ದರ್ಶನ್ ಜೈಲು ಸ್ಥಳಾಂತರ ಅರ್ಜಿ ವಜಾ; ಕನಿಷ್ಠ ಸೌಲಭ್ಯಕ್ಕೆ ಕೋರ್ಟ್ ಅಸ್ತು

ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಸರ್ಕಾರ ಅರ್ಜಿ ಸಲ್ಲಿಸಿತ್ತು. ಸೆಲೆಬ್ರಿಟಿ ಆಗಿರುವುದರಿಂದ ಮತ್ತು ಈ ಹಿಂದೆ ಐಷಾರಾಮಿ ಸೌಲಭ್ಯ ಪಡೆದಿರುವುದರಿಂದ ಸ್ಥಳಾಂತರ ಮಾಡಲು ಅವಕಾಶ ನೀಡಬೇಕೆಂದು ಸರ್ಕಾರ ಮನವಿ ಮಾಡಿತ್ತು.;

Update: 2025-09-09 10:39 GMT

ನಟ ದರ್ಶನ್‌

Click the Play button to listen to article

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್ ಮತ್ತು ಇತರ ನಾಲ್ವರು ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬೇರೆ ಜೈಲಿಗೆ ಸ್ಥಳಾಂತರಿಸಬೇಕೆಂದು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು 64ನೇ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ. ಇದರೊಂದಿಗೆ, ಜೈಲು ನಿಯಮಗಳ (ಮ್ಯಾನುವಲ್) ಪ್ರಕಾರ ಆರೋಪಿಗಳಿಗೆ ಹಾಸಿಗೆ ಮತ್ತು ದಿಂಬು ಒದಗಿಸುವಂತೆ ನ್ಯಾಯಾಲಯವು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ.

ದರ್ಶನ್ ಸೆಲೆಬ್ರಿಟಿ ಆಗಿರುವ ಮತ್ತು ಈ ಹಿಂದೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯಗಳನ್ನು ಪಡೆದಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಅವರನ್ನು ಹಾಗೂ ಇತರ ನಾಲ್ವರು ಆರೋಪಿಗಳಾದ ಲಕ್ಷ್ಮಣ್, ನಾಗರಾಜ್, ಜಗದೀಶ್ ಮತ್ತು ಪ್ರದೂಷ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಸರ್ಕಾರವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ, ದರ್ಶನ್ ಪರ ವಕೀಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಬೆಂಗಳೂರಿನಲ್ಲೇ ಉಳಿಯಲು ಬಯಸಿದ್ದರು.

ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಧೀಶ ಐ.ಪಿ. ನಾಯಕ್ ಅವರು, ಸರ್ಕಾರದ ಸ್ಥಳಾಂತರ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ, ದರ್ಶನ್ ಮತ್ತು ಇತರರು ಪರಪ್ಪನ ಅಗ್ರಹಾರ ಜೈಲಿನಲ್ಲೇ ತಮ್ಮ ವಿಚಾರಣೆಯನ್ನು ಎದುರಿಸಲಿದ್ದಾರೆ.

ಇದೇ ವೇಳೆ, ಜೈಲಿನಲ್ಲಿ ಕನಿಷ್ಠ ಮೂಲಸೌಕರ್ಯಗಳ ಕೊರತೆಯಿಂದ ತೊಂದರೆಯಾಗುತ್ತಿದೆ ಎಂದು ದರ್ಶನ್ ಪರವಾಗಿ ಸಲ್ಲಿಸಲಾಗಿದ್ದ ಪ್ರತ್ಯೇಕ ಅರ್ಜಿಯನ್ನು ನ್ಯಾಯಾಲಯವು ಮಾನ್ಯ ಮಾಡಿದೆ. ಜೈಲಿನ ಸಂಕಷ್ಟಮಯ ಜೀವನದಿಂದ ಬಳಲುತ್ತಿದ್ದು, ಹಾಸಿಗೆ ಮತ್ತು ದಿಂಬಿನಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ದರ್ಶನ್ ಕೋರಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, "ಜೈಲು ಮ್ಯಾನುವಲ್ ಪ್ರಕಾರ ಆರೋಪಿಗೆ ಯಾವೆಲ್ಲಾ ಸೌಲಭ್ಯಗಳನ್ನು ನೀಡಬಹುದೋ, ಅವೆಲ್ಲವನ್ನೂ ಒದಗಿಸಿ" ಎಂದು ಜೈಲು ಆಡಳಿತಕ್ಕೆ ನಿರ್ದೇಶನ ನೀಡಿದೆ.

ವಿಷ ಕೊಡಿ ಎಂದು ಕಣ್ಣೀರು ಹಾಕಿದ್ದ ದರ್ಶನ್​

ಬೆಳಗ್ಗಿನ ಅವಧಿಯ ವಿಚಾರಣೆ ವೇಳೆ ನಟ ದರ್ಶನ್​, "ನಾನು ಹಲವು ದಿನಗಳಿಂದ ಬೆಳಕನ್ನೇ ನೋಡಿಲ್ಲ, ಬಟ್ಟೆಗಳಲ್ಲಿ ದುರ್ವಾಸನೆ ಬರುತ್ತಿದೆ, ಹಾಸಿಗೆ–ದಿಂಬು ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನನಗೆ ಬದುಕಲು ಸಾಧ್ಯವಿಲ್ಲ. ದಯವಿಟ್ಟು ನನ್ನೊಬ್ಬನಿಗೆ ವಿಷ ನೀಡಿ" ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದು, ಹೆಚ್ಚುವರಿ ದಿಂಬು ಹಾಗೂ ಬೇಡ್​​ಶೀಟ್​ ಕೇಳಿದ್ದರು. ಆದರೆ, ಜೈಲಿನಲ್ಲಿ ಈ ವ್ಯವಸ್ಥೆ ಕಲ್ಪಿಸಿರಲಿಲ್ಲ. ಅದಕ್ಕಾಗಿ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ದರ್ಶನ್ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಅರ್ಜಿ ವಿಚಾರಣೆಗೆ ಹಾಜರಾದ ದರ್ಶನ್ ಅವರು ನನ್ನದೊಂದು ಮನವಿ ಇದೆ ಎಂದು ಕೈ ಎತ್ತಿದರು. ನ್ಯಾಯಾಧೀಶರು ಅವಕಾಶ ನೀಡಿದಾಗ ಸಮಸ್ಯೆ ಹೇಳಿಕೊಂಡರು. ಈ ಹಿನ್ನೆಲೆಯಲ್ಲಿ ಅವರಿಗೆ ಮ್ಯಾನುಯಲ್ ಪ್ರಕಾರ ವ್ಯವಸ್ಥೆಗಳನ್ನು ಕಲ್ಪಿಸಲು ಕೋರ್ಟ್​ ಅವಕಾಶ ನೀಡಿದೆ.

Tags:    

Similar News