ಕೋವಿಡ್‌ ಹಗರಣ| ವರದಿ ಅಧ್ಯಯನಕ್ಕೆ ಮುಖ್ಯ ಕಾರ್ಯದರ್ಶಿ ನೇತೃತ್ವದ ಮಿತಿ ರಚನೆ, ಸರ್ಕಾರದ ಕ್ರಮ ಸ್ವಾಗತಿಸಿದ ಸುಧಾಕರ್

ನ್ಯಾ. ಕುನ್ಹಾ ನೇತೃತ್ವದ ತನಿಖಾ ಆಯೋಗದ ವರದಿಯನ್ನು ಅಧ್ಯಯನ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ಧರಿಸಲು ಅಧಿಕಾರಿಗಳ ಸಮಿತಿ ರಚನೆಗೆ ಸರ್ಕಾರ ಮುಂದಾಗಿದ್ದು, ಸರ್ಕಾರದ ಈ ಕ್ರಮವನ್ನು ಬಿಜೆಪಿ ಸ್ವಾಗತಿಸಿದೆ.;

Update: 2024-09-07 13:29 GMT
ಮಾಜಿ ಆರೋಗ್ಯ ಸಚಿವ ಹಾಗೂ ಸಂಸದ ಡಾ.ಕೆ.ಸುಧಾಕರ್
Click the Play button to listen to article

ಕೋವಿಡ್‌-19 ಸಂದರ್ಭದಲ್ಲಿ ಔಷಧ, ವೈದ್ಯಕೀಯ ಸಾಮಗ್ರಿ ಖರೀದಿ ಸೇರಿ ಸಾಂಕ್ರಾಮಿಕ ಋೋಗದ ನಿರ್ವಹಣೆಯಲ್ಲಿ ನಡೆದಿರುವ ಸಾವಿರಾರು ಕೋಟಿ ರೂ. ಅಕ್ರಮ ಆರೋಪ ಕುರಿತಂತೆ ನ್ಯಾ. ಕುನ್ಹಾ ನೇತೃತ್ವದ ತನಿಖಾ ಆಯೋಗದ ಮಧ್ಯಂತರ ವರದಿಯನ್ನು ಅಧ್ಯಯನ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ಧರಿಸಲು ಅಧಿಕಾರಿಗಳ ಸಮಿತಿ ರಚನೆಗೆ ಸರ್ಕಾರ ಮುಂದಾಗಿದೆ..

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಕೋವಿಡ್ ಹಗರಣದ ಕುರಿತು ವಿಚಾರಣೆಗಾಗಿ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ ನೇಮಕ ಮಾಡಿದ್ದ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ನೇತೃತ್ವದ ಆಯೋಗ, ಕಳೆದ ವಾರ ತನ್ನ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ ಹಿನ್ನೆಲೆಯಲ್ಲಿ ಮಧ್ಯಂತರ ವರದಿಯ ಅಧ್ಯಯನಕ್ಕೆ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸಲಾಗಿದೆ.

ಸಮಿತಿ ಒಂದು ತಿಂಗಳ ಒಳಗೆ ಮುಖ್ಯಮಂತ್ರಿಗೆ ವರದಿ ಸಲ್ಲಿಸಲಿದೆ. ಈ ನಡುವೆ ವಿಚಾರಣಾ ಆಯೋಗದ ಅವಧಿಯನ್ನು ಇನ್ನೂ ಆರು ತಿಂಗಳು ಮುಂದುವರಿಸಲು ಕೂಡ ಸಚಿವ ಸಂಪುಟ ಸಭೆ ಅನುಮೋದಿಸಿತು ಎಂದು ಸಂಪುಟ ತೀರ್ಮಾನಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾನೂನು ಸಚಿವ ಎಚ್ ಕೆ ಪಾಟೀಲ ತಿಳಿಸಿದರು. ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ಅಕ್ರಮದ ವಿಷಯವನ್ನು ಹೆಚ್ಚುವರಿ ವಿಷಯವಾಗಿ ಸೇರಿಸಿ ಚರ್ಚಿಸಲಾಗಿದೆ ಎಂದೂ ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದ್ದರು

ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಸಮಿತಿ ವರದಿಯಲ್ಲಿ ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 'ಕೋಟಿ ರೂಪಾಯಿಗಳ' ಅಕ್ರಮಗಳನ್ನು ಉಲ್ಲೇಖಿಸಿದೆ . ಐದರಿಂದ ಆರು ಸಂಪುಟಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಲಾಗಿದೆ. ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ನ್ಯಾಯಮೂರ್ತಿ ಡಿ’ಕುನ್ಹಾ ಪ್ರಸ್ತಾಪಿಸಿದ್ದಾರೆ. ಕಾಣೆಯಾದ ಫೈಲ್‌ಗಳ ಉಲ್ಲೇಖವೂ ಇದೆ. ವರದಿಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿ ಮತ್ತು ಹಲವು ವಿವರಗಳನ್ನು ಗಣನೆಗೆ ತೆಗೆದುಕೊಂಡಿದೆ. ವಿವರಗಳನ್ನು ವಿಶ್ಲೇಷಿಸಿದ ನಂತರ, ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಇತರ ಮಾಹಿತಿಯನ್ನು ಬಹಿರಂಗಪಡಿಸಲಾಗುತ್ತದೆ. ಮುಖ್ಯ ಕಾರ್ಯದರ್ಶಿ ಮತ್ತು ಸಿಎಂ ಪ್ರಧಾನ ಕಾರ್ಯದರ್ಶಿ ಮತ್ತು ಇತರ ಕೆಲವು ಅಧಿಕಾರಿಗಳಿಗೆ ಇದನ್ನು ವಹಿಸಲಾಗಿದೆ. ಒಂದು ತಿಂಗಳೊಳಗೆ ಅವರು ವರದಿ ಸಲ್ಲಿಸುತ್ತಾರೆ ಎಂದು ಅವರು ತಿಳಿಸಿದರು.ಪ್ರಾಥಮಿಕ ತನಿಖಾ ವರದಿಯನ್ನು ವಿಶ್ಲೇಷಿಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯ ಕಾರ್ಯದರ್ಶಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಇತರ ಕೆಲವು ಅಧಿಕಾರಿಗಳನ್ನೊಳಗೊಂಡ ಅಧಿಕಾರಿಗಳ ತಂಡ ನಿಯೋಜಿಸಲಾಗಿದೆ. ಬಿಜೆಪಿ  ಆಡಳಿತದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ. ಕೆ. ಸುಧಾಕರ್‌ ವಿರುದ್ಧ ಕೋವಿಡ್‌ ಹಗರಣದ ಆರೋಪಗಳು ಕೇಳಿಬಂದಿದ್ದವು.

ಸುಧಾಕರ್‌ ಪ್ರತಿಕ್ರಿಯೆ

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಆರೋಗ್ಯ ಸಚಿವ ಹಾಗೂ ಸಂಸದ ಡಾ.ಕೆ.ಸುಧಾಕರ್ ಅವರು, ಕೋವಿಡ್‌ನ ದೊಡ್ಡ ಆಪತ್ಕಾಲದಲ್ಲಿ ನಾವು ಪರಿಸ್ಥಿತಿ ಎದುರಿಸಿದ್ದೇವೆ. ಸರ್ಕಾರ, ನಿವೃತ್ತ ನ್ಯಾಯಾಧೀಶರಿಂದ ಮಧ್ಯಂತರ ವರದಿ ತರಿಸಿಕೊಂಡಿದೆ. ಅದಕ್ಕೆ ನನ್ನ ಸ್ವಾಗತವಿದೆ. ಈ ವರದಿಯನ್ನು ಅಧಿಕಾರಿಗಳ ಪರಿಶೀಲನೆಗೆ ಕೊಟ್ಟಿದ್ದಾರೆ. ಇದನ್ನೂ ನಾನು ಸ್ವಾಗತಿಸುತ್ತೇನೆಂದು ಹೇಳಿದರು.

ಕೋವಿಡ್‌ನ್ನು ಒಬ್ಬ ವ್ಯಕ್ತಿ ನಿರ್ವಹಿಸಿಲ್ಲ, ಇಡೀ ಸರ್ಕಾರ ಕೋವಿಡ್ ನಿರ್ವಹಣೆ ಮಾಡಿದೆ. ನಾವೆಲ್ಲರೂ ಎಲ್ಲೂ ಹೋಗುವುದಿಲ್ಲ. ನಾನು, ಬೊಮ್ಮಾಯಿ, ಯಡಿಯೂರಪ್ಪ ಮತ್ತು ಅಂದಿನ ಸಚಿವರೆಲ್ಲರೂ ಕೋವಿಡ್ ನಿರ್ವಹಿಸಿದ್ದೇವೆ.  ಅವರು ಸುಧಾಕರ್ ವಿರುದ್ಧ ತನಿಖೆ ಎಂದು ಹೇಳಿದ್ದಾರಾ? ಇಲ್ವಲ್ಲ. ನಾನು ಇನ್ನೂ ಮಧ್ಯಂತರ ವರದಿ ಓದಲಿಲ್ಲ. ಅಧಿಕಾರಿಗಳ ವ್ಯಾಖ್ಯಾನ ಏನು ಬರುತ್ತೆ ಎಂದು ಕಾದು ನೋಡೋಣ ಎಂದು ತಿಳಿಸಿದರು.

ಮುಡಾ/ವಾಲ್ಮೀಕಿ ಅಕ್ರಮಗಳ ಹಿನ್ನೆಲೆ ಕೋವಿಡ್ ಮೂಲಕ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಪ್ರಶ್ವೆಗೆ ಉತ್ತರಿಸಿ, ಇದರ ಬಗ್ಗೆ ನನಗೆ ಗೊತ್ತಿಲ್ಲ. ಇದಕ್ಕೆ ಉತ್ತರಿಸಲು ರಾಜ್ಯಾಧ್ಯಕ್ಷರಿದ್ದಾರೆ. ಪ್ರತಿಪಕ್ಷ ನಾಯಕರಿದ್ದಾರೆ. ಹೆಚ್.ಕೆ ಪಾಟೀಲ್‌ರ ಹೇಳಿಕೆಯನ್ನು ನಾನು ಗಮನಿಸಿಲ್ಲ. ಹೆಚ್.ಕೆ.ಪಾಟೀಲ್ ಹೇಳಿದಾಕ್ಷಣ ಎಲ್ಲವೂ ಮುಗಿಯುತ್ತಾ? ಅವರು ಸಚಿವ ಸಂಪುಟದ ವಕ್ತಾರರು ಅಷ್ಟೇ. ಅವರೇನು ನ್ಯಾಯಾಧೀಶರೇ? ಅವರು ವಕ್ತಾರರ ಕೆಲಸ ಮಾತ್ರ ಮಾಡಬೇಕೇ ಹೊರತು ನ್ಯಾಯಧೀಶರ ಕೆಲಸ ಯಾಕೆ ಮಾಡಬೇಕು ಎಂದು ಹೆಚ್.ಕೆ.ಪಾಟೀಲ್ ವಿರುದ್ಧ ಗರಂ ಆದರು.

ಎತ್ತಿನಹೊಳೆ ಯೋಜನೆ ಕುರಿತು ಮಾತನಾಡಿ, 2014 ರಲ್ಲಿ ಎತ್ತಿನಹೊಳೆ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ನನ್ನ ಅಧ್ಯಕ್ಷತೆಯಲ್ಲೇ ಶಂಕುಸ್ಥಾಪನೆ ಮಾಡಿದರು. ಇವತ್ತು ಯೋಜನೆಯ ಮೊದಲ ಹಂತದ ಉದ್ಘಾಟನಾ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನನಗೆ ವೈಯಕ್ತಿಕವಾಗಿ ಆಹ್ವಾನ ಕೊಟ್ಟಿದ್ದರು. ನಾನು ಅವರಿಗೆ ಆಭಾರಿ ಆಗಿರುತ್ತೇನೆ ಎಂದು ಹೇಳಿದರು.

Tags:    

Similar News