮಂದಿ ಇದ್ದಾರೆ ಎಂದು ತಿಳಿಸಿತ್ತು.

ಪ್ರದೇಶವಾರು ಜಾತಿಸೂಚಕ ಪದ ಹೇಗಿದೆ?

ತಮಿಳುನಾಡು ಗಡಿಭಾಗದ ಜಿಲ್ಲೆಯ ಹಾಗೂ ತಮಿಳು ಭಾಷೆ ಮಾತನಾಡುವವರನ್ನು ಆದಿ ದ್ರಾವಿಡ ಎಂದು ಪರಿಗಣಿಸಲಾಗಿದೆ. ಚಾಮರಾಜನಗರ, ಕೋಲಾರ, ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶ, ಆನೇಕಲ್, ಮೈಸೂರು ಭಾಗದಲ್ಲಿ ನೆಲೆಯೂರಿದ್ದಾರೆ.

ಮಹಾರಾಷ್ಟ್ರದ ಗಡಿಭಾಗದಲ್ಲಿ ಜಿಲ್ಲೆಗಳಲ್ಲಿ ಮರಾಠಿ ಭಾಷಿಕರಿರುವ ಮಹರ್ ಸಮುದಾಯ ನೆಲೆ ಕಂಡುಕೊಂಡಿದೆ. ತೆಲುಗು ಭಾಷಿಕ ಪರಿಶಿಷ್ಟರನ್ನು ಆದಿ ಆಂಧ್ರ ಎಂದು ಪರಿಗಣಿಸಿದ್ದು, ಚಿಕ್ಕಬಳ್ಳಾಪುರ, ಬಳ್ಳಾರಿ, ಪಾವಗಡ ಹಾಗೂ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಇದ್ದಾರೆ. ಕನ್ನಡ ಭಾಷೆ ಮಾತನಾಡುವ ಆದಿ ಕರ್ನಾಟಕ ಸಮುದಾಯ ಹಳೆ ಮೈಸೂರು ಭಾಗ, ಮಧ್ಯಕರ್ನಾಟಕದ ಜಿಲ್ಲೆಗಳಲ್ಲಿ ನೆಲೆಯೂರಿದೆ.

ಕನ್ನಡ ಮಾತನಾಡುವ ಹೊಲೆಯ, ಮಾದಿಗ ಎರಡು ಜಾತಿಗಳನ್ನು 1925ರ ಸರ್ಕಾರಿ ಆದೇಶದಲ್ಲಿ ಆದಿ ಕರ್ನಾಟಕ ಎಂದು ಕರೆಯಲಾಗಿದೆ.

ಯಾವ ಭಾಗದಲ್ಲಿ ಯಾವ ಜಾತಿ ಹೆಚ್ಚು?

ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಇಲ್ಲಿ ಈ ಸಮುದಾಯ ಆದಿ ಕರ್ನಾಟಕ ಜಾತಿ ಸೂಚಕದಲ್ಲಿ ಗುರುತಿಸಿಕೊಂಡಿದೆ. ಹೊಲೆಯ ಹಾಗೂ ಛಲವಾದಿ ಸಮುದಾಯವು ಆದಿ ದ್ರಾವಿಡ ಜಾತಿ ಸೂಚಕದಲ್ಲಿದೆ.

ಮಂಡ್ಯ, ಕೊಡಗು, ಮೈಸೂರು, ಚಾಮರಾಜನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಹೊಲೆಯ ಹಾಗೂ ಮಾದಿಗ ಸಮುದಾಯಗಳು ಆದಿ ಕರ್ನಾಟಕ ಜಾತಿ ಸೂಚಕದಲ್ಲಿವೆ.

ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಮಾದಿಗ ಸಮುದಾಯ ಆದಿ ದ್ರಾವಿಡದಲ್ಲಿದ್ದರೆ, ಹೊಲೆಯ ಮತ್ತು ಛಲವಾದಿ ಸಮುದಾಯ ಆದಿ ಕರ್ನಾಟಕದಲ್ಲಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮೊಗೆರ್ ಸಮುದಾಯವು ಆದಿ ದ್ರಾವಿಡ ಹೆಸರಿನಲ್ಲಿ ಮೀಸಲಾತಿ ಸೌಲಭ್ಯ ಪಡೆಯುತ್ತಿದೆ.

ಕೋಲಾರ(ಕೆಜಿಎಫ್), ಬೆಂಗಳೂರು ನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ತಮಿಳು ಮೂಲದ ಪರಯ್ಯ ಸಮುದಾಯ, ಆದಿ ದ್ರಾವಿಡದಲ್ಲಿದೆ. ಕೆ.ಜಿ.ಎಫ್ನಲ್ಲಿ ಕೆಲ ಭಾಗದಲ್ಲಿ ಆಂಧ್ರ ಮೂಲದ ಮಾದಿಗ ಸಮುದಾಯವು ಆದಿ ದ್ರಾವಿಡ ಜಾತಿ ಹೆಸರಿನಲ್ಲಿದೆ. ಅದೇ ಆಂಧ್ರ ಮೂಲದ ಮಾದಿಗ ಸಮುದಾಯ ಬೆಂಗಳೂರು ನಗರ, ಚಿಕ್ಕಬಳ್ಳಾಪು ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಆದಿ ದ್ರಾವಿಡ ಜಾತಿ ಸೂಚಕದಲ್ಲಿದೆ.

ಪಣಕಟ್ಟಿನಿಂದ ಅಸ್ಪೃಶ್ಯತೆವರೆಗಿನ ಐತಿಹ್ಯವೇನು?

ಕೃಷಿ ಆಧಾರಿತ ಜಾತಿಗಳು ಬಲಗೈ ಸಮೂಹವಾದರೆ, ಕರಕುಶಲ ಕರ್ಮಿ ಹಾಗೂ ವ್ಯಾಪಾರಿಗಳ ಸಮುದಾಯ ಎಡಗೈ ಗುಂಪಿನಲ್ಲಿದ್ದವು ಎಂಬುದು ಇತಿಹಾಸದಿಂದ ತಿಳಿದುಬರಲಿದೆ. ಎಡಗೈ ಹಾಗೂ ಬಲಗೈ ಗುಂಪುಗಳನ್ನು ಕರ್ನಾಟಕದಲ್ಲಿ ಪಣಕಟ್ಟುಗಳು ಎಂದು ಕರೆಯಲಾಗುತ್ತಿತ್ತು. ಮೈಸೂರು ಸರ್ಕಾರದ ಅಧಿಸೂಚನೆಯಲ್ಲಿ ಇದು ದಾಖಲಾಗಿದೆ. ಆ ಪ್ರಕಾರ ಬಲಗೈ ಪಣಕಟ್ಟಿನಲ್ಲಿ ಬಣಜಿಗ, ಒಕ್ಕಲಿಗ, ಗಾಣಿಗ, ಕುರುಬ ಸೇರಿ 18 ಜಾತಿಗಳಿವೆ. ಎಡಗೈ ಪಣಕಟ್ಟಿನಲ್ಲಿ ಪಾಂಚಾಳ(ವಿಶ್ವಕರ್ಮ), ಅಕ್ಕಸಾಲಿಗ, ದೇವಾಂಗ, ಬೇಡ ಸೇರಿ 14 ಜಾತಿಗಳಿವೆ. ಈ ಜಾತಿಗಳ ಉಪಜಾತಿಗಳು ಸೇರಿ 98 ಜಾತಿಗಳಿವೆ.

ಪಣಕಟ್ಟುಗಳು ವೃತ್ತಿ ಆಧಾರಿತವಾಗಿ ವಿಭಜನೆಗೊಂಡಾಗ ಹೊಲೆಯ ಸಮುದಾಯ ಬಲಗೈ ಪಣಕಟ್ಟಿನ ಅತ್ಯಂತ ಕೆಳಸ್ತರದಲ್ಲಿ ಅಸ್ಪೃಶ್ಯರು ಎಂದು ದಾಖಲಾಯಿತು. ಮಾದಿಗ ಸಮುದಾಯ ಎಡಗೈ ಪಣಕಟ್ಟಿನ ಕೆಳಸ್ತರಕ್ಕೆ ದೂಡಲ್ಪಟ್ಟಿತು ಎಂಬುದು ಸಿಂದ್ ಮಾದಿಗರ ಸಂಸ್ಕೃತಿ ಕೃತಿಯಲ್ಲಿ ದಾಖಲಾಗಿದೆ.

ಮುಂದಿನ ತಿಂಗಳಲ್ಲಿ ಹೊಸ ಸಮೀಕ್ಷೆ

ಪರಿಶಿಷ್ಟ ಜಾತಿಯ ಉಪಜಾತಿಗಳ ವೈಜ್ಞಾನಿಕ ದತ್ತಾಂಶ ಸಂಗ್ರಹಣೆಗಾಗಿ ನಡೆಯಲಿರುವ ಹೊಸ ಸಮೀಕ್ಷೆಗೆ 30 ಸಾವಿರ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗತ್ತಿದೆ. ಹೊಸ ಸಮೀಕ್ಷೆಗೆ 8 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ನ್ಯಾ. ನಾಗಮೋಹನದಾಸ್ ನೇತೃತ್ವದ ಆಯೋಗಕ್ಕೆ ಸರ್ಕಾರದ ವಿವಿಧ ಇಲಾಖೆಗಳು ಸಹಕಾರ ನೀಡಲಿದ್ದು, ಅಗತ್ಯ ಮಾಹಿತಿ ಒದಗಿಸಲಿವೆ. ಮನೆ ಮನೆಗೂ ಭೇಟಿ ನೀಡುವ ಬದಲು ಪಂಚಾಯ್ತಿವಾರು ಬಾಪೂಜಿ ಕೇಂದ್ರದಿಂದ ದತ್ತಾಂಶ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಸಮೀಕ್ಷೆಯಲ್ಲಿ ಜನರು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ನಿಗದಿತ ನಮೂನೆಯಲ್ಲಿ ನೀಡುವ ಪ್ರಶ್ನಾವಳಿಗೆ ಉತ್ತರಿಸುವ ಮೂಲಕ ದಾಖಲೆಗಳನ್ನು ಅಪ್ಲೋಡ್ ಮಾಡಲು ಪ್ರತ್ಯೇಕ ವೆಬ್ಸೈಟ್ ಆರಂಭಿಸಲಿದೆ. ಪ್ರಶ್ನಾವಳಿಯಲ್ಲಿ ಜಾತಿ, ಉಪಜಾತಿ ಜೊತೆಗೆ ವಿವಿಧ ಆಯಾಮಗಳಲ್ಲಿ ಮಾಹಿತಿ ಸಂಗ್ರಹಣೆಗೆ ಪೂರಕವಾಗುವ ಪ್ರಶ್ನೆಗಳಿರಲಿವೆ ಎಂದು ಮೂಲಗಳು ತಿಳಿಸಿವೆ.

“ಪರಿಶಿಷ್ಟ ಜಾತಿ ಸಮೀಕ್ಷೆ ಪೂರ್ವ ತಯಾರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಉನ್ನತಮಟ್ಟದ ಎರಡು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಿ ಉಪಜಾತಿಗಳ ವೈಜ್ಞಾನಿಕ ದತ್ತಾಂಶ ಸಂಗ್ರಹಿಸಲಾಗುವುದು ಎಂದು ಆಯೋಗದ ಅಧ್ಯಕ್ಷ ನ್ಯಾ. ನಾಗಮೋಹನ ದಾಸ್ ಹೇಳಿದ್ದಾರೆ.

Tags:    

Similar News