ದಕ್ಷಿಣ ಕನ್ನಡ: ಸುರತ್ಕಲ್‌ನಲ್ಲಿ 29.6 ಸೆಂ.ಮೀ ಮಳೆ; ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ
ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಹಾನಿಯಾಗಿದ್ದು, ಆರ್ಯ ಸಮಾಜ ರಸ್ತೆಯಲ್ಲಿ ಮನೆಯೊಂದರ ಕಾಂಪೌಂಡ್ ಕುಸಿದು ಮನೆ ಅಪಾಯದಲ್ಲಿದೆ.;
ಬೆಳಗಾವಿಯಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಅದರಲ್ಲೂ ಮಂಗಳೂರು ತಾಲ್ಲೂಕಿನ ಸುರತ್ಕಲ್‌ನಲ್ಲಿ ದಾಖಲೆಯ 29.6 ಸೆಂ.ಮೀ ಮಳೆ ಪ್ರಮಾಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಗುರುವಾರ (ಜುಲೈ 17) ಎಲ್ಲ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ಬುಧವಾರ ರಾತ್ರಿಯಿಂದಲೇ ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಕಡೆಗಳಲ್ಲಿ 15 ಸೆಂ.ಮೀ.ಗೂ ಅಧಿಕ ಮಳೆ ದಾಖಲಾಗಿದೆ. ಉಡುಪಿ ಜಿಲ್ಲೆಯ ಕಾಪು ತೆಂಕದಲ್ಲಿ 27.7 ಸೆಂ.ಮೀ, ಹೆಜಮಾಡಿಯಲ್ಲಿ 27.1 ಸೆಂ.ಮೀ, ಮಂಗಳೂರಿನ ಬಾಳದಲ್ಲಿ 26.7 ಸೆಂ.ಮೀ, ಉಳ್ಳಾಲದಲ್ಲಿ 26 ಸೆಂ.ಮೀ, ಕೋಟೆಕಾರ್‌ನಲ್ಲಿ 21.1 ಸೆಂ.ಮೀ, ಕಿನ್ಯದಲ್ಲಿ 20.8 ಸೆಂ.ಮೀ, ಮತ್ತು ಎಕ್ಕಾರುವಿನಲ್ಲಿ 20.6 ಸೆಂ.ಮೀ ಮಳೆ ಬಿದ್ದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು 38 ಸ್ಥಳಗಳಲ್ಲಿ 15 ಸೆಂ.ಮೀ.ಗಿಂತ ಹೆಚ್ಚು ಮಳೆ ದಾಖಲಾಗಿದೆ.
ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಹಾನಿಯಾಗಿದ್ದು, ಆರ್ಯ ಸಮಾಜ ರಸ್ತೆಯಲ್ಲಿ ಮನೆಯೊಂದರ ಕಾಂಪೌಂಡ್ ಕುಸಿದು ಮನೆ ಅಪಾಯದಲ್ಲಿದೆ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರು ಬುಧವಾರ ರಾತ್ರಿ ಬಿಜೈ ಬಟ್ಟಗುಡ್ಡ, ಮಾಲೆಮಾರ್, ಕಾವೂರು ಉಲ್ಲಾಸ ನಗರ, ಆರ್ಯ ಸಮಾಜ ರಸ್ತೆ, ಕೊಟ್ಟಾರಚೌಕಿ ಸೇರಿದಂತೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುರುವಾರ ಬೆಳಿಗ್ಗೆ ಮಳೆಯ ತೀವ್ರತೆ ಕೊಂಚ ಕಡಿಮೆಯಾಗಿದ್ದರೂ, ದಟ್ಟವಾದ ಮೋಡ ಕವಿದ ವಾತಾವರಣ ಮುಂದುವರಿದಿದೆ.