ಮೇಲ್ಜಾತಿ ಯುವಕನ ಮದುವೆಯಾದ ದಲಿತ ಯುವತಿ ಸಾವು, 7 ವರ್ಷದ ಪ್ರೀತಿ ದುರಂತ ಅಂತ್ಯ
ಮಚ್ಚೆ ಗ್ರಾಮದ ವಿಜಯಗಲ್ಲಿ ನಿವಾಸಿ ಅನಿತಾ (25) ಮೃತಪಟ್ಟ ಯುವತಿ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅನಿತಾ, ಅದೇ ಊರಿನ ಮರಾಠ ಸಮುದಾಯದ ನಿಲೇಶ್ ಎಂಬ ಯುವಕನನ್ನು ಪ್ರೀತಿಸಿದ್ದರು.;
ಮೃತ ದಲಿತ ಯುವತಿ ಅನಿತಾ
ಏಳು ವರ್ಷಗಳ ಪ್ರೀತಿಯೊಂದು ದುರಂತ ಕಂಡಿದೆ. ಮನೆಯವರ ವಿರೋಧದ ನಡುವೆಯೂ ಅಂತರ್ಜಾತಿ ವಿವಾಹವಾಗಿದ್ದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಲ್ಲಿ ನಡೆದಿದೆ.
ಮೇಲ್ಜಾತಿಯ ಯುವಕನನ್ನು ಮದುವೆಯಾಗಿದ್ದೇ ದಲಿತ ಸಮುದಾಯದ ಯುವತಿಯ ಪಾಲಿಗೆ ಕಂಟಕವಾಗಿದ್ದು, ಆಕೆಯ ಸಾವಿನ ಹಿಂದೆ ಜಾತಿ ಕಿರುಕುಳ ಮತ್ತು ಕೊಲೆಯ ಶಂಕೆ ವ್ಯಕ್ತವಾಗಿದೆ.
ಮಚ್ಚೆ ಗ್ರಾಮದ ವಿಜಯಗಲ್ಲಿ ನಿವಾಸಿ ಅನಿತಾ (25) ಮೃತಪಟ್ಟ ಯುವತಿ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅನಿತಾ, ಅದೇ ಊರಿನ ಮರಾಠ ಸಮುದಾಯದ ನಿಲೇಶ್ ಎಂಬ ಯುವಕನನ್ನು ಪ್ರೀತಿಸಿದ್ದರು. ಏಳು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಈ ಜೋಡಿ, ಅನಿತಾ ದಲಿತ ಸಮುದಾಯದವಳು ಎಂಬ ಕಾರಣಕ್ಕೆ ನಿಲೇಶ್ ಮನೆಯವರ ವಿರೋಧದ ನಡುವೆಯೂ ನಾಲ್ಕು ತಿಂಗಳ ಹಿಂದೆ ನೋಂದಣಿ ಮದುವೆಯಾಗಿದ್ದರು.
ಮದುವೆಯಾದ ಕೆಲವೇ ದಿನಗಳಲ್ಲಿ ನಿಲೇಶ್ ತನ್ನ ಕೆಲಸ ಬಿಟ್ಟಿದ್ದರು. ಅತ್ತ, ಮೂರು ತಿಂಗಳ ಗರ್ಭಿಣಿಯಾಗಿದ್ದ ಅನಿತಾಳಿಗೆ ಗಂಡನ ಮನೆಯವರಿಂದ ಜಾತಿ ವಿಷಯವಾಗಿ ನಿರಂತರ ಕಿರುಕುಳ ಆರಂಭವಾಗಿತ್ತು ಎಂದು ಹೇಳಲಾಗಿದೆ. ಈ ಕಿರುಕುಳದಿಂದಾಗಿ ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ವಿಷಯಗಳಿಗೂ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ, ಕಳೆದ ರಾತ್ರಿ ಅನಿತಾ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇದು ಆತ್ಮಹತ್ಯೆಯಲ್ಲ, ತನ್ನ ಮಗಳನ್ನು ಕೊಂದು ನೇಣು ಹಾಕಲಾಗಿದೆ ಎಂದು ಅನಿತಾಳ ಪೋಷಕರು ಆರೋಪಿಸಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಘಟನೆಗೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.