ಸರ್ಕಾರಿ ನೌಕರರ ಸಂಘದ ಚುನಾವಣೆ | ಎರಡನೇ ಅವಧಿಗೆ ಅಧ್ಯಕ್ಷರಾಗಿ ಸಿ.ಎಸ್‌. ಷಡಾಕ್ಷರಿ ಆಯ್ಕೆ

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ 64 ಮತಗಳಿಂದ ಜಯಗಳಿಸಿ, ಮತ್ತೆ ನೂತನ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದಿದ್ದಾರೆ.

Update: 2024-12-27 12:57 GMT
ಸಿ.ಎಸ್‌.ಷಡಾಕ್ಷರಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಅವರು 64 ಮತಗಳ ಅಂತರದಿಂದ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.

ನಗರದ ಕಬ್ಬನ್‌ ಉದ್ಯಾನದಲ್ಲಿರುವ ಸರ್ಕಾರಿ ನೌಕರರ ಸಂಘದ ಕಚೇರಿ ಆವರಣದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಅಧ್ಯಕ್ಷ ಹಾಗೂ ಖಜಾಂಚಿ ಹುದ್ದೆಗೆ ಮತದಾನ ನಡೆಯಿತು. ಚುನಾವಣೆ ಪ್ರಕ್ರಿಯೆಯಲ್ಲಿ ಸಂಘದ 971 ಪ್ರತಿನಿಧಿಗಳ ಪೈಕಿ 960ಮಂದಿ ಮತ ಚಲಾಯಿಸಿದರು. ಸಿ.ಎಸ್‌.ಷಡಾಕ್ಷರಿ ಪರ 507 ಮತಗಳು ಚಲಾವಣೆಯಾದವು. ಪ್ರತಿಸ್ಪರ್ಧಿ ಅಭ್ಯರ್ಥಿ ಬಿ.ಪಿ. ಕೃಷ್ಣೇಗೌಡ 442 ಮತಗಳನ್ನು ಪಡೆದು ಪರಾಜಿತರಾದರು.

2024–2029ನೇ ಅವಧಿಯ ಸಂಘದ ವಿವಿಧ ಪದಾಧಿಕಾರಿ ಸ್ಥಾನಗಳಿಗೆ ಸೆ.17 ರಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಿತ್ತು. ಮೊದಲ ಹಂತದಲ್ಲಿ ಮೂರು ಶೈಕ್ಷಣಿಕ ಜಿಲ್ಲೆ ಒಳಗೊಂಡಂತೆ 33 ಜಿಲ್ಲೆಗಳು ಹಾಗೂ 191 ತಾಲ್ಲೂಕುಗಳ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದು, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿತ್ತು. ರಾಜ್ಯ ಪರಿಷತ್‌ನ 102 ಸ್ಥಾನಗಳಿಗೂ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿತ್ತು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಖಜಾಂಚಿ ಹುದ್ದೆಗೆ ಹಾಲಿ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಹಾಗೂ ಸಂಘದ ಮಾಜಿ ಅಧ್ಯಕ್ಷ ಬಿ ಪಿ ಮಂಜೇಗೌಡ ಅವರ ಸೋದರ ಬಿ ಪಿ ಕೃಷ್ಣೆಗೌಡ ಬಣಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಷಡಾಕ್ಷರಿ ಬಣದಿಂದ ಅಧ್ಯಕ್ಷ ಹುದ್ದೆಗೆ ಸಿ.ಎಸ್. ಷಡಾಕ್ಷರಿ ಮತ್ತು ರಾಜ್ಯ ಖಜಾಂಚಿ ಸ್ಥಾನಕ್ಕೆ ಕೊಪ್ಪಳ ಜಿಲ್ಲಾಧ್ಯಕ್ಷ ನಾಗರಾಜ್ ಜುಮ್ಮಣ್ಣನವರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ, ಮಂಜೇಗೌಡ ಬಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ.ಪಿ.ಕೃಷ್ಣೇಗೌಡ, ಖಜಾಂಚಿ ಸ್ಥಾನಕ್ಕೆ ಶಿವರುದ್ರಯ್ಯ.ವಿ.ವಿ ಸ್ಪರ್ಧಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘ ಒಟ್ಟು 5.25 ಲಕ್ಷ ಸದಸ್ಯರನ್ನು ಹೊಂದಿದೆ.

Tags:    

Similar News