Bangalore Air Show | ಯಲಹಂಕ ಏರ್‌ ಶೋಗೆ ದಿನಗಣನೆ; ವಿಮಾನ ಹಾರಾಟದಲ್ಲಿ ವ್ಯತ್ಯಯ

ನಾಲ್ಕು ದಿನಗಳ ಕಾಲ ನಡೆಯುವ ಏರ್ ಶೋ ಪರಿಣಾಮ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನಗಳ ಕಾರ್ಯಾಚರಣೆಗೂ ಬಿಸಿ ತಟ್ಟಲಿದೆ.;

Update: 2025-01-28 14:44 GMT
ಏರ್‌ ಶೋ ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ಲೋಹದ ಹಕ್ಕಿಗಳ ಕಲರವಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೆ.10 ರಿಂದ 14 ರವರಗೆ ಯಲಹಂಕದ ವಾಯುನೆಲೆಯಲ್ಲಿ 15ನೇ ಆವೃತ್ತಿಯ ಏರ್ ಶೋ ನಡೆಯಲಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ನಾಲ್ಕು ದಿನಗಳ ಕಾಲ ನಡೆಯುವ ಏರ್ ಶೋ ಪರಿಣಾಮ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನಗಳ ಕಾರ್ಯಾಚರಣೆಗೂ ಬಿಸಿ ತಟ್ಟಲಿದೆ. ಏರ್ ಶೋ ಅವಧಿಯಲ್ಲಿ ಯಾವುದೇ ವಿಮಾನಗಳ ಟೇಕಾಫ್, ಲ್ಯಾಂಡಿಂಗ್ ಅವಕಾಶ ನಿರ್ಬಂಧಿಸಲಾಗಿದೆ. ದೇಶ-ವಿದೇಶಗಳಿಗೆ ತೆರಳುವ ಪ್ರಯಾಣಿಕರಿಗೆ ಈ ಅವಧಿಯಲ್ಲಿ ವಿಮಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಏರ್ ಶೋದಲ್ಲಿ ಭಾಗವಹಿಸುವ ವಾಯುಪಡೆ ವಿಮಾನಗಳ ಹಾರಾಟಕ್ಕೆ ಅಡಚಣೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಐಎಎಲ್ ತಿಳಿಸಿದೆ.

ಯಾವಾಗ ವಿಮಾನ ಸಂಚಾರ ಬಂದ್?

ಫೆ. 5 ರಿಂದ 8 ರವರೆಗೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12, ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ವಿಮಾನಗಳ ಹಾರಾಟ ನಿರ್ಬಂಧಿಸಲಾಗಿದೆ.

ಫೆ. 9 ರಂದು ಬೆಳಿಗ್ಗೆ 9 ರಿಂದ 12 ರವರೆಗೂ ವಿಮಾನಗಳ ಹಾರಾಟ ಇರುವುದಿಲ್ಲ. ಫೆ. 10 ರಂದು ಬೆಳಿಗ್ಗೆ 9 ರಿಂದ 12, ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ವಿಮಾನ ಕಾರ್ಯಾಚರಣೆ ಸ್ಥಗಿತವಾಗಲಿದೆ. ಫೆ. 11 ಮತ್ತು 12 ರಂದು ಮಧ್ಯಾಹ್ನ 12 ರಿಂದ 3 ರವರೆಗೆ ವಿಮಾನಗಳ ಹಾರಾಟ ನಿರ್ಬಂಧಿಸಲಾಗಿದೆ.

ಫೆ. 13 ಮತ್ತು 14 ರಂದು ಬೆಳಿಗ್ಗೆ 9 ರಿಂದ 12, ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ವಿಮಾನಗಳ ಕಾರ್ಯಾಚರಣೆ ಇರುವುದಿಲ್ಲ. ವಿಮಾನ ಪ್ರಯಾಣ ಮಾಡುವವರು ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳನ್ನು ಸಂಪರ್ಕಿಸಿ ಪ್ರಯಾಣ ಯೋಜಿಸುವಂತೆ ಸೂಚಿಸಿದೆ.

ಏಷ್ಯಾದ ಅತಿ ದೊಡ್ಡ ಏರ್ ಶೋ ವೀಕ್ಷಣೆಗೆ ದೇಶ-ವಿದೇಶಗಳಿಂದಲೂ ಗಣ್ಯರು, ಉದ್ಯಮಿಗಳು, ವಾಯುಪಡೆ ಸಿಬ್ಬಂದಿ ಆಗಮಿಸಲಿದ್ದಾರೆ.

ಏರ್ ಶೋ ವೀಕ್ಷಣೆಗೆ ಆಗಮಿಸುವವರಿಗಾಗಿ ಪಾರ್ಕಿಂಗ್ ವ್ಯವಸ್ಥೆ, ಉಚಿತ ಬಸ್ ವ್ಯವಸ್ಥೆಯನ್ನು ವಾಯುಪಡೆ ವತಿಯಿಂದ ಮಾಡಲಾಗುತ್ತಿದೆ.

ಮಾಂಸ ಮಾರಾಟ ಬಂದ್

ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಡೆಯುವ ಹಿನ್ನೆಲೆಯಲ್ಲಿ 14 ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ಬಿಬಿಎಂಪಿ ನಿಷೇಧಿಸಿದೆ. ಫೆ.10 ರಿಂದ 14 ರವರೆಗೆ ವಾಯುನೆಲೆಯಲ್ಲಿ ವಿಮಾನಗಳ ಪೂರ್ವಭಾವಿ ಅಭ್ಯಾಸ ನಡೆಯುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. ಜ. 23 ರಿಂದ ಫೆ.17ರ ವರೆಗೆ ವಾಯುನೆಲೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾಂಸ ಮಾರಾಟದ ಉದ್ದಿಮೆ, ಹೋಟೆಲ್ ಮತ್ತು ಡಾಬಾಗಳಲ್ಲಿ ಮಾಂಸಾಹಾರ ಮಾರಾಟ ನಿಷೇಧಿಸಿ ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್ ಆದೇಶಿಸಿದ್ದಾರೆ.

ಡಾಬಾ ಹಾಗೂ ಹೋಟೆಲ್ಗಳು ನಿಯಮ ಉಲ್ಲಂಘಿಸಿ ಮಾಂಸಾಹಾರ ಮಾರಾಟ ಮಾಡಿದರೆ ಬಿಬಿಎಂಪಿ ಕಾಯ್ದೆ 2020 , ಏರ್ ಕ್ರಾಫ್ಟ್ ರೂಲ್ಸ್ 1937ರ ರೂಲ್ 91 ಹಾಗೂ ಇತರ ಕಾನೂನು ರೀತಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮಾಂಸಾಹಾರದಿಂದಾಗಿ ಪಕ್ಷಿಗಳು ಬರಲಿದ್ದು, ವಿಮಾನ ಹಾರಾಟಕ್ಕೆ ಸಮಸ್ಯೆ ತಂದೊಡ್ಡಲಿವೆ ಎಂಬ ಆತಂಕದ ಹಿನ್ನೆಲೆಯಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದೆ.

ಇನ್ನು ವಾಯುನೆಲೆ ಸುತ್ತಲಿನ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲಿನ ಕ್ರೇನ್ಗಳ ಎತ್ತರವನ್ನೂ ತಗ್ಗಿಸುವಂತೆ ಬಿಬಿಎಂಪಿ ಆದೇಶಿಸಿದೆ.

Tags:    

Similar News