Cabinet Decision | ಕೋವಿಡ್ ಅವ್ಯವಹಾರ ತನಿಖೆಗೆ ಡಿಕೆಶಿ ನೇತೃತ್ವದ ಸಂಪುಟ ಉಪ ಸಮಿತಿ
ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ. ಕುನ್ಹಾ ನೇತೃತ್ವದ ಆಯೋಗ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಪರಿಶೀಲಿಸಿ, ತಪ್ಪಿತಸ್ಥರ ಮೇಲೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರಂತರವಾಗಿ ಮೇಲ್ವಿಚಾರಣೆ ನಡೆಸಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ.;
ಬಿಜೆಪಿ ಅಧಿಕಾರವಧಿಯಲ್ಲಿ ನಡೆದ ಕೋವಿಡ್-19 ಅವ್ಯವಹಾರಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ ಬೆನ್ನಲ್ಲೇ, ತನಿಖೆಯ ಮೇಲ್ವಿಚಾರಣೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಕೋವಿಡ್ ನಿರ್ವಹಣೆ ಹೆಸರಿನಲ್ಲಿ ನಡೆದ ಅವ್ಯವಹಾರಗಳ ಕುರಿತು ವಿಚಾರಣೆ ನಡೆಸಿ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ. ಕುನ್ಹಾ ನೇತೃತ್ವದ ಆಯೋಗ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಪರಿಶೀಲಿಸಿ, ತಪ್ಪಿತಸ್ಥರ ಮೇಲೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರಂತರವಾಗಿ ಮೇಲ್ವಿಚಾರಣೆ ನಡೆಸಲು ಈ ಸಮಿತಿ ರಚಿಸಲಾಗಿದ್ದು, ಸಚಿವರಾದ ಡಾ. ಜಿ. ಪರಮೇಶ್ವರ, ಎಚ್.ಕೆ. ಪಾಟೀಲ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಸಂತೋಷ್ ಎಸ್. ಲಾಡ್, ಶರಣ ಪ್ರಕಾಶ್ ಪಾಟೀಲ ಸಮಿತಿಯ ಸದಸ್ಯರಾಗಿದ್ದಾರೆ.
500 ಕೋಟಿ ರೂ ವಸೂಲಿಗೆ ಶಿಫಾರಸು
ತನಿಖೆಯ ಮೇಲ್ವಿಚಾರಣೆಗೆ ಸಚಿವ ಸಂಪುಟ ಉಪಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಎಚ್‌ಕೆ ಪಾಟೀಲ್ ಸುದ್ದಿಗಾರರಿಗೆ ಗುರುವಾರ ಸಂಜೆ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದ್ದರು.
ಹಿಂದಿನ ಬಿಜೆಪಿ ಆಡಳಿತದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ. ಕುನ್ಹಾ ನೇತೃತ್ವದ ಆಯೋಗ 55,000 ಕಡತಗಳನ್ನು ಪರಿಶೀಲಿಸಿ ಅಕ್ರಮದ ವಿವರಗಳನ್ನು ಒಳಗೊಂಡ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ಅಲ್ಲದೆ, 500 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲು ಶಿಫಾರಸು ಮಾಡಿದೆ. ಆಯೋಗವು ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿದ್ದರೂ, ಅದು ಯಾರ ಹೆಸರನ್ನು ಕೂಡ ನಮೂದಿಸಿಲ್ಲ. ಈ ವರದಿಯು ಕ್ರಿಮಿನಲ್ ಉದ್ದೇಶ ಮತ್ತು ಇಂತಹ ದೊಡ್ಡ ಪ್ರಮಾಣದ ದುರ್ಬಳಕೆಯಲ್ಲಿ ಅನೇಕ ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತದೆ. ಅಪರಾಧ ಅಂಶಗಳ ತನಿಖೆಯ ಜವಾಬ್ದಾರಿಯನ್ನು ಎಸ್‌ಐಟಿ ವಹಿಸುತ್ತದೆ. ನ್ಯಾಯಮೂರ್ತಿ ಕುನ್ಹಾ ಅವರು ತಮ್ಮ ಸಂಪೂರ್ಣ ವರದಿಯನ್ನು ಸಲ್ಲಿಸಿದ ನಂತರ, ಹಗರಣದ ನಿಖರ ಸ್ವರೂಪ ಮತ್ತು ಈ ಅಪರಾಧದ ಪಾಲುದಾರರು ಯಾರು ಎಂದು ಗೊತ್ತಾಗುತ್ತದೆ ಎಂದು ಅವರು ಹೇಳಿದ್ದರು.
ಕೋವಿಡ್-19 ಉಪಕರಣಗಳ ಪೂರೈಕೆಯಲ್ಲಿ ತೊಡಗಿರುವ ಕಂಪನಿಗಳು ಅಥವಾ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಸಂಪುಟ ನಿರ್ಧರಿಸಿದೆ. ಎಸ್‌ಐಟಿಯ ತನಿಖೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಮತ್ತು ತ್ವರಿತಗೊಳಿಸಲು ಸಕಾಲದಲ್ಲಿ ದಾಖಲೆಗಳನ್ನು ಪಡೆಯಲು ಆಯೋಗಕ್ಕೆ ಸಹಾಯ ಮಾಡಲು ಉಪ ಸಮಿತಿಯನ್ನು ರಚಿಸಲು ಸಚಿವ ಸಂಪುಟವು ನಿರ್ಧರಿಸಿದೆ. ಇತರ ಅವ್ಯವಹಾರಗಳ ವಿವರಗಳನ್ನು ಪರಿಶೀಲಿಸಲು ಸಚಿವ ಸಂಪುಟ ಉಪಸಮಿತಿಗೆ ಸಂಬಂಧಪಟ್ಟ ಅಧಿಕಾರಿಗಳು ನೆರವು ನೀಡಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದರು.
ಕೋವಿಡ್ -19 ಔಷಧಗಳು, ಉಪಕರಣಗಳು ಮತ್ತು ಇತರ ಖರೀದಿಯಲ್ಲಿನ ಅಕ್ರಮಗಳ ಆರೋಪಗಳನ್ನು ಪರಿಶೀಲಿಸಲು ನ್ಯಾಯಮೂರ್ತಿ ಕುನ್ಹಾ ಆಯೋಗವನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ರಚಿಸಲಾಗಿತ್ತು. ಮೊದಲ ಲಾಕ್‌ಡೌನ್‌ನಿಂದ (ಮಾರ್ಚ್ 2020) ಡಿಸೆಂಬರ್ 31, 2022 ರವರೆಗೆ ಕೋವಿಡ್ ಅವ್ಯಹಾರಗಳ ಕುರಿತು ತನಿಖೆ ಮಾಡಲು ಕಾಂಗ್ರೆಸ್ ಸರ್ಕಾರ ಆಯೋಗವನ್ನು ಕೇಳಿತ್ತು. ಆಗಸ್ಟ್ 30 ರಂದು ನ್ಯಾಯಮೂರ್ತಿ ಕುನ್ಹಾ ಅವರು 11 ಪುಟಗಳ ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದರು.
ಇದೀಗ ಎಸ್‌ಐಟಿ ರಚನೆ ಮತ್ತು ಎಸ್‌ಐಟಿ ತನಿಖೆಯ ಮೇಲ್ವಿಚಾರಣೆಗೆ ಸಂಪುಟ ಉಪ ಸಮಿತಿ ರಚನೆಯ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಸರ್ಕಾರ ಬಿಜೆಪಿ ಅವಧಿಯ ಈ ಬೃಹತ್ ಹಗರಣದ ವಿಷಯದಲ್ಲಿ ಬಿಗಿ ನಿಲುವು ತಳೆದಿರುವುದು ಸ್ಟಷ್ಟವಾಗಿದ್ದು, ಆ ಅವಧಿಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಚಿಕ್ಕಬಳ್ಳಾಪುರ ಸಂಸದ ಡಾ ಕೆ ಸುಧಾಕರ್ ಮತ್ತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪಾಲಿಗೆ ಸಂಕಷ್ಟದ ದಿನಗಳು ಕಾದಿವೆ ಎನ್ನಲಾಗುತ್ತಿದೆ. ಈ ಮೊದಲು, ಸುಧಾಕರ್ ಅವರನ್ನು ಜೈಲಿಗೆ ಹಾಕಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಲೋಕಸಭೆ ಚುನಾವಣೆ ವೇಳೆ ಸಿದ್ದರಾಮಯ್ಯ ಹೇಳಿದ್ದರು. ತನಿಖೆಯ ಬಳಿಕ ಅವರು ತಪ್ಪಿತಸ್ಥರೆಂದು ಸಾಬೀತಾಗುತ್ತದೆ ಎಂದೂ ಆಗ ಅವರು ಹೇಳಿದ್ದರು. ಇದೀಗ ಆ ಮಾತುಗಳು ನಿಜವಾಗುವ ದಿಕ್ಕಿನಲ್ಲಿ ಬೆಳವಣಿಗೆಗಳು ಸಾಗುತ್ತಿರುವಂತಿವೆ.
ಇದುವರೆಗಿನ ತನಿಖೆಯ ಮುಖ್ಯಾಂಶಗಳು
- ವೈದ್ಯಕೀಯ ಉಪಕರಣಗಳ ಖರೀದಿ ಮತ್ತು ವಿವಿಧ ಶುಲ್ಕ ಪಾವತಿ ಸಂದರ್ಭದಲ್ಲಿ 481.2 ಕೋಟಿ ರೂ ಅವ್ಯವಹಾರ
- 187.91 ಕೋಟಿ ರೂ. ಅವಧಿ ಮೀರಿದ ಔಷಧಗಳು, ಗುಣಮಟ್ಟವಿಲ್ಲದ ಕಿಟ್‌ಗಳನ್ನು ಖರೀದಿಸುವುದು, ಸರಬರಾಜು ವಿಳಂಬಕ್ಕೆ ದಂಡ ವಿಧಿಸುವಲ್ಲಿ ವಿಳಂಬ ಮತ್ತು ದುಬಾರಿ ವೆಚ್ಚದಲ್ಲಿ ವಸ್ತುಗಳನ್ನು ಖರೀದಿಸುವಲ್ಲಿ ನಷ್ಟವಾಗಿದೆ.
- 100.53 ಕೋಟಿ ವೆಚ್ಚಕ್ಕೆ ಯಾವುದೇ ದಾಖಲೆಗಳು ಅಥವಾ ಖಾತೆಗಳು ಕಂಡುಬಂದಿಲ್ಲ.
- 160.25 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳು/ಪರೀಕ್ಷಾ ಕಿಟ್‌ಗಳನ್ನು ಅಗತ್ಯ ಅನುಮತಿಗಳಿಲ್ಲದೆ ಖರೀದಿಸಲಾಗಿದೆ.
- ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕ ನಿರ್ಮಾಣಕ್ಕೆ 84.71 ಕೋಟಿ ರೂಪಾಯಿ ಅನಗತ್ಯ ವೆಚ್ಚ.