Covid Scam | ಕೋವಿಡ್‌ ಮಧ್ಯಂತರ ತನಿಖಾ ವರದಿ; ಬೆಂಗಳೂರಿನ ಯಾವ ಮಾಜಿ ಸಚಿವರ ಕೊರಳಿಗೆ ಕುಣಿಕೆ?

ಬಿಬಿಎಂಪಿ ವ್ಯಾಪ್ತಿಯ ಹಗರಣಗಳಿಗೆ ಸಂಬಂಧಪಟ್ಟ ವಿವರಗಳು ಪ್ರತ್ಯೇಕ ಸಂಪುಟಗಳಲ್ಲಿವೆ. ಉಳಿದ ಮೂರು ಸಂಪುಟಗಳು ಬೆಂಗಳೂರು ನಗರ ಜಿಲ್ಲೆ, ಗ್ರಾಮಾಂತರ ಜಿಲ್ಲೆ ಮತ್ತು ಗದಗ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿದೆ.;

Update: 2025-04-05 14:56 GMT

ಕೋವಿಡ್ ಸಂದರ್ಭದ ಹಗರಣಗಳ ತನಿಖೆಗೆ ನೇಮಿಸಿದ್ದ ತನಿಖಾ ಆಯೋಗದ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೇಲ್ ಡಿ. ಕುನ್ಹಾ ಅವರು ಶನಿವಾರ ಎರಡನೇ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ 7,000 ಕೋಟಿ ರೂ.ಗೂ ಹೆಚ್ಚಿನ ಅಕ್ರಮಗಳ ತನಿಖೆ ನಡೆಸಿದ್ದ ಕುನ್ಹಾ ಆಯೋಗವು 2024ಸೆ. 1 ರಂದು ಮಧ್ಯಂತರ ವರದಿ ನೀಡಿತ್ತು. ಅದರ ಮುಂದುವರಿದ ಭಾಗವಾಗಿ ಎರಡನೇ ಮಧ್ಯಂತರ ವರದಿ ಸಲ್ಲಿಸಿದೆ. 

ಎರಡನೇ ಮಧ್ಯಂತರ ವರದಿಯು 1808 ಪುಟಗಳನ್ನು ಹೊಂದಿದ್ದು, ಒಟ್ಟು ಏಳು ಸಂಪುಟಗಳ ವರದಿ ಇದಾಗಿದೆ. ಇದರಲ್ಲಿ ನಾಲ್ಕು ಸಂಪುಟಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದ ಹಗರಣ ಮತ್ತು ಅವ್ಯವಹಾರಗಳಿಗೆ ಸಂಬಂಧಿಸಿದ್ದಾಗಿವೆ.

ಬಿಬಿಎಂಪಿಯ ಬೊಮ್ಮನಹಳ್ಳಿ ವಲಯ, ದಕ್ಷಿಣ ವಲಯ, ಪಶ್ಚಿಮ ವಲಯ, ಯಲಹಂಕ ವಲಯಗಳ ಹಗರಣಗಳಿಗೆ ಸಂಬಂಧಪಟ್ಟ ವಿವರಗಳು ಪ್ರತ್ಯೇಕ ಪ್ರತ್ಯೇಕ ಸಂಪುಟಗಳಲ್ಲಿವೆ. ಉಳಿದ ಮೂರು ಸಂಪುಟಗಳು ಬೆಂಗಳೂರು ನಗರ ಜಿಲ್ಲೆ, ಗ್ರಾಮಾಂತರ ಜಿಲ್ಲೆ ಮತ್ತು ಗದಗ ಹಾಗೂ ಕೊಪ್ಪಳ ಜಿಲ್ಲೆಗಳ ಹಗರಣಗಳದ್ದಾಗಿವೆ.

ಕೋವಿಡ್‌ ಅವಧಿಯ ಅಕ್ರಮಗಳ ಕುರಿತು ಕಳೆದ ವರ್ಷ ಸಲ್ಲಿಸಿದ್ದ ಮಧ್ಯಂತರ ವರದಿಯಲ್ಲಿ ಹಲವು ಬಿಜೆಪಿ ನಾಯಕರು ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಕೋವಿಡ್‌ ಉಪಕರಣಗಳಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರ ಪಾವತಿ, ಅಹರ್ವಲ್ಲದ ಪ್ರಯೋಗಾಲಯಗಳಿಗೆ ಕೋವಿಡ್‌ ಪರೀಕ್ಷೆ ನೀಡಿದ್ದಲ್ಲದೇ ಕೋಟ್ಯಂತರ ರೂ. ಹಣ ವರ್ಗಾವಣೆ ಆಗಿದ್ದ ಬಗ್ಗೆ ಉಲ್ಲೇಖವಾಗಿತ್ತು.  

ಕೋವಿಡ್‌ ಅವಧಿಯಲ್ಲಿ ನಡೆದ ಅವ್ಯವಹಾರಗಳ ಕುರಿತು ತನಿಖೆ ನಡೆಸಿ, ವರದಿ ಸಲ್ಲಿಸಲು ಕಾಂಗ್ರೆಸ್ ನೇತೃತ್ವದ ಸರ್ಕಾರ 2023 ಆಗಸ್ಟ್‌ ತಿಂಗಳಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕುನ್ನಾ ನೇತೃತ್ವದಲ್ಲಿ ಆಯೋಗ ರಚಿಸಿತ್ತು. 

ಮಧ್ಯಂತರ ವರದಿ ಪರಿಶೀಲನೆಗೆ ಸರ್ಕಾರ ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಿತ್ತು. ಉಪ ಸಮಿತಿಯು ವರದಿ ಆಧಾರದ ಮೇಲೆ ಕೋವಿಡ್ ಹಗರಣದ ತನಿಖೆ ನಡೆಸಲು ಸಿಐಡಿ ರಚಿಸಿತ್ತು.  

Tags:    

Similar News