ʼಮುಡಾʼ ಅಸ್ತ್ರಕ್ಕೆ ʼಕೋವಿಡ್ʼ ಪ್ರತ್ಯಸ್ತ್ರ? ಬಿಜೆಪಿ ಕಾಲದ ಹಗರಣದ ತನಿಖಾ ವರದಿ ಸ್ವೀಕರಿಸಿದ ಸಿದ್ದರಾಮಯ್ಯ
ಕೋವಿಡ್ ಹಗರಣದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಪ್ರಮುಖರು ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ ಎನ್ನಲಾಗಿದ್ದು, ಕಾಂಗ್ರೆಸ್ ಸರ್ಕಾರ ಈ ವರದಿಯನ್ನು ಬಿಜೆಪಿ ವಿರುದ್ಧ ಹೊಸ ಅಸ್ತ್ರವಾಗಿ ಬಳಸುವ ಸಾಧ್ಯತೆ ಇದೆ.;
ಮುಡಾ ಹಗರಣದ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನುಹತ್ತಿರುವ ಬಿಜೆಪಿಗೆ ಈಗ "ಕೋವಿಡ್ ಆತಂಕ" ಆರಂಭವಾಗಿದೆ. ಕೋವಿಡ್ ಹಗರಣದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಪ್ರಮುಖರು ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ ಎನ್ನಲಾಗಿದ್ದು, ಕಾಂಗ್ರೆಸ್ ಸರ್ಕಾರ ಈ ವರದಿಯನ್ನು ಬಿಜೆಪಿ ವಿರುದ್ಧ ಹೊಸ ಅಸ್ತ್ರವಾಗಿ ಬಳಸುವ ಸಾಧ್ಯತೆ ಇದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕೋವಿಡ್ ಹಗರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಸ್ಟಿನ್ ಜಾನ್ ಮೈಕಲ್ ಡಿ. ಕುನ್ಹಾ ನೇತೃತ್ವದ ಆಯೋಗ ಶನಿವಾರ ತನ್ನ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಕೋಟ್ಯಂತರ ಕೋವಿಡ್ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯೋಗ ರಚಿಸಿ ತನಿಖೆಗೆ 2023 ಆಗಸ್ಟ್‌ನಲ್ಲಿ ಆದೇಶಿಸಿದ್ದರು. ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು 2024ರ ಮೇ 25ರ ಗಡುವು ನೀಡಲಾಗಿತ್ತು. ಆ ಬಳಿಕ ತನಿಖೆಯ ಅವಧಿಯನ್ನು ಆಯೋಗವು ವಿಸ್ತರಣೆ ಕೋರಿದ್ದರಿಂದ ಆಗಸ್ಟ್ 31ಕ್ಕೆ ಸರ್ಕಾರವು ವಿಸ್ತರಿಸಿತ್ತು.
ಬಿಜೆಪಿ ಕಾಲದ ಮುಖ್ಯಮಂತ್ರಿಗಳು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ "ಹಗರಣದಲ್ಲಿ ಭಾಗಿಯಾಗಿದ್ದಾರೆʼ ಎನ್ನಲಾದ ಅಧಕಾರಿಗಳಿಗೆ ಇದರಿಂದ ಆತಂಕ ಎದುರಾಗಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ನಿಭಾಯಿಸುವ ಸಂದರಭದಲ್ಲಿ ವೈದ್ಯಕೀಯ ಪರಿಕರಗಳ (ಪಿಪಿ ಕಿಟ್, ಆಕ್ಸಿಜನ್ ಸರಬರಾಜು ಇತ್ಯಾದಿ) ಖರೀದಿ ಮತ್ತು ವಿತರಣೆ ಸಂದರ್ಭದಲ್ಲಿ ಸುಮಾರು 7,000 ಕೋಟಿ ರೂ. ಹಗರಣವಾಗಿತ್ತು ಎಂದು ಈ ಹಿಂದೆ ಆರೋಪಿಸಲಾಗಿತ್ತು. ಈ ಸಂಬಂಧ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ಆಯೋಗವು ತನ್ನ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಮುಖವಾಗಿ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ (ಪ್ರಸ್ತುತ ಚಿಕ್ಕಬಳ್ಳಾಪುರದ ಸಂಸದ) ಡಾ. ಕೆ. ಸುಧಾಕರ್ ಅವರ ಮೇಲೆ ಅಕ್ರಮ ಆರೋಪ ಕೇಳಿಬಂದಿತ್ತು. ವೆಂಟಿಲೇಟರ್, ಆಕ್ಸಿಜನ್ ಉಪಕರಣಗಳ ಖರೀದಿ, ನಿರ್ವಹಣೆ ಲೋಪ, ಕೋವಿಡ್-19 ನಿರ್ವಹಣಾ ಉಪಕರಣಗಳು, ರಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್‌ಗಳ ಖದೀದಿ ಮತ್ತು ಸಂಗ್ರಹಣೆಯಲ್ಲಿ ಅಕ್ರಮ ನಡೆದ ಆರೋಪಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲಾಗಿದೆ.
ಆರೋಪವೇನು?
ಕೋವಿಡ್ -19 ಲಾಕ್‌ಡೌನ್ ಆರಂಭವಾದ ದಿನದಿಂದ 2022ರ ಡಿಸೆಂಬರ್ 31ರವರೆಗಿನ ಅವಧಿಯಲ್ಲಿ ಭಾರೀ ಅಕ್ರಮದ ಅರೋಪ ಕೇಳಿಬಂದಿತ್ತು. ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (2020–21) ಸಲ್ಲಿಸಿದ್ದ ವರದಿಯಲ್ಲಿ ಪ್ರಸ್ತಾಪಿಸಿದ ವಿಷಯಗಳು, ಆರೋಗ್ಯ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಕೆಟಿಪಿಪಿ (ಪಾರದರ್ಶಕ) ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿ ಟೆಂಡರ್ ಪಕ್ರಿಯೆ ನಡೆಸದೆ ಅನುಮೋದನೆ ನೀಡಿರುವುದು, ಔಷಧ, ಆಮ್ಲಜನಕ ಉಪಕರಣಗಳು, ಸಾಮಗ್ರಿಗಳ ಖರೀದಿ, ವಿತರಣೆಯ ನಿರ್ವಹಣೆಯಲ್ಲಿ ನಡೆದಿರುವ ಅವ್ಯವಹಾರ, ಲೋಪದೋಷಗಳ ಕುರಿತು ಆಯೋಗವು ತನಿಖೆ ನಡೆಸಿದೆ..
ಕಿದ್ವಾಯಿ ಸಂಸ್ಥೆಗೆ ಸಂಬಂಧಿಸಿ ಟೆಂಡರ್‌ಗಳು, ನೇಮಕಾತಿಗಳು, ಔಷಧ, ಉಪಕರಣಗಳು, ವೆಂಟಿಲೇಟರುಗಳು, ಆಕ್ಸಿಜನ್ ಘಟಕದ ನಿರ್ವಹಣೆ ಇವುಗಳ ಅವ್ಯವಹಾರಗಳ ತನಿಖೆ, ಮಹಾಲೇಖಪಾಲರು ತಮ್ಮ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ವಿಷಯಗಳು, ಕೋವಿಡ್ ರೋಗಿಗಳಿಗೆ ಹಾಸಿಗೆ ಹಂಚಿಕೆಯಲ್ಲಿ ಮಾನದಂಡಗಳ ಉಲ್ಲಂಘನೆ, ಆಮ್ಲಜನಕ ಕೊರತೆ ಮತ್ತು ನಿರ್ವಹಣೆಯಲ್ಲಿ ನಿಯಮ ಪಾಲನೆ, ಕೋವಿಡ್ ನಿರ್ವಹಣೆಗೆ ಸಲ್ಲಿಕೆಯಾದ ಪ್ರಸ್ತಾವನೆಗಳಿಗೆ ಅನುಮೋದನೆ ವಿಳಂಬ ಮುಂತಾದ ವಿಷಯಗಳ ಕುರಿತೂ ಆಯೋಗ ಗಮನಹರಿಸಿದೆ.